Site icon Vistara News

Road Accident : ಯಮನಂತೆ ಬಂದ ಸರ್ಕಾರಿ ಬಸ್‌; ಸ್ಮಶಾನ ಸೇರಿದ ಬೈಕ್‌ ಸವಾರರು

Road Accident two people Dead

ಕಲಬುರಗಿ: ಭೀಕರ ರಸ್ತೆ ಅಪಘಾತದಲ್ಲಿ (Road Accident) ಇಬ್ಬರು ಮೃತಪಟ್ಟಿದ್ದಾರೆ. ಸರ್ಕಾರಿ ಬಸ್ ಹಾಗೂ ದ್ವಿಚಕ್ರ ವಾಹನ ನಡುವೆ (Bus and Bike Accident) ಅಪಘಾತ ಸಂಭವಿಸಿದೆ. ನಿನ್ನೆ ಗುರುವಾರ (ಜ.11) ರಾತ್ರಿಯಂದು ಕಲಬುರಗಿ ಜಿಲ್ಲೆಯ ಆಳಂದ್ ಪಟ್ಟಣದ ಮಿನಿ ಸೌಧದ ಬಳಿ ಅಪಘಾತ ನಡೆದಿದೆ.

ಸ್ಥಳದಲ್ಲೇ ಒಬ್ಬ ಮೃತಪಟ್ಟರೆ, ಚಿಕಿತ್ಸೆ ಫಲಕಾರಿಯಾಗದೆ ಮತ್ತೊಬ್ಬ ಶುಕ್ರವಾರದಂದು ಮೃತಪಟ್ಟಿದ್ದಾರೆ. ಸಿದ್ದಲಿಂಗಯ್ಯ ಹಿರೇಮಠ(39), ಸಂಕೇತ ಮಹಾಂತಯ್ಯಾ ಹಿರೇಮಠ್(8) ಮೃತ ದುರ್ದೈವಿಗಳು.

ಕಲಬುರಗಿಯಿಂದ ಅಳಂದ ಕಡೆ ಹೊರಟಿದ್ದ ಸರ್ಕಾರಿ ಬಸ್‌ ವೇಗವಾಗಿ ಬಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್‌ನಿಂದ ಕೆಳಗೆ ಬಿದ್ದ ರಭಸಕ್ಕೆ ತಲೆಗೆ ತೀವ್ರ ಪೆಟ್ಟಾಗಿತ್ತು. ಗಂಭೀರ ಗಾಯಗೊಂಡಿದ್ದ ಸಂಕೇತ ಸ್ಥಳದಲ್ಲೇ ಜೀವ ಬಿಟ್ಟರೆ, ಸಿದ್ದಲಿಂಗಯ್ಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಬಸ್ ಚಾಲಕನ ಅಜಾಗರೂಕತೆಯಿಂದಲೇ ಅಪಘಾತ ಸಂಭವಿಸಿ, ಬೈಕ್ ಸವಾರರು ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Namma Metro : ಲೈಂಗಿಕ ಕಿರುಕುಳ ಹೆಚ್ಚಳ; ನಮ್ಮ ಮೆಟ್ರೋ ರೈಲಿನಲ್ಲಿ ಮಹಿಳೆಯರಿಗಾಗಿ ಮತ್ತೊಂದು ಬೋಗಿ ಮೀಸಲು!

ಹೆದ್ದಾರಿಯಲ್ಲಿ ಸರಣಿ ಅಪಘಾತ

ನೆಲಮಂಗಲ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಹಲವು ಪ್ರಯಾಣಿಕರು ಪಾರಾಗಿದ್ದಾರೆ. ಇಬ್ಬರಿಗೆ ಗಾಯವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಎಡೇಹಳ್ಳಿ ಬಳಿ ಘಟನೆ ನಡೆದಿದೆ.

