ಕಲಬುರಗಿ : ಕಾಂಗ್ರೆಸ್ ಮತ್ತು ಭ್ರಷ್ಟಾಚಾರವನ್ನು ಬೇರೆ ಬೇರೆ ಮಾಡಲು ಸಾಧ್ಯವೇ ಇಲ್ಲ. ಕಾಂಗ್ರೆಸ್‌ಗೆ ಭ್ರಷ್ಟಾಚಾರವೇ ಉಸಿರು. ಅದಿಲ್ಲದೆ ಒಂದು ಕ್ಷಣವೂ ಅದು ಬದುಕದು. ಕಾಂಗ್ರೆಸ್ ಕರ್ನಾಟಕವನ್ನು ಫ್ಯಾಮಿಲಿ ಎಟಿಎಂ ಮಾಡಿಕೊಂಡಿದೆ. ಕರ್ನಾಟಕದ ನಾಯಕರು ಕೆಲವರು ತಿಜೋರಿ ತುಂಬಲು, ಜೇಬು ತುಂಬಲು ಪ್ರಯತ್ನಿಸುತ್ತಿದ್ದಾರೆ. ಈಗ ಭ್ರಷ್ಟಾಚಾರದ ಉಸಿರನ್ನು ನಿಲ್ಲಿಸಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ (Lok sabha Election 2024) 400 ಸ್ಥಾನಗಳ ಗುರಿ ಹೊತ್ತುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಕರ್ನಾಟಕದ ಚುನಾವಣಾ ಅಖಾಡಕ್ಕೆ ಕಲಬುರಗಿ ಮೂಲಕ ಎಂಟ್ರಿ ಕೊಟ್ಟು ಬೃಹತ್ ಸಮಾವೇಶದಲ್ಲಿ ಮಾತನಾಡಿದರು.
ಕಲಬುರಗಿಯ ಎನ್.ವಿ. ಆಟದ ಮೈದಾನದಲ್ಲಿ (Kalaburagi Samavesha) ನಡೆದ ಬೃಹತ್ ಸಮಾವೇಶದಲ್ಲಿ ಮಾನಾಡಿದ ಅವರು ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
ದಕ್ಷಿಣದಲ್ಲೂ ಬಿಜೆಪಿಗೆ ಭರ್ಜರಿ ಜನ ಬೆಂಬಲ
ಕಳೆದ ಎರಡು ದಿನಗಳಿಂದ ನಾಲ್ಕು ದಕ್ಷಿಣ ಭಾರತದಲ್ಲಿದ್ದೇನೆ. ಅದಕ್ಕಿಂತ ಮೊದಲು ಕಾಶ್ಮೀರದಲ್ಲಿದ್ದೆ. ಅಲ್ಲಿನ ಕಾರ್ಯಕ್ರಮವನ್ನು ನೋಡಿದ ಬಳಿಕ 1988ರ ಬಳಿಕ ಕಾಶ್ಮೀರದಲ್ಲಿ ಇಷ್ಟು ದೊಡ್ಡ ರ‍್ಯಾಲಿ ನಡೆದಿಲ್ಲ ಎಂದು ಅಲ್ಲಿನ ಮಾಧ್ಯಮದವರು ಹೇಳಿದರು. ನನಗೆ ಸ್ಪಷ್ಟವಾಗಿದೆ. ಇಡೀ ದೇಶ ಬಿಜೆಪಿ ಪರವಾಗಿ ಎದ್ದು ನಿಂತಿದೆ. ದಕ್ಷಿಣದಲ್ಲಿ ಬಿಜೆಪಿಗೆ ದೊಡ್ಡ ಮಟ್ಟದ ಬೆಂಬಲ ದೊರೆಯುತ್ತಿದೆ. ಇದನ್ನು ನೋಡಿದ ವಿರೋಧಿಗಳು ಕೂಡಾ ಅಬ್ ಕಿ ಬಾರ್ ಬಿಜೆಪಿ ಸರ್ಕಾರ್ ಎಂದು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಎಷ್ಟೇ ಬದಲಿಸಿದರೂ ಕಾಣುವುದು ಕೊಳಕೇ!
