Site icon Vistara News

Train Accident : ವೇಗವಾಗಿ ಚಲಿಸುತ್ತಿದ್ದ ರೈಲಿನಿಂದ ಬಿದ್ದು ಟ್ರಾವೆಲ್ಸ್‌ ಮಾಲೀಕ ಸಾವು

Travels owner dies after falling off moving train

ಕಲಬುರಗಿ: ಚಲಿಸುತ್ತಿರುವ ರೈಲಿನಿಂದ ಬಿದ್ದು ವ್ಯಕ್ತಿ (Train Accident) ಮೃತಪಟ್ಟಿದ್ದಾರೆ. ಅಣವಿರಯ್ಯ ಪ್ಯಾಟಿ ಮನಿ ಮೃತ ದುರ್ದೈವಿ. ಕಲಬುರಗಿಯ ಶಹಾಬಾದ್ ಹಾಗೂ ರೆವೂರ್ ಮಾರ್ಗ ಮಧ್ಯೆ ಈ ದುರ್ಘಟನೆ (Kalaburagi News) ನಡೆದಿದೆ.

ಅಣವಿರಯ್ಯ ಅವರು ಜಿಲ್ಲಾ ಪಂಚಾಯತ್ ಚುನಾವಣೆಯ ಪರಾಜಿತ ಅಭ್ಯರ್ಥಿಯಾಗಿದ್ದರು. ಚಿಂಚೊಳ್ಳಿ ತಾಲೂಕಿನ ಕೊಡ್ಲಿ ಗ್ರಾಮದ ನಿವಾಸಿ ಆಗಿರುವ ಅಣವಿರಯ್ಯ ಪ್ಯಾಟಿಮನಿ, ಕಲಬುರಗಿಯಲ್ಲಿ ಟ್ರಾವೆಲ್ಸ್ ಏಜೆನ್ಸಿ‌ಯನ್ನು ನಡೆಸುತ್ತಿದ್ದರು.

ವಾಡಿ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ವಾಡಿ ರೈಲ್ವೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವೇಗವಾಗಿ ಹೋಗುತ್ತಿದ್ದ ರೈಲಿನಿಂದ ಬಿದ್ದ ರಭಸಕ್ಕೆ ಅಣವಿರಯ್ಯ ಎಡಗೈ ಪೂರ್ತಿ ನಜ್ಜುಗಜ್ಜಾಗಿತ್ತು. ತಲೆಗೆ ಗಂಭೀರವಾಗಿ ಪೆಟ್ಟಾದ ಕಾರಣಕ್ಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Self Harming : ವಿಷ ಕುಡಿದು ಫ್ಯಾನ್‌ಗೆ ನೇಣು ಹಾಕಿಕೊಂಡ ಬಸ್‌ ಕಂಡಕ್ಟರ್‌

ಉಳುಮೆ ಮಾಡುವಾಗ ಪಲ್ಟಿ ಹೊಡೆದ ಟ್ರ್ಯಾಕ್ಟರ್‌; ರೈತ ಸ್ಥಳದಲ್ಲೇ ಸಾವು

ಬೆಂಗಳೂರು: ಪ್ರತ್ಯೇಕ ಕಡೆಗಳಲ್ಲಿ ರಸ್ತೆ ಅಪಘಾತಗಳು (Road Accident) ಸಂಭವಿಸಿದ್ದು, ಮೂವರು ಅಸುನೀಗಿದ್ದರೆ, ಮೂವರು ಗಂಭೀರ ಗಾಯಗೊಂಡಿದ್ದಾರೆ. ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗ್ರಾಮದಲ್ಲಿ ಟ್ರ್ಯಾಕ್ಟರ್ ಮಗುಚಿ ಬಿದ್ದು, ರೈತರೊಬ್ಬರು ಮೃತಪಟ್ಟಿದ್ದಾರೆ. ಮಾದಪ್ಪ (58) ಮೃತ ದುರ್ದೈವಿ. ಉಳುಮೆ ಮಾಡುವಾಗ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಮಗುಚಿ ಬಿದ್ದಿದೆ. ಟ್ರ್ಯಾಕ್ಟರ್‌ ಅಡಿ ಸಿಲುಕಿದ ಮಾದಪ್ಪ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಕೊಡಗಿನಲ್ಲಿ ಸ್ಕೂಟರ್‌ಗೆ ಬಸ್‌ ಡಿಕ್ಕಿ, ಮಹಿಳೆ ದುರ್ಮರಣ

