Site icon Vistara News

Kalyana Rajya Pragathi Paksha | ಕೆಆರ್‌ಪಿ‌ ಪಕ್ಷದ ಬಾವುಟ ಬಿಡುಗಡೆ ಮಾಡಿದ ಅರುಣಾ ಲಕ್ಷ್ಮೀ; ಚುನಾವಣಾ ಪ್ರಚಾರಕ್ಕೆ ಚಾಲನೆ

Kalyana Rajya Pragathi Paksha

ಬಳ್ಳಾರಿ: ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಹೊಸ ಪಕ್ಷ ಭಾನುವಾರ ಚುನಾವಣೆ ಅಖಾಡಕ್ಕೆ ಧುಮುಕಿದೆ. ರೆಡ್ಡಿ ಪತ್ನಿ ಅರುಣಾ ಲಕ್ಷ್ಮೀ ಅವರು, ಅಧಿಕೃತವಾಗಿ‌ ಪಕ್ಷದ ಬಾವುಟವನ್ನು ಬಿಡುಗಡೆಗೊಳಿಸಿ, ಉಡಿ ತುಂಬಿಸಿಕೊಳ್ಳುವ ಮೂಲಕ ಪಕ್ಷದ ಪ್ರಚಾರಕ್ಕೆ ಚಾಲನೆ ನೀಡಿದರು. ಇದರಿಂದಾಗಿ ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ಸೇರಿ ಜೆಡಿಎಸ್‌ನೊಂದಿಗೆ ಪ್ರಾದೇಶಿಕ ಪಕ್ಷವಾಗಿ ರೆಡ್ಡಿಯವರ ʼಕಲ್ಯಾಣ ರಾಜ್ಯ ಪ್ರಗತಿ ಪಕ್ಷʼ (Kalyana Rajya Pragathi Paksha) ಮುಂದಿನ ಚುನಾವಣೆ ಸಿದ್ಧವಾಗಿದೆ.

ಸೆಂಟಿಮೆಂಟ್‌ನಿಂದ ಚುನಾವಣಾ ಪ್ರಚಾರಕ್ಕೆ ಎಂಟ್ರಿ
ಜನಾರ್ದನ ರೆಡ್ಡಿ ರಾಜಕೀಯ ತಂತ್ರಗಾರಿಕೆ ಹೆಣೆಯುವಲ್ಲಿ ಸಿದ್ಧಹಸ್ತರು. ಬಳ್ಳಾರಿಗೆ ಕೋರ್ಟ್‌ನಿಂದ ನೋ ಎಂಟ್ರಿ ಇರುವುದರಿಂದ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಜವಾಬ್ದಾರಿಯನ್ನು ರೆಡ್ಡಿ ಪತ್ನಿ ಅರುಣಾ ಲಕ್ಷ್ಮಿ ಅವರಿಗೆ ವಹಿಸಿದ್ದಾರೆ. ಕುರುಬರ ಮನೆಯಿಂದ ಪ್ರಚಾರ ಆರಂಭಿಸಿದರೆ ಒಳ್ಳೆಯದಾಗುತ್ತದೆ ಎಂಬುದು ನಮ್ಮ ಪತಿ‌ ರೆಡ್ಡಿ ನಂಬಿಕೆ‌. ಅದರಿಂದಾಗಿ ಇಲ್ಲಿಂದಲೇ ಪ್ರಚಾರ ಆರಂಭ ಮಾಡಿದ್ದೇವೆ ಎಂದು ಸ್ವತಃ ರೆಡ್ಡಿ‌ ಪತ್ನಿ ಲಕ್ಷ್ಮೀ ಅವರೇ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಕುರಿ, ಕಂಬಳಿ, ಕನಕದಾಸರ ಮೂರ್ತಿ ಉಡುಗೊರೆ
ಬೆಣಕಲ್ ಗ್ರಾಮದ ಮಹಿಳೆಯರು ಕುರಿಯನ್ನು ಮತ್ತು ಯುವಕರು ಕನಕದಾಸರ ಮೂರ್ತಿಯನ್ನು ಉಡುಗೊರೆಯಾಗಿ ಅರುಣಾ ಲಕ್ಷ್ಮೀ ಅವರಿಗೆ ನೀಡಿದರು. ಗ್ರಾಮದ ಗಂಗಾಧರ ಮತ್ತು ಕೆಂಚಮ್ಮ ದಂಪತಿ ಮನೆಯಲ್ಲಿ ಉಡಿ ತುಂಬುವ ಕಾರ್ಯಕ್ರಮ ನಡೆಯಿತು, ಇದೇ ಸಂದರ್ಭದಲ್ಲಿ ಲಕ್ಷ್ಮೀ ಅವರಿಗೆ ಹೋಳಿಗೆ ಬುತ್ತಿಯನ್ನು ಕಟ್ಟಿಕೊಟ್ಟರು. ಗ್ರಾಮದಲ್ಲಿ ಅರುಣಾ ಲಕ್ಷ್ಮಿ ಅವರಿಗೆ ಉಡಿ‌ ತುಂಬಿದರೆ, ಲಕ್ಷ್ಮೀ ಅವರು‌ ಐದು ಜನರಿಗೆ ಉಡಿ ತುಂಬಿದರು.

