ಕಲಬುರಗಿ: ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹಲಕರ್ಟಾ ಬಳಿ ಭೀಕರ ರಸ್ತೆ ಅಪಘಾತ (Road Accident) ನಡೆದಿದೆ. ಟ್ಯಾಂಕರ್ ಮತ್ತು ಟಂಟಂ ಆಟೋ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಒಂದೇ ಕುಟುಂಬದ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನ.9ರ ಸಂಜೆ 6 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ.
ನಜ್ಮಾ ಬೇಗಂ (28), ಬಿಬಿ ಫಾತೀಮಾ (12) , ಅಬುಬಕರ್ (4), ಬಿಬಿ ಮರಿಯಮ್ಮ (5 ತಿಂಗಳು), ಮಹ್ಮದ್ ಪಾಶಾ (20), ಆಟೋ ಚಾಲಕ ಬಾಬಾ (35) ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಮಹಮದ್ ಹುಸೇನ್ ಎಂಬ ಬಾಲಕನಿಗೆ ಗಂಭಿರ ಗಾಯವಾಗಿದ್ದು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಮೃತರು ಚಿತ್ತಾಪುರ ತಾಲೂಕಿನ ನಾಲವಾರ ಗ್ರಾಮದ ನಿವಾಸಿಗಳೆಂದು ಎಂದು ತಿಳಿದು ಬಂದಿದೆ. ಟಂಟಂ ಆಟೋ ಮೂಲಕ ಆಧಾರ ಕಾರ್ಡ್ ತಿದ್ದುಪಡಿಗೆ ಚಿತ್ತಾಪುರಕ್ಕೆ ಹೋಗುತ್ತಿದ್ದರು. ಆಧಾರ್ ತಿದ್ದುಪಡಿ ಮಾಡಿಸಿಕೊಂಡು ವಾಪಸ್ ಬರುವಾಗ ಬೂದಿ ತುಂಬಿದ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಆರು ಮಂದಿ ಸ್ಥಳದಲ್ಲೆ ಉಸಿರು ಚೆಲ್ಲಿದ್ದಾರೆ.
ಅಪಘಾತದ ಬಳಿಕ ಚಾಲಕ ಟ್ಯಾಂಕರ್ ಬಿಟ್ಟು ಪರಾರಿ ಆಗಿದ್ದಾನೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ವಾಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ. ವಾಡಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.
ರಸ್ತೆ ದಾಟುತ್ತಿದ್ದ ಯುವಕ ಅಪರಿಚಿತ ವಾಹನಕ್ಕೆ ಬಲಿ
ಹಿಟ್ ಆ್ಯಂಡ್ ರನ್‌ಗೆ ರಸ್ತೆ ದಾಟುತ್ತಿದ್ದ ಯುವಕ ಬಲಿಯಾಗಿರುವ ಘಟನೆ ದೊಡ್ಡಬಳ್ಳಾಪುರದ ರೈಲ್ವೆ ನಿಲ್ದಾಣದ ಬಳಿ ನಡೆದಿದೆ. ಖದೀರ್ ಪಾಷಾ (26) ಮೃತ ದುರ್ದೈವಿ. ದೊಡ್ಡಬಳ್ಳಾಪುರದ ಮುತ್ತೂರು ನಿವಾಸಿ ಖದೀರ್ ಪಾಷಾ ಮೂಟೆ ಹೊರುವ ಕೆಲಸ ಮಾಡಿಕೊಂಡಿದ್ದ. ಕೆಲಸ ಮುಗಿಸಿ ವಾಪಸ್ ತೆರಳುವಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಅಪಘಾತ ಮಾಡಿ ವಾಹನ ನಿಲ್ಲಿಸದೆ ಪರಾರಿ ಆಗಿದ್ದಾನೆ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.