ಕೆಎಸ್‌ಆರ್‌ಟಿಸಿ ಬಸ್ ಮತ್ತು ಸ್ಕೂಟಿ ನಡುವೆ ಅಪಘಾತ ಸಂಭವಿಸಿದ್ದು, ಮಹಿಳೆಯೊಬ್ಬರು ದುರ್ಮರಣ ಹೊಂದಿದ್ದಾರೆ. ಸಿದ್ದಾಪುರ ಗ್ರಾಮದ ಲಲಿತಾ (53) ಮೃತಪಟ್ಟ ದುರ್ದೈವಿ. ಸ್ಕೂಟಿ ಓಡಿಸುತ್ತಿದ್ದ ಸಿಂಚನಾ ಎಂಬುವವರ ಸ್ಥಿತಿ ಗಂಭೀರವಾಗಿದೆ. ಕೊಡಗಿನ ರಾಷ್ಟ್ರೀಯ ಹೆದ್ದಾರಿ 275ರ ಗುಡ್ಡೆಹೊಸೂರು ಬಳಿ ಅಪಘಾತ ಸಂಭವಿಸಿದೆ.

ಮಡಿಕೇರಿಯಿಂದ ಮೈಸೂರಿಗೆ ಕೆಎಸ್ಆರ್‌ಟಿಸಿ ಬಸ್ ತೆರಳುತ್ತಿತ್ತು. ಇತ್ತ ಮಹಿಳೆಯರಿಬ್ಬರು ಅತ್ತೂರು ಕಡೆಯಿಂದ ಗುಡ್ಡೆಹೊಸೂರು ಕಡೆಗೆ ಸ್ಕೂಟಿಯಲ್ಲಿ ಬರುತ್ತಿದ್ದರು. ಈ ವೇಳೆ ಬಸ್‌ ಹಾಗೂ ಸ್ಕೂಟರ್‌ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಬಸ್ಸಿನಡಿ ಸಿಲುಕಿದ ಸ್ಕೂಟಿ ನಜ್ಜುಗುಜ್ಜಾಗಿತ್ತು. ಮೃತ ಮಹಿಳೆ ಪರ್ಪಲ್ ಪಾಮ್ ರೆಸಾರ್ಟ್ ಸಿಬ್ಬಂದಿ ಎಂಬ ಮಾಹಿತಿ ಇದೆ. ಸ್ಥಳಕ್ಕೆ ಕುಶಾಲನಗರ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಇದನ್ನೂ ಓದಿ: Operation Elephant : ಬೀಟಮ್ಮ ಗುಂಪನ್ನು ಬೀಟ್‌ ಮಾಡಲು ಎಂಟ್ರಿ ಕೊಟ್ಟ ಅಭಿಮನ್ಯು ಟೀಂ

ಅಡ್ಡಾದಿಡ್ಡಿ ಚಾಲನೆ; ಬೈಕ್‌ಗೆ ಆಟೋ ಡಿಕ್ಕಿ ಚಾಲಕ ಸಾವು

ಬೆಂಗಳೂರಿನ ಉತ್ತರಹಳ್ಳಿ ಮುಖ್ಯರಸ್ತೆಯ ಬಾಲಾಜಿ ಥಿಯೇಟರ್ ಬಳಿ ಬೈಕ್ ಹಾಗೂ ಆಟೋ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಪರಿಣಾಮ ಆಟೋ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಾಹುಲ್ (23) ಮೃತ ದುರ್ದೈವಿ.

ಚಾಲಕ ಅಜಾಗರೂಕತೆಯಿಂದ ಆಟೋ ಚಲಾಯಿಸಿದ್ದೆ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ರಸ್ತೆ ಬಲಬದಿಯಲ್ಲಿ ಆಟೋ ಚಲಾಯಿಸಿ ಬೈಕ್‌ಗೆ ಡಿಕ್ಕಿ ಹೊಡೆದು ಫುಟ್ ಪಾತ್ ಮೇಲೆ ಮಗುಚಿ ಬಿದ್ದಿದೆ. ಪರಿಣಾಮ ಆಟೋ ಚಾಲಕ ರಾಹುಲ್‌ ಸ್ಥಳದಲ್ಲೇ ಮೃತಪಟ್ಟರೆ, ಆಟೋದಲ್ಲಿದ್ದ ಕಿರಣ್ ಹಾಗೂ ಬೈಕ್ ಸವಾರ ನಂದಕುಮಾರ್‌ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version