Site icon Vistara News

Murder Case : ಮೊಮ್ಮಗನಿಂದಲೇ ತಾತನ ಬರ್ಬರ ಹತ್ಯೆ!

Sidhramappa

ಕಲಬುರಗಿ: ಮಾತಿನಲ್ಲಿ ಬಗೆಹರಿಸಿಕೊಳ್ಳಬಹುದಾದ ವಿಷಯಕ್ಕೆಲ್ಲ ಕೊಲೆ ಮಾಡುವ ಹಂತಕ್ಕೆ ಜನರ ಮನಸ್ಥಿತಿ ತಲುಪಿದೆ. ಕ್ಷುಲ್ಲಕ ಕಾರಣಕ್ಕೆ ಮೊಮ್ಮಗನೊಬ್ಬ ತಾತನಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ (Murder case) ಮಾಡಿದ್ದಾನೆ. ಸಿದ್ರಾಮಪ್ಪ ಕಾಮನ್ (75) ಹತ್ಯೆಯಾದವರು. ಆಕಾಶ್ ಕಾಮನ್ ಕೊಲೆ ಆರೋಪಿ ಆಗಿದ್ದಾನೆ.

ಕಲಬುರಗಿ ಜಿಲ್ಲೆಯ ಜವಳಗಾ ಬಿ ಗ್ರಾಮದ ನಿವಾಸಿ ಸಿದ್ರಾಮಪ್ಪ ತನ್ನ ಮೊಮ್ಮಗ ಆಕಾಶ್‌ನಿಂದಲೇ ಹತ್ಯೆಯಾಗಿದ್ದಾರೆ. ಹತ್ಯೆಗೆ ಕಾರಣವಾಗಿದ್ದು ಸಿದ್ರಾಮಪ್ಪನವರ ಬೈಗುಳ. ನಿನ್ನೆ ಸೋಮವಾರ ಸಿದ್ರಾಮಪ್ಪ ಅವರ ಸಹೋದರಿ ಮೃತಪಟ್ಟಿದ್ದರು. ಹೀಗಾಗಿ ಸಿದ್ರಾಮಪ್ಪ ಹಾಗೂ ಆಕಾಶ್‌ ತಾಯಿ ಸರೋಜಾ ಅವರು ಕಲಬುರಗಿ ತಾಲೂಕಿನ ಕುಮಿಸಿ ಗ್ರಾಮಕ್ಕೆ ತೆರಳಿದ್ದರು.

ಸಹೋದರಿಯ ಅಂತಿಮ ದರ್ಶನ ಮುಗಿಸಿ ಮನೆಗೆ ಕ್ರೂಸರ್‌ನಲ್ಲಿ ವಾಪಸ್‌ ಆಗುವಾಗ, ಸರೋಜಾ ಅವರು ಸಿದ್ರಾಮಪ್ಪನವರಿಗೆ ಗಾಡಿಯ ಮೇಲೆ ಕೂರುವಂತೆ ಹೇಳಿದ್ದಾರೆ. ಈ ವೇಳೆ ವಯಸ್ಸಾದವನಿಗೆ ಗಾಡಿಯ ಮೇಲೆ ಕೂರುವಂತೆ ಹೇಳುತ್ತಿದ್ಯಲ್ಲ ಎಂದು ಸರೋಜಾಗೆ ಸಿದ್ರಾಮಪ್ಪ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಮನೆಗೆ ವಾಪಸ್‌ ಆದ ಸರೋಜಾ ಅಜ್ಜ ಬೈದಿರುವ ವಿಚಾರವನ್ನು ಮಗ ಆಕಾಶ್‌ಗೆ ಹೇಳಿದ್ದಾರೆ. ಅಜ್ಜ ತಾಯಿಗೆ ಅವಾಚ್ಯ ಶಬ್ದಗಳಿಂದ ಎಲ್ಲರ ಮುಂದೆ ನಿಂದಿಸಿದಕ್ಕೆ ರೊಚ್ಚಿಗೆದ್ದ ಆಕಾಶ್‌ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದ ವೃದ್ಧ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನರೋಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ. ನರೋಣಾ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಆರೋಪಿ ಆಕಾಶ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಯುವಕನ ಕೊಚ್ಚಿ ಕೊಲೆ

ಮಂಡ್ಯ: ಕುತ್ತಿಗೆಗೆ ಹಗ್ಗದಿಂದ ಬಿಗಿದು, ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನೊಬ್ಬನನ್ನು ಕೊಲೆ (Murder Case) ಮಾಡಲಾಗಿದೆ. ಮಂಡ್ಯ ಜಿಲ್ಲೆ (Mandya news) ಮದ್ದೂರು ತಾಲೂಕಿನ ಕುದುರಗುಂಡಿ ಗ್ರಾಮದಲ್ಲಿ ಘಟನೆ ನಡೆದಿದೆ.

ಶಿವಾನಂದ (19) ಮೃತ ಯುವಕ. ಆತನ ಮನೆಯಲ್ಲಿಯೇ ಯುವಕನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಎಳನೀರು ವ್ಯಾಪಾರ ಮಾಡುತ್ತಿದ್ದ ಯುವಕನ ಮನೆಯಲ್ಲೇ ತಡರಾತ್ರಿ ಹತ್ಯೆ ನಡೆದಿದೆ. ಯುವಕನೂ ಭಾಗಿಯಾಗಿರುವ ಅನೈತಿಕ ಸಂಬಂಧವೊಂದರ (Illicit relationship) ಹಿನ್ನೆಲೆಯಲ್ಲಿ ಹತ್ಯೆ ನಡೆದಿದೆ ಎಂಬ ಶಂಕೆಯಿದೆ.

ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಕೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version