Site icon Vistara News

ಮುದ್ರಣ ಮಾಧ್ಯಮದ ಘನತೆ ಉಳಿಯಲಿ: ಪತ್ರಕರ್ತ ಕಲ್ಲೆ ಶಿವೋತ್ತಮ ರಾವ್ ಆಶಯ

ಕಲ್ಲೆ ಶಿವೋತ್ತಮ ರಾವ್

ಬೆಂಗಳೂರು: ಮುದ್ರಣ ಮಾಧ್ಯಮ ಅತ್ಯಂತ ಶ್ರೇಷ್ಠವಾದದ್ದು. ಅದರ ಮೌಲ್ಯ ಕುಸಿಯದಂತೆ ನೋಡಿಕೊಳ್ಳುವ ಹೊಣೆ ಇಂದಿನ ಪೀಳಿಗೆಯ ಮೇಲಿದೆ ಎಂದು ಹಿರಿಯ ಪತ್ರಕರ್ತ, ‘ಜನಪ್ರಗತಿ’ ಪತ್ರಿಕೆಯ ಮಾಜಿ ಸಂಪಾದಕ ಕಲ್ಲೆ ಶಿವೋತ್ತಮ ರಾವ್ ಅವರು ಅಭಿಪ್ರಾಯಪಟ್ಟರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಪತ್ರಿಕೋದ್ಯಮದ ಹಿರಿಯರಿಗೆ ಅವರ ಮನೆಯ ಅಂಗಳದಲ್ಲೇ ಗೌರವಿಸುವ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಸರಣಿಯ ಮೊದಲ ಕಾರ್ಯಕ್ರಮವಾಗಿ ಕಲ್ಲೆ ಶಿವೋತ್ತಮ ರಾವ್ ಅವರನ್ನು ಬೆಂಗಳೂರಿನ ಯಲಹಂಕದಲ್ಲಿರುವ ಅವರ ನಿವಾಸದಲ್ಲಿ ಭಾನುವಾರ ಸನ್ಮಾನಿಸಲಾಯಿತು.

“ಮುದ್ರಿತವಾದದ್ದು ಒಂದು ದಾಖಲೆಯಿದ್ದಂತೆ. ಹಾಗಾಗಿ ಓದುಗರಿಗೆ ಅದರ ಮೇಲೆ ನಂಬಿಕೆ ಹೆಚ್ಚು. ಆ ನಂಬಿಕೆಯನ್ನು ಉಳಿಸಿಕೊಳ್ಳಲು ಇಂದಿನ ಪತ್ರಿಕೋದ್ಯಮ ಶ್ರಮಿಸಬೇಕಾಗಿದೆ. ನಾನು ನನ್ನ ಇಡೀ ಬದುಕಿನಲ್ಲಿ ನುಡಿದಂತೆ ನಡೆದಿದ್ದೇನೆ. ದಲಿತರು, ಹಿಂದುಳಿದವರಿಗೆ, ದುರ್ಬಲರಿಗೆ ದನಿ ನೀಡಲು ಶ್ರಮಿಸಿದ್ದೇನೆ. ಇದು ನನಗೆ ಧನ್ಯತೆಯನ್ನು ನೀಡಿದೆ. ಬದುಕು ಮತ್ತು ಸಿದ್ಧಾಂತ ಎರಡನ್ನೂ ಒಟ್ಟಿಗೆ ಕೊಂಡೊಯ್ದಿದ್ದೇನೆ ಎಂಬ ಹೆಮ್ಮೆ ಇದೆʼʼ ಎಂದರು.