ಕಾಂಗ್ರೆಸ್‌ನವರು ಏನೇ ಮಾಡಿದರೂ, ಎಷ್ಟೇ ಬಟ್ಟೆ ಬದಲಾಯಿಸಿದರೂ ಅವರ ಕೊಳಕೇ ಎದ್ದು ಕಾಣುತ್ತದೆ. ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರ ಇಷ್ಟು ಸಣ್ಣ ಅವಧಿಯಲ್ಲೇ ಜನರ ಆಕ್ರೋಶಕ್ಕೆ ಗುರಿಯಾಗಿದೆ. ಇಷ್ಟು ಕಡಿಮೆ ಅವಧಿಯಲ್ಲಿ ಈ ರೀತಿ ಜನಾಕ್ರೋಶಕ್ಕೆ ಗುರಿಯಾದ ಬೇರೆ ಸರ್ಕಾರ ಇಲ್ಲ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸರಿ ಇಲ್ಲ. ಜನರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಆದರೆ, ಕಾಂಗ್ರೆಸ್ ನಾಯಕರು ಮಜಾ ಉಡಾಯಿಸುತ್ತಿದ್ದಾರೆ.
ಕಾಂಗ್ರೆಸ್ ಗೆ ಭ್ರಷ್ಟಾಚಾರವೇ ಆಕ್ಸಿಜನ್
ಕಾಂಗ್ರೆಸ್ ಮತ್ತು ಭ್ರಷ್ಟಾಚಾರವನ್ನು ಬೇರೆ ಬೇರೆ ಮಾಡಲು ಸಾಧ್ಯವೇ ಇಲ್ಲ. ಕಾಂಗ್ರೆಸ್‌ಗೆ ಭ್ರಷ್ಟಾಚಾರವೇ ಉಸಿರು. ಅದಿಲ್ಲದೆ ಒಂದು ಕ್ಷಣವೂ ಅದು ಬದುಕದು. ಕಾಂಗ್ರೆಸ್ ಕರ್ನಾಟಕವನ್ನು ಫ್ಯಾಮಿಲಿ ಎಟಿಎಂ ಮಾಡಿಕೊಂಡಿದೆ. ಕರ್ನಾಟಕದ ನಾಯಕರು ಕೆಲವರು ತಿಜೋರಿ ತುಂಬಲು, ಜೇಬು ತುಂಬಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.
ಕರೆಂಟೇ ಇಲ್ಲ, ಇನ್ನೆಲ್ಲಿ ಉಚಿತ: ಕಾಂಗ್ರೆಸ್ ಗ್ಯಾರಂಟಿಗಳನ್ನು ಗೇಲಿ ಮಾಡಿದ ಮೋದಿ
ಕಾಂಗ್ರೆಸ್ ಚುನಾವಣೆಯಲ್ಲಿ ನೀಡಿದ ಗ್ಯಾರಂಟಿಗಳನ್ನು ಪೂರೈಸುವುದು ಬಿಡಿ ಇನ್ನಷ್ಟು ಕಷ್ಟಗಳೇ ಎದುರಾಗಿದೆ. ರಾಜ್ಯದಲ್ಲಿ ಉಚಿತ ವಿದ್ಯುತ್ ಕೊಡುತ್ತೇವೆ ಎಂದರು. ಆದರೆ, ಕರೆಂಟೇ ಕೊಡುತ್ತಿಲ್ಲ. ಕರೆಂಟೇ ಕೊಡದಿದ್ದ ಮೇಲೆ ಉಚಿತ ಕೊಟ್ಟು ಏನು ಪ್ರಯೋಜನ ಎಂದು ರೈತರು ಕೇಳುತ್ತಿದ್ದಾರೆ.
ಹಿಂದೆ ಬಿಜೆಪಿ ಕಾಲದಲ್ಲಿ ರಾಜ್ಯ ಸರ್ಕಾರ ರೈತರಿಗೆ ಕೇಂದ್ರದ ರೈತ ಸಮ್ಮಾನ್ ನಿಧಿಯಾದ 6000 ರೂ. ಜತೆಗೆ 4000 ರೂ. ಹೆಚ್ಚುವರಿಯಾಗಿ ಹಣ ಕೊಡುತ್ತಿತ್ತು. ಆದರೆ ಈಗ ಅದನ್ನು ಕತ್ತರಿಸಲಾಗಿದೆ.
ಈಗ ರಾಜ್ಯ ಸರ್ಕಾರದ ಬಳಿ ಯಾವುದೇ ಯೋಜನೆಗೆ ದುಡ್ಡಿಲ್ಲ. ಶಾಸಕರು ಕೇಳಿದರೆ ಕೈ ಮೇಲೆತ್ತಿ ನಮ್ಮ ಬಳಿ ಏನೂ ಇಲ್ಲ ಎನ್ನುತ್ತಿದ್ದಾರೆ. ಇಂಥ ಸರ್ಕಾರದಿಂದ ರಾಜ್ಯ ಅಭಿವೃದ್ಧಿಯಾಗಬಹುದೇ? ಈಗ ರಾಜ್ಯ ಸರ್ಕಾರಕ್ಕೆ ಇರುವುದು ಒಂದೇ ಅಜೆಂಡಾ.. ಎಷ್ಟು ಲೂಟಿ ಮಾಡಬುದೋ ಅಷ್ಟು ಲೂಟಿ ಮಾಡಿ. ನೀವು ಅದಕ್ಕೆ ಅವಕಾಶ ಮಾಡಿಕೊಡುತ್ತೀರಾ? ಎಂದು ಪ್ರಶ್ನಿಸಿದರು.
