Site icon Vistara News

Medical Negligence : ಒಟ್ಟೊಟ್ಟಿಗೆ ಕೊಟ್ರು ಮೂರು ಇಂಜೆಕ್ಷನ್‌; ಬಾಯಲ್ಲಿ ನೊರೆ ಬಂದು ಮಗು ಸಾವು

Child dies due to lack of timely treatment

ಕಲಬುರಗಿ : ವೈದ್ಯರ ನಿರ್ಲಕ್ಷ್ಯಕ್ಕೆ ಎರಡುವರೆ ವರ್ಷದ ಗಂಡು ಮಗು ಮೃತಪಟ್ಟಿದೆ ಎಂಬ ಆರೋಪ (Medical Negligence) ಕೇಳಿ ಬಂದಿದೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಮಾದಾಬಾಳ್ ತಾಂಡಾ ನಿವಾಸಿ ಆಯುಷ್ (2) ಮೃತ ಮಗು.

ಅಫಜಲಪುರ ತಾಲೂಕಿನ ಮಾದಬಾಳ ತಾಂಡದ ನಿವಾಸಿ‌ ಶಿವಾಜಿ ರಾಠೋಡ್ ಅವರ ಮಗ ಆಯುಷ್‌ಗೆ ಆಶಾ ಕಾರ್ಯಕರ್ತರು ನಿನ್ನೆ ಭಾನುವಾರ ಒಟ್ಟೊಟ್ಟಿಗೆ ಲಸಿಕೆಯ ಇಂಜೆಕ್ಷನ್‌ ಕೊಟ್ಟಿದ್ದಾರೆ. ಮಗುವಿಗೆ ಏನಾದರೂ ರಾತ್ರಿ ಜ್ವರ ಬಂದರೆ ಔಷಧಿ ಕೊಡಿ ಎಂದು ಕಳಿಸಿದ್ದಾರೆ. ರಾತ್ರಿ ಆಗುತ್ತಿದ್ದಂತೆ ಮಗುವಿಗೆ ವಿಪರೀತ ಜ್ವರ ಕಾಣಿಸಿಕೊಂಡಿದೆ. ಜತೆಗೆ ಬಾಯಿಯಿಂದ ನೊರೆ ಬಂದಿದೆ.

ಹೀಗಾಗಿ ಆತಂಕಗೊಂಡ ಪೋಷಕರು ಕೂಡಲೇ ಅಫಜಲಪುರದ ಸರ್ಕಾರಿ‌ ಆಸ್ಪತ್ರೆಗೆ ಮಗುವನ್ನು ಕರೆತಂದಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಡ್ಯೂಟಿ ಡಾಕ್ಟರ್ಸ್‌ ಇಲ್ಲದೇ ಒಂದು ಗಂಟೆಗೂ ಹೆಚ್ಚು ಸಮಯ ಅಲೆದಾಡಿದ್ದಾರೆ. ಸಿಗದೇ ಇದ್ದಾಗ ನೇರವಾಗಿ ವೈದ್ಯರ ಮನೆಗೆ ಮಗುವನ್ನು ಕರೆದುಹೋಗಿದ್ದಾರೆ. ಮನೆಗೆ ಬಂದಿದ್ದಕ್ಕೆ ಸಿಟ್ಟಾದ ವೈದ್ಯ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಇತ್ತ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ಮಗುವು ಮೃತಪಟ್ಟಿತ್ತು. ಒಟ್ಟೊಟ್ಟಿಗೆ ಇಂಜೆಕ್ಷನ್‌ ಕೊಟ್ಟಿದ್ದು ಹಾಗೂ ಆಸ್ಪತ್ರೆಗೆ ಬಂದಾಗ ವೈದ್ಯರು ಇಲ್ಲದೇ ಸೂಕ್ತ ಚಿಕಿತ್ಸೆ ಸಿಗದ ಕಾರಣಕ್ಕೆ ಮಗು ಮೃತಪಟ್ಟಿದೆ ಎಂದು ಪೋಷಕರು ಆರೋಪಿಸಿದ್ದರು.

Child dies due to lack of timely treatment

ಶವವಿಟ್ಟು ಪ್ರತಿಭಟನೆ

ತಡರಾತ್ರಿಯೇ ಆಸ್ಪತ್ರೆ ಮುಂಭಾಗ ಮಗುವಿನ ಶವ ಇಟ್ಟು ಪ್ರತಿಭಟನೆ ನಡೆಸಿದರು. ಸರ್ಕಾರಿ ಆಸ್ಪತ್ರೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾದ ಕಾರಣಕ್ಕೆ ಸ್ಥಳಕ್ಕೆ ಅಫಜಲಪುರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಪೋಷಕರ ಮನವೊಲಿಸಲು ಮುಂದಾದರು. ಆದರೆ ಸ್ಥಳಕ್ಕೆ ಡಿಹೆಚ್ಓ ಹಾಗೂ ಟಿಹೆಚ್ಓ ಆಗಮಿಸುವಂತೆ ಒತ್ತಾಯಿಸಿದ್ದರು. ಇನ್ನು ಆಸ್ಪತ್ರೆ ಬಳಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಚೆನ್ನಾಗಿದ್ದ ಮಗುವಿಗೆ ಲಸಿಕೆ ಕೊಟ್ಟು ಸಾಯಿಸಿಬಿಟ್ಟರು ಎಂದು ಗೋಳಾಡಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version