ಯುವತಿ ಸ್ನಾನ ಮಾಡುವಾಗ ವಿಡಿಯೊ ಮಾಡಿದ ಕಾಮುಕ ಜಿಮ್ ಕೋಚ್
ಬೆಂಗಳೂರು: ಫಿಟ್ನೆಸ್ ಸೆಂಟರ್‌ನಲ್ಲಿ ವರ್ಕ್‌ಔಟ್ ಮುಗಿಸಿ ಮಹಿಳೆ ಸ್ನಾನ ಮಾಡುವುದನ್ನು (physical abuse) ಕಾಮುಕ ಕೋಚ್ ಸೆರೆ ಹಿಡಿದಿದ್ದಾನೆ. ಬಾಣಸವಾಡಿ ಎನ್ಆರ್‌ಐ ಲೇಔಟ್‌ನಲ್ಲಿರುವ ಫಿಟ್ನೆಸ್ ಸೆಂಟರ್‌ನಲ್ಲಿ ಈ ಘಟನೆ ನಡೆದಿದೆ.
ಬಾಣಸವಾಡಿ ಪೊಲೀಸರು ಜಿಮ್ ಕೋಚ್ ಸಿಬಿಯಾಚನ್ ಎಂಬಾತನನ್ನು ಬಂಧಿಸಿದ್ದಾರೆ. ಮಹಿಳಾ ಟೆಕ್ಕಿಯೊಬ್ಬರು ವರ್ಕ್ ಔಟ್ ಮುಗಿಸಿ ಸ್ನಾನ ಮಾಡಲು ಬಾತ್ ರೂಂಗೆ ತೆರಳಿದ್ದರು. ಈ ವೇಳೆ ಸಿಬಿಯಾಚನ್‌ನ ಕಿಟಕಿಯ ಮೂಲಕ ಮೊಬೈಲ್ ಹಿಡಿದು ರಿಕಾರ್ಡಿಂಗ್ ಮಾಡುತ್ತಿದ್ದ.
ಈ ವೇಳೆ ಟೆಕ್ಕಿಗೆ ಸಣ್ಣದೊಂದು ಅನುಮಾನ ಬಂದಿದೆ. ಕೂಡಲೇ ಹೊರಗೆ ಬಂದಾಗ ಅಲ್ಲಿ ಯಾರೂ ಇರಲಿಲ್ಲ. ಆದರೂ ಯಾರೋ ಲೇಡಿಸ್ ಟಾಯ್ಲೆಟ್ ಬಳಿ ಬಂದು ಹೋಗಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿ ಜಿಮ್ ಮ್ಯಾನೇಜರ್‌ಗೆ ದೂರು ನೀಡಿದ್ದಾರೆ. ಈ ವೇಳೆ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಆರೋಪಿ ಕೃತ್ಯ ಬೆಳಕಿಗೆ ಬಂದಿದೆ.
ರಾಮಮೂರ್ತಿನಗರಲ್ಲಿರುವ ಕಲ್ಟ್ ಫಿಟ್ ನೆಸ್ ಸೆಂಟರ್‌ನಲ್ಲಿ ಬ್ಯಾಡ್ಮಿಂಟನ್ ಹಾಗೂ ಸ್ವಿಮ್ಮಿಂಗ್ ಕೋಚ್‌ಗೆ ಸಂತ್ರಸ್ತೆ ಸೇರಿದ್ದರು. ಸಿಬಿಯಾಚಾನ್‌ನಿಂದ ತರಬೇತಿ ಪಡೆಯುತ್ತಿದ್ದರು. ಕಳೆದ ಭಾನುವಾರ ಸ್ವಿಮ್ಮಿಂಗ್ ಮುಗಿಸಿ ಬಾತ್ ರೂಂಗೆ ಸ್ನಾನಕ್ಕೆ ತೆರಳಿದಾಗ, ಕಿಟಕಿಯಿಂದ ವಿಡಿಯೊ ಮಾಡಿದ್ದ. ಈ ಬಗ್ಗೆ ಮ್ಯಾನೇಜರ್ ದೀಪಕ್ ಎಂಬುವವರಿಗೆ ದೂರು ನೀಡಿದಾಗ ಕೃತ್ಯ ಬೆಳಕಿಗೆ ಬಂದಿದೆ.
ಕೂಡಲೇ ಟೆಕ್ಕಿ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ. ಟೆಕ್ಕಿ ದೂರಿನ ಆಧಾರದ ಮೇಲೆ ಫಿಟ್ನೆಸ್ ಕೋಚ್ ಸಿಬಿಯಾಚನ್‌ನನ್ನು ಬಂಧಿಸಿದ್ದಾರೆ. ಬಾಣಸವಾಡಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.