ನಮಗೆ ಪೂರ್ಣಾವಕಾಶ ಕೊಡಿ, ದಿಲ್ಲಿಯಿಂದಲೇ ಕಣ್ಗಾವಲು ಇಡುತ್ತೇವೆ
ಕರ್ನಾಟಕವನ್ನು ರಕ್ಷಿಸುವ ನಿಟ್ಟಿನಲ್ಲಿ ಈಗ ನಿಮ್ಮ ಕೈಯಲ್ಲಿ ಒಂದು ಅವಕಾಶವಿದೆ. ಅದೇನೆಂದರೆ ನೀವು ಬಿಜೆಪಿ ಸಂಸದರನ್ನು ಆಯ್ಕೆ ಮಾಡುವ ಮೂಲಕ ದಿಲ್ಲಿಯಿಂದಲೇ ರಾಜ್ಯವನ್ನು ಕಣ್ಗಾವಲಿನಲ್ಲಿ ಇಡಲು ಅವಕಾಶ ಕೊಡಿ ಎಂದು ಕೇಳಿದರು. ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲಿ ಗೆಲ್ಲಿಸುತ್ತೀರಲ್ಲವೇ ಎಂದು ಕೇಳಿ ಹೌದು ಎಂಬ ಉತ್ತರ ಪಡೆದರು ಮೋದಿ.
ಇದನ್ನೂ ಓದಿ : Narendra Modi: ಚುನಾವಣೆ ಘೋಷಣೆಗೆ ಮೊದಲೇ ದೇಶದ ಜನರಿಗೆ ಮೋದಿ ಪತ್ರ; ಏನಿದೆ?
ಸಭೆಗೆ ಮೊದಲು ಡಿಎಆರ್ ಗ್ರೌಂಡ್‌ನಿಂದ ಕೆಬಿಎನ್ ಸರ್ಕಲ್, ರೋಟರಿ ಕ್ಲಬ್ ಮಾರ್ಗವಾಗಿ ಎನ್ ವಿ ಮೈದಾನದ ವರೆಗೆ ಸುಮಾರು 2.5 ಕಿ.ಮೀ. ಉದ್ದದ ರೋಡ್ ಶೋ ನಡೆಯಿತು. ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದಾರೆ. ಕಲಬುರಗಿಯ ಬಿರು ಬಿಸಿಲನ್ನೇ ಲೆಕ್ಕಿಸದೆ ಜನರು ನೆರೆದಿದ್ದರು.
ಮೋದಿ ಕಾರ್ಯಕ್ರಮಕ್ಕೆ ಬಿಗಿ ಬಂದೋಬಸ್ತ್
ಕಲಬುರಗಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ಖಾಕಿ ಪಡೆ ಹೈ ಅಲರ್ಟ್ ಆಗಿದ್ದು, ನಗರದಾದ್ಯಂತ ಪೊಲೀಸ್ ಸರ್ಪಗಾವಲು ಇರಿಸಲಾಗಿತ್ತು. ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಕರಣದ ಬಾಂಬರ್ ಕಲಬುರಗಿ ಗೆ ಬಂದು ಹೋಗಿರುವ ಶಂಕೆ ಹಿನ್ನೆಲೆಯಲ್ಲಿ ಮತ್ತಷ್ಟು ಅಲರ್ಟ್ ಘೋಷಿಸಲಾಗಿದೆ.
ಕಾರ್ಯಕ್ರಮದಲ್ಲಿ ಕೇಂದ್ರೀಯ ಸಲಹಾ ಮಂಡಳಿಯ ಸದಸ್ಯರಾಗಿರುವ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಕಲಬುರಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್, ಹಾವೇರಿ ಅಭ್ಯರ್ಥಿ ಬಸವರಾಜ್ ಬೊಮ್ಮಾಯಿ, ಬೀದರ್ ಕ್ಷೇತ್ರದ ಅಭ್ಯರ್ಥಿ ಭಗವಂತ್ ಖೂಬಾ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಇದ್ದರು.