ಐದು ಕಾರು, ಒಂದು ಬಸ್, ಒಂದು ಕ್ಯಾಂಟರ್ ನಡುವೆ ಅಪಘಾತವಾಗಿದ್ದು, ವಾಹನಗಳು ಜಖಂ ಆಗಿವೆ. ಅತೀಯಾದ ವೇಗದಿಂದ ಸರಣಿ ಅಪಘಾತವಾಗಿರುವ ಶಂಕೆ ಮೂಡಿದೆ. ಗಾಯಗೊಂಡ ಇಬ್ಬರು ಪ್ರಯಾಣಿಕರನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಅಪಘಾತದಿಂದ ಹೆದ್ದಾರಿಯಲ್ಲಿ ಸುಮಾರು ಎರಡು ಕಿ.ಮೀವರೆಗೂ ಟ್ರಾಫಿಕ್ ಜಾಂ ಉಂಟಾಯಿತು. ನೆಲಮಂಗಲ ಸಂಚಾರಿ ಪೊಲೀಸರು ಮತ್ತು ದಾಬಸ್ ಪೇಟೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಹೆದ್ದಾರು ಮಾಡಿಸಿದ್ದಾರೆ. ನೆಲಮಂಗಲ ಸಂಚಾರಿ ರಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Food Poison: ಬಿಸಿಯೂಟದಲ್ಲಿ ಕೊಳೆತ ಮೊಟ್ಟೆ ಸೇವಿಸಿದ ಮಕ್ಕಳು ಅಸ್ವಸ್ಥ

ಹೊಸಕೋಟೆ: ಸರ್ಕಾರಿ ಪ್ರೌಢಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ (bisiyuta) ಸೇವಿಸಿದ 8 ಮಕ್ಕಳು (Food Poison) ಅಸ್ವಸ್ಥರಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ನೆಲವಾಗಿಲು ಗ್ರಾಮದ ಸರ್ಕಾರಿ ಪ್ರೌಡಶಾಲೆಯಲ್ಲಿ ಈ ಘಟನೆ ನಡೆದಿದೆ.

ಅಸ್ವಸ್ಥತರಾದ 8 ಮಕ್ಕಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕಳೆದೆರಡು ದಿನಗಳಿಂದ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಕೊಳೆತ ಮೊಟ್ಟೆ ವಿತರಿಸಿರುವ ಆರೋಪ ಇದೆ. ಕೊಳೆತ ಮೊಟ್ಟೆಯನ್ನು ತಿಂದು 8 ಮಂದಿ ವಿದ್ಯಾರ್ಥಿಗಳು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂದು ಹೇಳಲಾಗಿದೆ.

ಅಸ್ವಸ್ಥವಾಗಿರುವ ವಿದ್ಯಾರ್ಥಿಗಳು ವಸತಿ ನಿಲಯದಲ್ಲಿ ಉಳಿದುಕೊಂಡಿರುವವರು. ನಿನ್ನೆ ಮಧ್ಯಾಹ್ನ ಊಟ ಮಾಡಿದ ನಂತರ ವಸತಿ‌ನಿಲಯದಲ್ಲಿದ್ದ ಕೆಲ ವಿದ್ಯಾರ್ಥಿಗಳಿಗೆ ವಾಂತಿ, ಹೊಟ್ಟೆ ನೋವು ಕಾಣಿಸಿಕೊಂಡಿದೆ. ತಕ್ಷಣ ವಸತಿ ನಿಲಯದ ವಾರ್ಡನ್, ವಿದ್ಯಾರ್ಥಿಗಳನ್ನು ಹೊಸಕೋಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಚಿಕಿತ್ಸೆ ಪಡೆದ ವಿದ್ಯಾರ್ಥಿಗಳು ಚೇತರಿಸಿಕೊಳ್ಳುತ್ತಿದ್ದಾರೆ. ಪ್ರೌಢಶಾಲೆಯಲ್ಲಿ ನೀಡಿದ ಕೊಳೆತ ಮೊಟ್ಟೆಯೇ ಇದಕ್ಕೆ ಕಾರಣ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version