ಕಲಬುರಗಿ: ಉತ್ತರ ಒಳನಾಡಿನಲ್ಲಿ ಮಳೆಯು (Karnataka Rain) ಅಬ್ಬರಿಸುತ್ತಿದ್ದು, ಧಾರಾಕಾರವಾಗಿ ಸುರಿದ ಮಳೆಗೆ ಮನೆ ಗೋಡೆ ಕುಸಿದು ಸ್ಥಳದಲ್ಲೆ ವ್ಯಕ್ತಿಯೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕುರುಕುಂಟಾ ಗ್ರಾಮದಲ್ಲಿ ಘಟನೆ ನಡೆದಿದೆ. ರಾಜೇಂದ್ರ ಪಾಟೀಲ್ (62) ಮೃತ ದುದೈವಿ.
ರಾಜೋಳ ಗ್ರಾಮದಿಂದ ಮಗಳ ಮನೆ ಕುರುಕುಂಟಾ ಗ್ರಾಮಕ್ಕೆ ತೆರಳಿದ್ದರು. ಮನೆಯಲ್ಲಿ ಮಲಗಿದ್ದ ವೇಳೆ ಗೋಡೆ ಕುಸಿದಿದೆ. ಪರಿಣಾಮ ರಾಜೇಂದ್ರ ಅವರು ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ. ಕುರುಕುಂಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸಿಡಿಲು ಬಡಿದು ಮೂವರು ಸಾವು
ಯಾದಗಿರಿ ಜಿಲ್ಲೆಯಾದ್ಯಂತ ಗುಡುಗು ಸಹಿತ ಭಾರಿ ಮಳೆಯಾಗಿದೆ. ಸಿಡಿಲು ಬಡಿದು ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರು ಸಹೋದರರು ಹಾಗೂ ಸಹೋದರಿ ದುರ್ಮರಣ ಹೊಂದಿದ್ದಾರೆ. ಯಾದಗಿರಿ ತಾಲೂಕಿನ ಜೀನಕೇರಾ ತಾಂಡದಲ್ಲಿ ಘಟನೆ ನಡೆದಿದೆ. ಜಮೀನಿನಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ನಾಮು ಜಾಧವ್ (30), ಸುಮಿ ಬಾಯಿ (25) ,ನೇನು ಜಾಧವ್ (18) ಮೃತ ದುರ್ದೈವಿಗಳು. ಮೃತರು ಜೀನಕೇರಾ ತಾಂಡದ ನಿವಾಸಿಗಳಾಗಿದ್ದಾರೆ. ಉಳಿದ ಮೂವರಿಗೆ ಗಾಯವಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಯಾದಗಿರಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸಿಡಿಲು ಬಡಿದು ತೀವ್ರ ಅಸ್ವಸ್ಥಗೊಂಡ ಬಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮೃತಪಟ್ಟಿದ್ದಾನೆ. ಈ ಮೂಲಕ ಸಾವಿನ ಸಂಖ್ಯೆ 4ಕ್ಕೆ ಏರಿಕೆ ಆಗಿದೆ.
ಗದಗದಲ್ಲಿ ಸಿಡಿಲು ಬಡಿದು ಕುರಿಗಳು ಸಾವು
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಮಳೆ ಜತೆಗೆ ಸಿಡಿಲು ಬಡಿದು ಕುರಿಗಳು ಮೃತಪಟ್ಟಿವೆ. ನಿಪ್ಪಾಣಿ ಮೂಲದ ಕುರಿಗಾಹಿಗೆ ಸೇರಿದ ನಾಲ್ಕು ಕುರಿಗಳು ಮೃತಪಟ್ಟಿವೆ. ಮಳೆಗಾಲದಲ್ಲಿ ತಮ್ಮ ಕುರಿಗಳನ್ನು ಮೇಯಿಸುತ್ತಾ ಸಂಚಾರ ಮಾಡುವ ಕುರಿಗಾಹಿಗಳು, ನಿನ್ನೆ ರಾತ್ರಿ ಗ್ರಾಮದ ಹೊರವಲಯದಲ್ಲಿ ತಂಗಿದ್ದರು. ನಿನ್ನೆ ರಾತ್ರಿ ಸುರಿದ ಭಾರಿ ಮಳೆ ವೇಳೆ ಸಿಡಿಲು ಬಡಿದು ಕುರಿಗಳು ಮೃತಪಟ್ಟಿವೆ. ಕುರಿಗಾಹಿಗಳಿಗೆ ಪಶು ಸಂಗೋಪನಾ ಇಲಾಖೆ ಪರಿಹಾರ ನೀಡಲಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: Drowned In Water : ಬೆಂಗಳೂರಿನಲ್ಲಿ ರೀಲ್ಸ್ ಮಾಡಲು ಕೆರೆಗೆ ಹಾರಿದವನು ನಾಪತ್ತೆ! ಮೈಸೂರಿನಲ್ಲಿ ನದಿಗೆ ಜಿಗಿದು ಯುವಕ ಸೂಸೈಡ್
ಸಿಡಿಲಿಗೆ ರೈತ ಬಲಿ
ಧಾರವಾಡ ಜಿಲ್ಲೆಯಲ್ಲಿ ಸಿಡಿಲಿನ ಹೊಡೆತಕ್ಕೆ ರೈತರೊಬ್ಬರು ಬಲಿಯಾಗಿದ್ದಾರೆ. ಧಾರವಾಡ ತಾಲೂಕಿನ ಹನುಮನಾಳ ಗ್ರಾಮದ ರೈತ ಭೀಮನಗೌಡ ಪಾಟೀಲ(65)ಮೃತ ದುರ್ದೈವಿ. ಹೊಲದಿಂದ ಮನೆಗೆ ಬರುವಾಗ ಸಿಡಿಲು ಬಡಿದು ಭೀಮನಗೌಡ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಗರಗ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಾಗಿದೆ.
ತುಮಕೂರಿನಲ್ಲಿ ಕೆರೆಯಂತಾದ ಶಾಲಾ ಮೈದಾನ
ಸರ್ಕಾರಿ ಶಾಲಾ ಮೈದಾನವು ಮಳೆಯಿಂದ ಜಲಾವೃತಗೊಂಡಿದೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಸರ್ಕಾರಿ ಶಾಲೆಯಲ್ಲಿ ಘಟನೆ ನಡೆದಿದೆ. ಕಳೆದ ರಾತ್ರಿ ಸುರಿದ ಮಳೆಯಿಂದಾಗಿ ಶಾಲಾ ಮೈದಾನ ಜಲಾವೃತಗೊಂಡಿದೆ. ಮೈದಾನದಿಂದ ಸರಾಗವಾಗಿ ನೀರು ಹರಿದುಹೋಗಲು ವ್ಯವಸ್ಥೆ ಇಲ್ಲದಿರುವುದೇ ಕಾರಣವಾಗಿದೆ. ಮೈದಾನ ಜಲಾವೃತದಿಂದಾಗಿ ಮಕ್ಕಳು ಪರದಾಡಬೇಕಾಯಿತು. ನೀರು ಸರಾಗವಾಗಿ ಹರಿಯುವಂತೆ ಚರಂಡಿ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದರು.
ಕೊಪ್ಪಳ, ದಾವಣಗೆರೆಯಲ್ಲೂ ಅಬ್ಬರಿಸಿದ ಮಳೆ
ಬೆಣ್ಣೆ ನಗರಿ ದಾವಣಗೆರೆಯಲ್ಲಿ ಒಂದು ಗಂಟೆಗೂ ಹೆಚ್ಚು ಸಮಯ ಧಾರಾಕಾರ ಮಳೆಯಾಗಿದೆ. ನಿರಂತರ ಮಳೆಯಿಂದ ರಸ್ತೆಗಳಿಗೆ ನೀರು ನುಗ್ಗಿದ್ದರಿಂದ ವಾಹನ ಸವಾರರು ಪರದಾಡಬೇಕಾಯಿತು. ಕೊಪ್ಪಳದಲ್ಲೂ ಭರ್ಜರಿ ಮಳೆಯಾಗಿದೆ. ಕಳೆದ ಒಂದು ತಿಂಗಳಿನಿಂದ ಬಿಡುವು ನೀಡಿದ್ದ ಮಳೆರಾಯ ಮತ್ತೆ ಅಬ್ಬರಿಸಿದ್ದ. ಕೊಪ್ಪಳ ನಗರ ಸೇರಿದಂತೆ ಸುತ್ತಮುತ್ತ ಗುಡುಗು, ಮಿಂಚಿನ ಮಳೆಯಾಗಿದೆ. ರೈತರಿಗೆ ಈಗ ಮಳೆ ಅವಶ್ಯವಾಗಿತ್ತು. ಮಳೆ ಸುರಿದಿದ್ದರಿಂದ ರೈತರು ಖುಷಿಗೊಂಡರು. ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