Site icon Vistara News

1991ರ ಕಾಯಿದೆ ಪಾಲನೆ ಆಗಲಿ, ಧಾರ್ಮಿಕ ಕೇಂದ್ರಗಳಿಗೆ ಧಕ್ಕೆ ಬೇಡ: ಬೃಂದಾ ಕಾರಟ್

ಸಿಪಿಎಂ ನಾಯಕಿ ಬೃಂದಾ ಕಾರಟ್

ಕಲಬುರಗಿ: ದೇಶದಲ್ಲಿ ಧಾರ್ಮಿಕ ಶ್ರದ್ಧಾ ಕೇಂದ್ರಗಳ ವಿಚಾರದಲ್ಲಿ ರಾಜಕೀಯ ಕಾರಣಕ್ಕಾಗಿ ಆರ್‌ಎಸ್‌ ಎಸ್ , ಬಿಜೆಪಿಯವರು ಒಡೆದಾಳುವ ಕೆಲಸ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ 1991ರ ಪೂಜಾಸ್ಥಳಗಳ ಸಂರಕ್ಷಣೆ ಕಾಯಿದೆ ಕಟ್ಟುನಿಟ್ಟಾಗಿ ಪಾಲನೆ ಆಗಬೇಕು ಎಂದು ಸಿಪಿಎಂ ಪಾಲಿಟ್ ಬ್ಯುರೋ ಸದಸ್ಯೆ ಬೃಂದಾ ಕಾರಟ್ ಹೇಳಿದ್ದಾರೆ.

ಅವರು ಭಾನುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕಾಶಿಯ ಜ್ಞಾನವಾಪಿ ಮಸೀದಿ ಕುರಿತ ಸುಪ್ರೀಂ ಕೋರ್ಟ್ ತೀರ್ಪು ನಿಶಾದಾಯಕವಾಗಿದೆ. 1991ರ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಕಾಯಿದೆ ಪ್ರಕಾರ ಧಾರ್ಮಿಕ ಶ್ರದ್ಧಾ ಕೇಂದ್ರಗಳು 1947ರ ಆಗಸ್ಟ್ 15ರಂದು ಇದ್ದಂತೆ ಯಥಾಸ್ಥಿತಿ ಕಾಯ್ದುಕೊಂಡು ಬರಬೇಕು. ಆದರೆ ಜ್ಞಾನವಾಪಿ ವಿಷಯದಲ್ಲಿ ಅದು ಪಾಲನೆ ಆಗುತ್ತಿಲ್ಲ. ದೇಶದ ಕಾನೂನು ಬಲಿಷ್ಠಗೊಳಿಸಬೇಕು. ಐತಿಹಾಸಿಕ ತಪ್ಪುಗಳನ್ನು ತಿದ್ದಲು ಹೊರಟರೆ ದೊಡ್ಡ ಸಮಸ್ಯೆಗಳು ಸೃಷ್ಟಿಯಾಗಲಿವೆ . ಜ್ಞಾನವಾಪಿ , ಮಥುರಾ, ತಾಜಮಹಲ್ ಹೀಗೆ ಎಲ್ಲೆಡೆ ಇದೇ ಮಾಡುತ್ತಿದ್ದರೆ ದೇಶದ ಸ್ಥಿತಿ ಏನು? ಅಯೋಧ್ಯೆ ತೀರ್ಪಿನಲ್ಲಿ ಆದ ಐತಿಹಾಸಿಕ ಪ್ರಮಾದಗಳನ್ನು ಕಡೆಗಣಿಸಬಾರದು ಎಂದರು.

ಸರ್ಕಾರ ಹಿಜಾಬ್, ಹಲಾಲ್, ಗೋವು, ವ್ಯಾಪಾರ, ಮತಾಂತರದ ಹೆಸರಲ್ಲಿ ಸಾಮಾಜಿಕ ನ್ಯಾಯಕ್ಕೆ ಧಕ್ಕೆ ತರುತ್ತಿದೆ. ಸೌಹಾರ್ದತೆ ಮರೆಯಾಗಿದೆ. ಕೇರಳದಲ್ಲಿ ಹಿಜಾಬ್ ಧರಿಸಿಯೇ ಹೆಣ್ಣು ಮಕ್ಕಳು ಕಲಿಯುತ್ತಾರೆ. ಅಲ್ಲಿ ಅತಿ ಹೆಚ್ಚು ಶೈಕ್ಷಣಿಕ ಪ್ರಮಾಣ ಇದೆ. ಹಿಜಾಬ್ ಹೆಸರಲ್ಲಿ ಸ್ತ್ರೀ ಶಿಕ್ಷಣಕ್ಕೆ ಅಡ್ಡಿ ತಂದ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.

ಕರ್ನಾಟಕದಲ್ಲಿ ನರೇಗಾದಲ್ಲಿ ಕಳೆದ ವರ್ಷ ಸರಾಸರಿ 49 ದಿನ ಮಾತ್ರ ಉದ್ಯೋಗ ನೀಡಿದ್ದು , ಪ್ರಸಕ್ತ ವರ್ಷ ಕೇವಲ ಸರಾಸರಿ 16 ದಿನ ಕೆಲಸ ಕೊಡಲಾಗಿದೆ. ಲಾಕ್‌ಡೌನ್‌ನಿಂದ ಕೋಟ್ಯಂತರ ಜನರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಸರ್ಕಾರ ಈ ಬಗ್ಗೆ ಮಾತನಾಡುವುದಿಲ್ಲ ಎಂದು ಕಿಡಿಕಾರಿದರು.

ಪಕ್ಷದ ಸದಸ್ಯರಾದ ಕೆ.ನೀಲಾ, ಶರಣಬಸಪ್ಪ ಮಮಶೆಟ್ಟಿ, ಎಂ.ಬಿ.ಸಜ್ಜನ, ಜಾವೇದ್ ಹುಸೇನ್, ಭೀಮಶೆಟ್ಟಿ ಯಂಪಳ್ಳಿ ಇತರರಿದ್ದರು.

ಇದನ್ನೂ ಓದಿ| ಶಬ್ದಮಾಲಿನ್ಯ ಮಾಡುವವರ ಮೇಲೆ ಕೇಸ್ ಹಾಕಿ: ಅಧಿಕಾರಿಗಳಿಗೆ ಡಿಜಿ-ಐಜಿಪಿ ಖಡಕ್‌ ಸೂಚನೆ

Exit mobile version