ಸರಳ ಕಾರ್ಯಕ್ರಮದಲ್ಲಿ ಬಾವುಟ ಬಿಡುಗಡೆ
ಕೆಆರ್‌ಪಿ‌ ಪಕ್ಷದ ಬಾವುಟವನ್ನು‌ ರೆಡ್ಡಿ ಪತ್ನಿ ಅರುಣಾ ಲಕ್ಷ್ಮೀ ಅವರು ಬೆಣಕಲ್ ಗ್ರಾಮದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದ್ದಾರೆ. ಸಹಕಾರ ಅರ್ಥ ನೀಡುವ ʼಹಸ್ತಲಾಗವʼ ಚಿಹ್ನೆಯನ್ನು ಬಾವುಟದಲ್ಲಿ ಬಳಕೆ ಮಾಡಿದ್ದಾರೆ. ಇದಕ್ಕೂ ಮುನ್ನಾ ಬೆಣಕಲ್ ಗ್ರಾಮದಲ್ಲಿ ಡೊಳ್ಳು ಮತ್ತು ತಾಷಾರಾಂಡೋಲ್ ತಂಡದಿಂದ ಅರುಣಾ ಲಕ್ಷ್ಮೀ ಅವರನ್ನು ಸ್ವಾಗತಿಸಲಾಯಿತು. ಗ್ರಾಮದಲ್ಲಿ ಮೆರವಣಿಗೆ ನಂತರ ದುರುಗಮ್ಮ, ಮರಿಗೆಮ್ಮ ಮತ್ತು ಬೀರಪ್ಪ ದೇವಸ್ಥಾನದಲ್ಲಿ ಲಕ್ಷ್ಮಿ ಪೂಜೆ‌ ಸಲ್ಲಿಸಿದರು.

ಜನರಿಂದ ದೂರ ಮಾಡಲು ಯಾರಿಂದಲೂ ಸಾಧ್ಯವಿಲ್ಲ
ಇಡೀ ರಾಜ್ಯ ಕಲ್ಯಾಣ ಕರ್ನಾಟಕ ಆಗಬೇಕೆಂಬುದು ರೆಡ್ಡಿಯವರ ಬಯಕೆ, ತಾವು ಹುಟ್ಡಿ ಬೆಳೆದ ಬಳ್ಳಾರಿ ಪ್ರಚಂಚದ ಭೂಪಟದಲ್ಲಿ ಕಾಣಬೇಕು. ಅವರ ಆಶಯದಂತೆ ಕೆಲಸ ಮಾಡುವುದು ನನ್ನ ಜವಾಬ್ದಾರಿ, ರೆಡ್ಡಿಯವರಿಗೆ ಕೋರ್ಟ್ ನಿರ್ಬಂಧ ಇರುವುದರಿಂದ ನಾನು ಬೆಣಕಲ್ ಗ್ರಾಮಕ್ಕೆ ಬಂದಿದ್ದೇನೆ ಎಂದು ಲಕ್ಷ್ಮಿ ತಿಳಿಸಿದ್ದಾರೆ. ಕುರುಬ ಸಮಾಜದ ಆಶೀರ್ವಾದ ಇದ್ದರೆ, ಗೆದ್ದೆ ಗೆಲ್ಲುತ್ತೇವೆ ಎಂಬುದು ನನ್ನ ಪತಿಯವರ ನಂಬಿಕೆ ಎಂದ ಅವರು, ಬಸವಣ್ಣ, ವಾಲ್ಮೀಕಿ, ಕನಕದಾಸರನ್ನು ನೆನೆಯುತ್ತಾ, ರೆಡ್ಡಿಯನ್ನು ಜ‌ನರಿಂದ ದೂರ ಮಾಡಲು ಯಾರಿಂದಲೂ ಸಾಧ್ಯವಿಲ್ಲ, ತಂದೆ-ತಾಯಿ ಬಂಧು ಬಳಗ ಎಲ್ಲವೂ ನೀವೇ, ನಿಮ್ಮನ್ನು ಬಿಟ್ಟು‌ ಯಾರೂ ಇಲ್ಲ ಎಂದರು.

ಇದನ್ನೂ ಓದಿ | KMF Nandini | ನಂದಿನಿಗಿದೆ ಪ್ರತ್ಯೇಕ ಅಸ್ತಿತ್ವ; ಶಾ ಹೇಳಿದ್ದೇ ಒಂದು, ಅರ್ಥೈಸಿಕೊಂಡಿದ್ದೇ ಇನ್ನೊಂದು: ಸಿಎಂ ಬೊಮ್ಮಾಯಿ

Exit mobile version