ಕಲಬುರಗಿ: ರಾಜ್ಯದಲ್ಲಿ 2008ರಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬರುವಲ್ಲಿ ನನ್ನ ಶ್ರಮ ದೊಡ್ಡದಿದೆ. ಸಮಾಜದಲ್ಲಿ ರೆಡ್ಡಿ ಎಂದರೆ ಒಂದು ಶಕ್ತಿಯಾಗಿದ್ದು, ಸರ್ಕಾರವನ್ನೇ ಬದಲಿಸುವ ತಾಕತ್ತು ನಮ್ಮ ಸಮಾಜಕ್ಕಿದೆ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ಬಟಗೇರಾ ಸಮೀಪದ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಭಾನುವಾರ ಆಯೋಜಿಸಿದ್ದ ಹೇಮರಡ್ಡಿ ಮಲ್ಲಮ್ಮ ಜಯಂತಿಯನ್ನು ಉದ್ಘಾಟಿಸಿ ರೆಡ್ಡಿ ಮಾತನಾಡಿದರು. ನಾವೆಲ್ಲರೂ ಸಂಘಟಿತರಾದಾಗ ಮಾತ್ರ ರೆಡ್ಡಿ ಸಮುದಾಯ ಬಲಿಷ್ಠವಾಗಲು ಸಾಧ್ಯ. ಅಂದಾಗ ಮಾತ್ರ ಸರ್ಕಾರ ನಮ್ಮ ಮನೆ ಬಾಗಿಲಿಗೆ ಬಂದು ನಿಲ್ಲಲಿದೆ. ಅಲ್ಲದೆ ಸಮಾಜದಲ್ಲಿನ ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಮಾಡುವುದನ್ನು ಎಲ್ಲರೂ ರೂಢಿಸಿಕೊಳ್ಳಬೇಕು ಎಂದು ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ಇದನ್ನೂ ಓದಿ | ಗಾಲಿ ಜನಾರ್ದನ ರೆಡ್ಡಿ ಮತ್ತೆ ರಾಜಕಾರಣಕ್ಕೆ ಬರಲಿದ್ದಾರ?: ಸಿಂಧನೂರಿನಿಂದ ಸ್ಪರ್ಧಿಸಲು ಸಿದ್ಧತೆ?!
ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಾಗೂ ಸಂಸದ ರೇವಂತರಡ್ಡಿ ಮಾತನಾಡಿ, ಸಮಾಜದವರು ಉದ್ಯೋಗ , ವ್ಯಾಪಾರಕ್ಕಿಂತ ಕೃಷಿಗೆ ಹೆಚ್ಚಿನ ಮಹತ್ವ ನೀಡಬೇಕು. ಅಂದಾಗಲೇ ಗ್ರಾಮದಲ್ಲಿ ಬಡ ಜನರಿಗೆ ಸಹಾಯ ಸಹಕಾರ ಮಾಡಲು ಸಾಧ್ಯವಾಗಲಿದೆ. ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ಉನ್ನತ ಜವಾಬ್ದಾರಿ ನೀಡಿದರೆ ಸಮರ್ಥವಾಗಿ ನಿಭಾಯಿಸುವ ಶಕ್ತಿ ನಮ್ಮಲ್ಲಿದೆ ಎಂದರು.