Site icon Vistara News

Viral video: ಅಲಾಯಿ ದೇವರಿಗೆ ಹೂ ನೀಡಿದ ಆಂಜನೇಯ, ವಿಡಿಯೋ ವೈರಲ್‌

muharram festival muharram

ಕೊಪ್ಪಳ: ಜಿಲ್ಲೆಯ ಮೊಹರಂ ಹಬ್ಬ (muharram festival) ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಕೊಪ್ಪಳ ತಾಲೂಕಿನ ಕವಲೂರು ಗ್ರಾಮದಲ್ಲಿ ಪವಾಡಸದೃಶ ಘಟನೆಯೊಂದು ನಡೆದಿದ್ದು, ಅದರ ವಿಡಿಯೋ ಎಲ್ಲೆಡೆ ವೈರಲ್‌ (Viral video) ಆಗುತ್ತಿದೆ.

ಕೊಪ್ಪಳ ತಾಲೂಕಿನ ಕವಲೂರು ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ನಿನ್ನೆ ಈ ಪವಾಡ ನಡೆದಿದೆ. ನಿನ್ನೆ ಮೊಹರಂ ಹಬ್ಬದ ಕತ್ತಲ್ ರಾತ್ರಿ ಹಿನ್ನೆಲೆಯಲ್ಲಿ ಗ್ರಾಮದ ಅಜೀಮ್ ಸಾಬ್ ಎನ್ನುವ ಮುಸ್ಲಿಂ ವ್ಯಕ್ತಿಯೊಬ್ಬರು ಅಲಾಯಿ ದೇವರ ಸವಾರಿ ನಡೆಸುತ್ತಿದ್ದರು. ಇಲ್ಲಿ ಅಲಾಯಿ ದೇವರು ಆಂಜನೇಯನ ಮುಂದೆ ಬಂದು ಹೋಗುವ ರೂಢಿಯಿದೆ. ನಿನ್ನೆ ಆಂಜನೇಯ ದೇವರ ಮುಂದೆ ಹೂವಿಗಾಗಿ ಅಜೀಮ್‌ ಸಾಬ್‌ ಪ್ರಾರ್ಥಿಸಿದ್ದು, ಆಂಜನೇಯ ದೇವರ ಮುಡಿಯ ಮೇಲಿನಿಂದ ಬಲಗಡೆ ಹೂವಿನ ಮಾಲೆ ಬಿದ್ದಿದೆ. ಈ ಆಶ್ಚರ್ಯಕರ ದೃಶ್ಯ ಭಕ್ತಾದಿಗಳ ವಿಡಿಯೋದಲ್ಲಿ ದಾಖಲಾಗಿದೆ. ಈ ವಿಡಿಯೋ ವೈರಲ್‌ ಆಗುತ್ತಿದ್ದು, ದೇವರುಗಳ ಸೌಹಾರ್ದಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಹುಲಿ ಹೆಜ್ಜೆ ಕುಣಿತ

ಕೊಪ್ಪಳ ಜಿಲ್ಲೆಯಾದ್ಯಂತ ಸಂಭ್ರಮದ ಮೊಹರಂ ಆಚರಣೆ ನಡೆಯುತ್ತಿದ್ದು, ಇದು ಇಲ್ಲಿ ಹಿಂದು ಮುಸ್ಲಿಂ‌ ಜನಾಂಗದವರು ಒಟ್ಟಿಗೆ ಆಚರಿಸುವ ಹಬ್ಬವಾಗಿದೆ. ಕೆಲವೆಡೆ ಮುಸ್ಲಿಮರಿಗಿಂತಲೂ ಅಧಿಕವಾಗಿ ಹಿಂದುಗಳೇ ಆಚರಿಸುತ್ತಿದ್ದಾರೆ. ಕುಕನೂರು ತಾಲೂಕಿನ ಕುದ್ರಿಮೋತಿ, ಕುಷ್ಟಗಿ ತಾಲೂಕಿನ ಹನುಮಸಾಗರ ತಾವರಗೇರಾ ಸೇರಿ ಇಡೀ ಜಿಲ್ಲೆ ಮೊಹರಂ ಆಚರಣೆಯಲ್ಲಿದೆ. ಮೊಹರಂ ಹಿನ್ನೆಲೆಯಲ್ಲಿ ಹುಲಿ ವೇಷಧಾರಿಗಳು ರಿವಾಯತ್ ಪದಗಳೊಂದಿಗೆ ಹೆಜ್ಜೆ ಹಾಕಿದರು. ಇಂದು ಮೊಹರಂ ಕಡೆ ದಿನವಾಗಿದ್ದು, ಬೆಳಗಿನ ಜಾವ ಅಲಾಯಿ ದೇವರ ಮೆರವಣಿಗೆ ಹಾಗೂ ಸಂಜೆ ದೇವರ ವಿಸರ್ಜನೆ ನಡೆಯುತ್ತದೆ.

ಅಗ್ನಿ ಕುಂಡ ಪ್ರವೇಶ

ಕಲಬುರಗಿ: ಕಲಬುರಗಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಭಾವೈಕ್ಯತೆ ಸಾರುವ ಮೊಹರಂ ಹಬ್ಬ ಆಚರಣೆಯಾಗುತ್ತಿದೆ. ಮೊಹರಂ ನಿಮ್ಮಿತ್ತ ಹಿಂಚಗೇರ ಗ್ರಾಮದಲ್ಲಿ ಗ್ರಾಮಸ್ಥರು ಅಗ್ನಿಕುಂಡ ತುಳಿದಿದ್ದಾರೆ. ಕಲಬುರಗಿ ‌ಜಿಲ್ಲೆ ಅಫಜಲಪುರ ತಾಲೂಕಿನ ಹಿಂಚಗೇರ ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಭಾಂಧವರು ಸೇರಿಕೊಂಡು ಅಗ್ನಿಕುಂಡ ಪ್ರವೇಶ ಮಾಡಿದರು. ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುವ ಮೊಹರಂ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು.

ಇದನ್ನೂ ಓದಿ: ಕೊಪ್ಪಳದ ಈ ಗ್ರಾಮದಲ್ಲಿ ಮೊಹರಂ ಆಚರಣೆಗೆ ಇಲ್ಲ ಅವಕಾಶ; ಜು.18ರಿಂದಲೇ ನಿಷೇಧಾಜ್ಞೆ ಜಾರಿ

Exit mobile version