“ಲೋಹಿಯಾ, ಗೋಪಾಲಗೌಡ, ದೇವರಾಜ ಅರಸು, ಎಸ್.ಎಂ.ಕೃಷ್ಣ ಅವರ ಜೊತೆಗೆ ಒಡನಾಡಿದ ನನಗೆ ಪತ್ರಿಕೋದ್ಯಮ ಎನ್ನುವುದು ಜನ ಸಮುದಾಯಕ್ಕೆ ಸಮಾನತೆಯನ್ನು ತಂದುಕೊಡುವ ಒಂದು ಸೇತುವೆಯಾಗಿತ್ತು. ಹಾಗಾಗಿ ನನ್ನ ಪತ್ರಿಕೆಯ ಮೂಲಕ ಅದನ್ನು ಮಾಡಲು ಶ್ರಮಿಸಿದ್ದೇನೆ. ಇಷ್ಟೆಲ್ಲಾ ಮಾಡಿದ ನನ್ನನ್ನು ಇಂದಿನ ಪೀಳಿಗೆ ನೆನಪಿಟ್ಟುಕೊಂಡಿಲ್ಲವೇನೋ ಎಂದುಕೊಳ್ಳುತ್ತಿರುವಾಗ ಕಾರ್ಯನಿರತ ಪತ್ರಕರ್ತರ ಸಂಘ ಮನೆಗೇ ಬಂದು ನನಗೆ ಗೌರವಿಸಿದ್ದನ್ನು ಕಂಡು ಮನದುಂಬಿ ಬಂದಿದೆʼʼ ಎಂದು ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ಮಾತನಾಡಿ ʼ1932ರಲ್ಲಿ ಡಿವಿಜಿ ಅವರು ಹುಟ್ಟುಹಾಕಿದ ಪತ್ರಕರ್ತರ ಸಂಘ ಮುನ್ನಡೆಯಲು ಅನೇಕ ಹಿರಿಯರು ಕಾರಣರಾಗಿದ್ದಾರೆ. ಹಾಗೆಯೇ ನಮ್ಮ ಪತ್ರಿಕೋದ್ಯಮಕ್ಕೆ ಘನತೆಯನ್ನು ತಂದುಕೊಟ್ಟ ಮಹತ್ವದ ಹಿರಿಯರಿದ್ದಾರೆ. ಅಂಥವರಲ್ಲಿ ಕಲ್ಲೆ ಶಿವೋತ್ತಮ ರಾವ್ ಪ್ರಮುಖರು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಹಿರಿಯರ ಅನುಭವಗಳಿಗೆ ಕಿವಿಯಾಗಲು, ಅದನ್ನು ಇಂದಿನ ಪತ್ರಿಕೋದ್ಯಮದಲ್ಲಿ ಅಳವಡಿಸಿಕೊಳ್ಳಲು ಈ ಕಾರ್ಯಕ್ರಮ ರೂಪಿಸಲಾಯಿತುʼʼ ಎಂದರು.

ಕಲ್ಲೆ ಶಿವೋತ್ತಮ ರಾವ್ ಅವರ ಮಗಳು ಅನಿತಾ ಪ್ರಿಯಕಾರಿಣಿ ಮಾತನಾಡಿ, ಅಪ್ಪ ಪತ್ರಿಕೋದ್ಯಮದಲ್ಲಿ ತೀವ್ರವಾಗಿ ತೊಡಗಿಸಿಕೊಂಡಿದ್ದಾಗ ನಮ್ಮ ಕುಟುಂಬ ಅವರಿಗೆ ಬೆನ್ನೆಲುಬಾಗಿ ನಿಂತಿದ್ದನ್ನು ಸ್ಮರಿಸಿದರು. ಅವರ ತತ್ವ, ಆದರ್ಶಗಳನ್ನು ಮನೆಯೊಳಗೂ ಜಾರಿಯಲ್ಲಿಟ್ಟಿದ್ದರು. ಅದು ನಮಗೆ ದಾರಿದೀಪವಾಯಿತು ಎಂದರು.

ಹಿರಿಯ ಪತ್ರಕರ್ತರಾದ ಜಿ ಎನ್ ಮೋಹನ್, ಕಂಕ ಮೂರ್ತಿ, ಕಲ್ಲೆ ಅವರ ಪುತ್ರ ಅಜಿತ್ ಅಶುತೋಷ್ ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಜಿ ಸಿ ಲೋಕೇಶ ಸ್ವಾಗತಿಸಿದರು. ಬೆಂಗಳೂರು ನಗರ ಘಟಕದ ಸೋಮಶೇಖರ್ ಗಾಂಧಿ, ಕೆ.ವಿ.ಪರಮೇಶ್ ಮತ್ತು ದೇವರಾಜ್‌ ಹಾಜರಿದ್ದರು.

ಇದನ್ನೂ ಓದಿ| ಆರ್.ಬ್ರೂಸ್ ಮೆರಿಫೀಲ್ಡ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಪಿ.ಬಲರಾಮ್‌ಗೆ ಸನ್ಮಾನ

Exit mobile version