ಕಲಬುರಗಿ: ಜಿಲ್ಲೆಯ ಕಮಲಾಪುರ ಹೊರ ವಲಯದಲ್ಲಿ ಖಾಸಗಿ ಸ್ಲೀಪರ್ ಬಸ್ ಮತ್ತು ಟೆಂಪೊ ನಡುವೆ ಶುಕ್ರವಾರ ಬೆಳಗ್ಗೆ 6.30ಕ್ಕೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಬಸ್ ಹೊತ್ತಿ ಉರಿದು ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಏಳಕ್ಕೆ ಏರಿದೆ. ಗಾಯಗೊಂಡಿದ್ದ ಮತ್ತೊಬ್ಬ ಪ್ರಯಾಣಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಅಪಘಾತದ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ʼಕಲಬುರಗಿ ಜಿಲ್ಲೆಯಲ್ಲಿ ಸಂಭವಿಸಿದ ದುರ್ಘಟನೆಯಿಂದ ದುಃಖವಾಗಿದೆ. ಈ ದುರಂತದಿಂದ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡವರ ನೋವು ನನಗೆ ಅರ್ಥವಾಗುತ್ತದೆ. ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ. ಸ್ಥಳಿಯ ಆಡಳಿತವು ಸಂತ್ರಸ್ತರಿಗೆ ನೆರವು ನೀಡುತ್ತದೆʼ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ | ಡಿಕ್ಕಿ ರಭಸಕ್ಕೆ ಹೊತ್ತಿ ಉರಿದ ಬಸ್, 6 ಪ್ರಯಾಣಿಕರ ಸಜೀವ ದಹನ
ಸಿ ಎಂ ಬೊಮ್ಮಾಯಿ, ʼಕಲಬುರಗಿ ಹೊರವಲಯ ಕಮಲಾಪುರ ಭೀಕರ ಅಪಘಾತ ನಡೆದು ಬಸ್ ನಲ್ಲಿದ್ದ 7 ಪ್ರಯಾಣಿಕರು ಸಜೀವ ದಹನರಾಗಿ ಹಲವರು ಗಾಯಗೊಂಡಿರುವ ವಿಷಯ ತಿಳಿದು ದುಃಖಿತವಾಗಿದ್ದೇನೆʼ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.
ಆರೇಂಜ್ ಟೂರ‍್ಸ್ ಆಂಡ್ ಟ್ರಾವೆಲ್ಸ್ ಗೆ ಸೇರಿದ ಖಾಸಗಿ ಬಸ್ ಗೋವಾದಿಂದ ಹೈದರಾಬಾದ್‌ಗೆ ತೆರಳುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಟೆಂಪೊ ಅಪ್ಪಳಿಸಿ ಈ ದುರ್ಘಟನೆ ಸಂಭವಿಸಿದೆ. ಬಸ್‌ನಲ್ಲಿ ಒಟ್ಟು 35 ಜನರಿದ್ದರು ಎನ್ನಲಾಗಿದೆ. ಈ ಪೈಕಿ 22 ಪ್ರಯಾಣಿಕರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಖಾಮುಖಿ ಡಿಕ್ಕಿ ನಂತರ ಬಸ್ ಪಕ್ಕದ ಸೇತುವೆಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ನಂತರ ಬೆಂಕಿ ಹೊತ್ತಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದರು.
ಇದನ್ನೂ ಓದಿ | ಕಟ್ಟಕಡೆಯ ವ್ಯಕ್ತಿಗಾಗಿ ಮಿಡಿಯುವ ಹೃದಯ ಶ್ರೀಮಂತಿಕೆ ಮೋದಿಯವರದ್ದು: CM ಬೊಮ್ಮಾಯಿ