Site icon Vistara News

Snake Bite : ಮರದಡಿ ಕುಳಿತಾಗ ಮಹಿಳೆಯ ಕಿವಿಗೆ ಕುಟುಕಿದ ಹಾವು; ವಿಷವೇರಿ ಸಾವು

snake Bite

ಕಲಬುರಗಿ: ಕಿವಿಗೆ ಹಾವು ಕಡಿದು ಮಹಿಳೆಯೊಬ್ಬರು (Snake Bite) ಮೃತಪಟ್ಟಿದ್ದಾರೆ. ವಿಜಯಲಕ್ಷ್ಮಿ ತೆಳಗೇರಿ (44) ಮೃತ ದುರ್ದೈವಿ. ಕಲಬುರಗಿಯ ಸೂಗೂರು(N) ಗ್ರಾಮದ ಹೊರವಲಯದ ಜಮೀನಿನಲ್ಲಿ ಘಟನೆ ನಡೆದಿದೆ.

ಚಿತ್ತಾಪುರ ತಾಲೂಕಿನ ಸೂಗೂರು(N)ಗ್ರಾಮದ ವಿಜಯಲಕ್ಷ್ಮಿ ಕೂಲಿ ಕೆಲಸಕ್ಕಾಗಿ ಜಮೀನಿಗೆ ತೆರಳಿದ್ದರು. ಕೆಲಸ ಮುಗಿಸಿಕೊಂಡು ಮನೆಗೆ ತೆರಳುವಾಗ ದಿಢೀರ್‌ ಮಳೆ ಶುರುವಾಗಿತ್ತು. ಹೀಗಾಗಿ ಮಳೆ ನಿಂತ ಮೇಲೆ ಮನೆಗೆ ಹೋಗೋಣಾವೆಂದು ಮರದಡಿ ನಿಂತು ಆಸರೆ ಪಡೆದಿದ್ದರು.

ಆದರೆ ಹಾವು ಮರದಲ್ಲಿ ಇರುವುದನ್ನು ಗಮನಿಸಿದೇ ಮರದ ಕೆಳಗೆ ಆಸರೆ ಪಡೆದಿದ್ದಾರೆ. ಈ ವೇಳೆ ಮಹಿಳೆಯ ಕಿವಿಗೆ ಹಾವು ಕಚ್ಚಿದ್ದು, ಅಸ್ವಸ್ಥಗೊಂಡ ವಿಜಯಲಕ್ಷ್ಮಿ ಕುಸಿದು ಬಿದ್ದಿದ್ದಾರೆ. ಅಲ್ಲಿದ್ದವರು ವಿಜಯಲಕ್ಷ್ಮಿಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಆದಾಗಲೇ ಹಾವಿನ ವಿಷವೇರಿದ್ದರಿಂದ ಆಕೆ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ. ಸದ್ಯ ವಾಡಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Wild Animals Attack : ಮನೆಯಂಗಳವನ್ನು ಧ್ವಂಸ ಮಾಡಿದ ಆನೆಗಳು; ಗ್ರಾಮಕ್ಕೆ ಓಡೋಡಿ ಬಂದ ಕರಡಿ

ಕೊಪ್ಪಳದಲ್ಲಿ ಕೋತಿ ಕಾಟ

ಕೋತಿಯ ಹುಚ್ಚಾಟಕ್ಕೆ ಜನರಿಗೆ ಸಂಕಷ್ಟ ಎದುರಾಗಿದೆ. 15ಕ್ಕೂ ಹೆಚ್ಚು ಜನರಿಗೆ ಕೋತಿ ದಾಳಿ ಮಾಡಿದ್ದು, ಗಾಯಗೊಂಡಿದ್ದಾರೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ನೀರಲೂಟಿ ಗ್ರಾಮದಲ್ಲಿ ಘಟನೆ ನಡೆದಿದೆ.

ಮಾಬುಸಾಬ ಪಿಂಜಾರ, ದೇವಪ್ಪ ಕಂಬಾರ, ಮಲ್ಲಪ್ಪ ಅಗಸಿಮುಂದಿನ, ಅಡಿವೆಪ್ಪ ಚಳ್ಳಾರಿ, ಶಂಕ್ರಮ್ಮ ಬೆಣಕಲ್ ಸೇರಿದಂತೆ 15 ಕ್ಕೂ ಹೆಚ್ಚು ಜನರಿಗೆ ಕೋತಿ ಕಡಿದಿದೆ. ತಾವರಗೇರಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸದ್ಯ ಬೋನು ಇರಿಸಿ ಕೋತಿಗೆ ಸೆರೆಗೆ ಅರಣ್ಯ ಇಲಾಖೆ ಮುಂದಾಗಿದೆ.

ಮೈಸೂರಿನಲ್ಲಿ ಹುಲಿ ಪ್ರತ್ಯಕ್ಷ

ಮೈಸೂರಿನಲ್ಲಿ ಮತ್ತೊಮ್ಮೆ ಹುಲಿಯೊಂದು ಪ್ರತ್ಯಕ್ಷಗೊಂಡಿದೆ. ಮೈಸೂರಿನ ವರುಣ ಹೋಬಳಿ ವರಕೋಡು ಗ್ರಾಮದಲ್ಲಿ ಹುಲಿ ಕಾಣಿಸಿಕೊಂಡಿದೆ. ಮುರಾರ್ಜಿ ಶಾಲೆಯ ರಸ್ತೆಯಲ್ಲಿ ಟ್ರ್ಯಾಕ್ಟರ್‌ನಲ್ಲಿ ಹೋಗುತ್ತಿರುವವರಿಗೆ ಹುಲಿ ಕಾಣಿಸಿಕೊಂಡಿದೆ. ದನ, ಕುರಿ, ಮನುಷ್ಯರ ಮೇಲೆ ದಾಳಿ ನಡೆಸುವ ಮುಂಚೆ ಕೂಡಲೇ ಮುಂಜಾಗ್ರತ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version