ಬಾಗಲಕೋಟೆ: ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಭಾರೀ ಮಳೆಯಾಗುತ್ತಿರುವ (Rain News) ಹಿನ್ನೆಲೆಯಲ್ಲಿ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ದಿನದಿಂದ ದಿನಕ್ಕೆ ಕೃಷ್ಣಾ ನದಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ನದಿಪ್ರಾಂತ್ಯದ ಜನರಿಗೆ ಎಚ್ಚರ ವಹಿಸಲು ಸೂಚಿಸಲಾಗಿದೆ.
ಖಾಲಿ ಖಾಲಿಯಾಗಿದ್ದ ಕೃಷ್ಣೆಯ ಒಡಲು ಮಳೆಯಿಂದಾಗಿ ಈಗ ಭರ್ತಿಯಾಗಿದೆ. ಕೃಷ್ಣಾ ನದಿಗೆ ಸುಮಾರು 83,000 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಹಿಪ್ಪರಗಿ ಜಲಾಶಯದ ಒಳಹರಿವು 83,000 ಕ್ಯೂಸೆಕ್ ತಲುಪಿದೆ. ಹಿಪ್ಪರಗಿ ಜಲಾಶಯದಿಂದ 38,000 ಕ್ಯೂಸೆಕ್ ಹೊರಹರಿವು ಬಿಡಲಾಗಿದೆ. ಹೀಗಾಗಿ ನದಿ ಪಾತ್ರದ ಗ್ರಾಮಗಳ ಜನರು ಜಾಗೃತರಾಗಿರುವಂತೆ ಡಂಗುರ ಸಾರಲಾಗಿದೆ.
ಕೃಷ್ಣಾ ನದಿ ತೀರದ ಜಮಖಂಡಿ, ರಬಕವಿ-ಬನಹಟ್ಟಿ, ಬೀಳಗಿ ತಾಲೂಕುಗಳ ಗ್ರಾಮಗಳಲ್ಲಿ ಆಯಾ ಗ್ರಾಂ ಪಂಚಾಯತ್ ಸಿಬ್ಬಂದಿ ತುಂಬಿ ಹರಿಯುತ್ತಿರುವ ನದಿಗೆ ಇಳಿಯದಂತೆ, ದನಕರುಗಳನ್ನು ಬಿಡದಂತೆ ಡಂಗುರ ಸಾರುತ್ತಿದ್ದಾರೆ. ಸುಮಾರು 2.5 ಲಕ್ಷ ಕ್ಯೂಸೆಕ್ ನೀರು ಹರಿದರೆ ಪ್ರವಾಹ ಪರಿಸ್ಥಿತಿ ಉಂಟಾಗಬಹುದು. ಸದ್ಯ ಅಂಥ ಪ್ರವಾಹದ ಆತಂಕ ಕಾಣಬರುತ್ತಿಲ್ಲ. ಆದರೆ ಮಳೆ ಮುಂದುವರಿದಿದೆ.
ಚಿಕ್ಕೋಡಿಯಲ್ಲಿ ಸೇತುವೆಗಳು ಮುಳುಗಡೆ
ಚಿಕ್ಕೋಡಿ: ಪಕ್ಕದ ರಾಜ್ಯದ ಧಾರಾಕಾರ ಮಳೆಯಿಂದಾಗಿ ಹರಿದು ಬರುತ್ತಿರುವ ನೀರಿನ ಪರಿಣಾಮ ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕಿನ 7 ಕೆಳ ಹಂತದ ಸೇತುವೆಗಳು ಮುಳುಗಡೆಯಾಗಿವೆ.
ಧೂದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಭೋಜವಾಡಿ ಕಣ್ಣೂರ, ದೂಧಗಂಗಾ ನದಿ ಅಡ್ಡಲಾಗಿ ನಿರ್ಮಿಸಿರುವ ಕಾರದಗಾ ಭೋಜ ಸೇತುವೆ, ವೇದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಜತ್ರಾಟ ಭೀವಶಿ ಸೇತುವೆ, ವೇದಗಂಗಾ ನದಿ ಅಡ್ಡಲಾಗಿ ನಿರ್ಮಿಸಿರುವ ಕಣ್ಣೂರ ಬಾವಾಡ, ಅಕ್ಕೋಳ- ಸಿದ್ನಾಳ ಸೇತುವೆ, ಚಿಕ್ಕೋಡಿ ತಾಲೂಕಿನ ಮಲಿಕವಾಡ ದತ್ತವಾಡ ಸೇತುವೆಗಳು ಮುಳುಗಡೆಯಾಗಿವೆ. ಸೇತುವೆ ಮುಳುಗಡೆಯಾಗಿದ್ದರಿಂದ ಅನ್ಯ ಮಾರ್ಗ ಬಳಸಿ ಪ್ರಯಾಣಿಕರು ಸಂಚಾರ ಮಾಡುತ್ತಿದ್ದು, ನದಿ ತೀರಕ್ಕೆ ಇಳಿಯದಂತೆ ಪೊಲೀಸರು ಎಚ್ಚರಿಸಿದ್ದಾರೆ.
ಚಿಂಚೋಳಿಯಲ್ಲಿ ಗ್ರಾಮಗಳು ಜಲಾವೃತ
ಕಲಬುರಗಿ: ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನಲ್ಲಿ ಭಾರಿ ಮಳೆಯಾಗುತ್ತಿದ್ದು, ಮುಲ್ಲಾಮಾರಿ ಜಲಾಶಯ ಪೂರ್ಣ ಭರ್ತಿಯಾಗಿದೆ. ಜಲಾಶಯ ಭರ್ತಿ ಹಿನ್ನೆಲೆಯಲ್ಲಿ ಮುಲ್ಲಾಮಾರಿ ಜಲಾಶಯದ ಮೂರು ಗೇಟ್ ಮೂಲಕ ನೀರು ಹೊರಕ್ಕೆ ಬಿಡಲಾಗಿದೆ.
2 ಸಾವಿರ ಕ್ಯೂಸೆಕ್ಸ್ ನೀರು ಹೊರಕ್ಕೆ ಬಿಡಲಾಗಿದ್ದು, ಇದರಿಂದ ಕೆಳಭಾಗದ ಚಿಮ್ಮನಚೂಡ, ತಾಜಲಾಪೂರ, ಕನಕಪೂರ, ದರ್ಗಾಪಲ್ಲಿ ಸೇತುವೆಗಳು ಜಲಾವೃತವಾಗಿವೆ. ಹತ್ತಾರು ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಚಿಮ್ಮನಚೋಡ ಬ್ರಿಜ್ ಮೇಲುಗಡೆ ನೀರು ಹರಿಯುತ್ತಿದೆ. ಮುಂಜಾಗ್ರತಾ ಕ್ರಮವಾಗಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಪೊಲೀಸ್ ಕಾವಲು ಹಾಕಲಾಗಿದೆ.
ಇದನ್ನೂ ಓದಿ: Rain News: ಚಿಕ್ಕಮಗಳೂರು, ಬೆಳಗಾವಿ ಸೇರಿ ವಿವಿಧೆಡೆ ಭಾರಿ ಮಳೆ; ನೆಲಕ್ಕುರುಳಿದ ಮರ, ವಿದ್ಯುತ್ ಕಂಬಗಳು