ಕಲಬುರಗಿ: ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಮತ್ತಿಬ್ಬರು ಆರೋಪಿಗಳು ಸಿಐಡಿ ಪೊಲೀಸರ ಅತಿಥಿಗಳಾಗಿದ್ದಾರೆ. ಜಿಲ್ಲೆಯ ಅಫಜಲಪುರ ತಾಲೂಕಿನ ಕರಜಗಿ ನಿವಾಸಿಗಳಾದ ಮಹೇಶ್ ಹಿರೋಳಿ, ಸೈಫನ್ ಬಂಧಿತರು. ಇವರಿಬ್ಬರೂ ಕಿಂಗ್‌ಪಿನ್ ರುದ್ರಗೌಡ ಪಾಟೀಲ್‌ನ ಸಹಚರರಾಗಿದ್ದಾರೆ.
ಈ ಇಬ್ಬರು ಆರೋಪಿಗಳು ನೇಮಕಾತಿ ಅಕ್ರಮದಲ್ಲಿ ರುದ್ರಗೌಡನ ಜತೆ ಶಾಮೀಲಾಗಿದ್ದರು. ಹೀಗಾಗಿ ಆರೋಪಿಗಳನ್ನು ಗುರುವಾರ ರಾತ್ರಿ ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಸೈಫನ್ ಸಹೋದರ ಪಿಎಸ್‌ಐ ಆಗಿದ್ದ, ಈತನ ಆಯ್ಕೆ ಬಗ್ಗೆಯೂ ಸಿಐಡಿ ತನಿಖೆ ನಡೆಸುತ್ತಿದೆ.
ಪರೀಕ್ಷಾ ಕೇಂದ್ರದಲ್ಲಿ ಅಕ್ರಮ: ಕಲಬುರಗಿಯ ನೊಬೆಲ್ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿದ್ದ ಪರೀಕ್ಷಾ ಕೇಂದ್ರದಲ್ಲಿ ಇಸ್ಮಾಯಿಲ್ ಖಾದೀರ್ ಅಕ್ರಮವಾಗಿ ಪರೀಕ್ಷೆ ಬರೆದಿದ್ದ. ಕಿಂಗ್‌ಪಿನ್ ರುದ್ರಗೌಡ ಪಾಟೀಲ್ ನೀಡಿದ್ದ ಎಲೆಕ್ಟ್ರಾನಿಕ್ ಬ್ಲೂಟೂತ್ ಡಿವೈಸ್ ಬಳಸಿ ಅಕ್ರಮವಾಗಿ ಪರೀಕ್ಷೆ ಬರೆದು ಇನ್‌ಸರ್ವೀಸ್ ಕೋಟಾದಲ್ಲಿ ಆಯ್ಕೆಯಾದ್ದ. ಸದ್ಯ ಧಾರವಾಡದಲ್ಲಿ ಮೀಸಲು ಪೊಲೀಸ್ ಪೇದೆಯಾಗಿ ಸೇವೆ ಸಲ್ಲಿಸುತ್ತಿರುರುವ ಇಸ್ಮಾಯಿಲ್, ರುದ್ರಗೌಡ ಪಾಟೀಲ್ ಸೇರಿ ಆರು ಜನರ ವಿರುದ್ಧ ಕಲಬುರಗಿ ಸ್ಟೇಷನ್ ಬಜಾರ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕಳೆದ ಒಂದು ವಾರದಿಂದ ಇಸ್ಮಾಯಿಲ್ ಖಾದೀರ್ ನಾಪತ್ತೆಯಾಗಿದ್ದಾನೆ.
ರುದ್ರಗೌಡ ಪಾಟೀಲ್‌ನ ಇಬ್ಬರು ಆಪ್ತರ ಸೆರೆ: ಪ್ರಕರಣದಲ್ಲಿ ಕಿಂಗ್‌ಪಿನ್ ರುದ್ರಗೌಡ ಪಾಟೀಲ್‌ನ ಮತ್ತಿಬ್ಬರು ಆಪ್ತರನ್ನು ಬಂಧಿಸಲಾಗಿದೆ. ಅಫಜಲಪುರ ತಾಲೂಕಿನ ಮಣ್ಣೂರು ನಿವಾಸಿ ಅಸ್ಲಂ ಮುಜಾವರ್ ಹಾಗೂ ಕರಜಗಿ ಗ್ರಾಮದ ಮುನಾಫ್ ಜಮಾದಾರ್ ಬಂಧಿತರು. ಇವರಬ್ಬರೂ ರುದ್ರಗೌಡನ ಜತೆ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿದ್ದರು. ಅಭ್ಯರ್ಥಿಗಳೊಂದಿಗೆ ಡೀಲ್ ಮಾಡುತ್ತಿದ್ದ ಇವರು ಬ್ಲೂಟೂತ್ ಪರಿಕರಗಳನ್ನು ಸರಬರಾಜು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ | ಪ್ರಾಮಾಣಿಕ ಪಿಎಸ್‌ಐ ಅಭ್ಯರ್ಥಿಗಳಿಗೆ ನ್ಯಾಯ ಸಿಗಲಿ: ಗೃಹ ಸಚಿವರಿಗೆ 8 ಶಾಸಕರ ಪತ್ರ