Site icon Vistara News

ಕಲ್ಯಾಣ ಕರ್ನಾಟಕದಲ್ಲಿ ʼಕಲ್ಯಾಣ ಉತ್ಸವʼ; ಏಳು ಜಿಲ್ಲೆಗಳಲ್ಲಿ ಜನರಲ್ಲಿ ಇಮ್ಮಡಿಗೊಂಡ ಉತ್ಸಾಹ

bellary kalyana

ಬೆಂಗಳೂರು: ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಜಿಲ್ಲೆಗಳಾದ ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು, ಬೀದರ್‌, ಯಾದಗಿರಿ ಜಿಲ್ಲೆಗಳಲ್ಲಿ ಹೈದ್ರಾಬಾದ್‌ ವಿಮೋಚನ ದಿನಾಚರಣೆ (Hyderabad-Karnataka Liberation Day) ಅಂಗವಾಗಿ ಕಲ್ಯಾಣ ಕರ್ನಾಟಕ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು.

ಶ್ರೀರಾಮುಲು ಅನುಪಸ್ಥಿತಿಯಲ್ಲಿ ಆಚರಣೆ
ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅನುಪಸ್ಥಿತಿಯಲ್ಲಿ ಜಿಲ್ಲಾಧಿಕಾರಿ ಪವನ್‌ಕುಮಾರ್ ಮಾಲಪಾಟಿ ಬಳ್ಳಾರಿಯ ಮುನ್ಸಿಪಾಲ್ ಕಾಲೇಜು ಮೈದಾನದಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಪಥಸಂಚಲನದ ವಂದನೆ ಸ್ವೀಕರಿಸಿ, ಧ್ವಜಾರೋಹಣ ನೆರವೇರಿಸಿದರು.

ಕೇಂದ್ರ ಸರ್ಕಾರದಿಂದ ತೆಲಂಗಾಣ ರಾಜ್ಯದ ಸಿಕಿಂದ್ರಬಾದ್‌ನ ಪರೇಡ್ ಮೈದಾನದಲ್ಲಿ ಏರ್ಪಡಿಸಿರುವ ಹೈದ್ರಾಬಾದ್ ವಿಮೋಚನಾ ದಿನಾಚರಣೆಯಲ್ಲಿ ಸಚಿವ ಬಿ.ಶ್ರೀರಾಮುಲು ಮುಖ್ಯಮಂತ್ರಿ ಪರವಾಗಿ ರಾಜ್ಯದ ಪ್ರತಿನಿಧಿಯಾಗಿ ಭಾಗವಹಿಸಿದ್ದಾರೆ. ಅಲ್ಲಿನ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮೀತ್ ಷಾ, ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಭಾಗವಹಿಸಿದ್ದಾರೆ. ಅಲ್ಲಿ ಪ್ಯಾರಾ ಮಿಲಿಟರಿಯಿಂದ ಪಥ ಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಶ್ರೀರಾಮುಲು ಕಾರ್ಯಕ್ರಮಕ್ಕೆ ಆಗಮಿಸದ ಹಿನ್ನೆಲೆಯಲ್ಲಿ ಡಿಸಿ ಪವನ್‌ಕುಮಾರ್ ಮಾಲಪಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಬಳ್ಳಾರಿ ಶಾಸಕ ಜಿ.ಸೋಮಶೇಖರ್ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸೈದುಲಾ ಅಡಾವತ್, ಎಡಿಸಿ ಮಂಜುನಾಥ್, ಎಸಿ ಆಕಾಶ್ ಶಂಕರ್, ಬುಡಾ ಅಧ್ಯಕ್ಷ ಮಾರುತಿ ಪ್ರಸಾದ್ ಸೇರಿದಂತೆ ಕಾರ್ಯಕ್ರಮದಲ್ಲಿ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯನಗರದಲ್ಲಿ ಸಚಿವೆ ಜೊಲ್ಲೆಯಿಂದ ಚಾಲನೆ
ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಧ್ವಜಾರೋಹಣ ನೆರವೇರಿಸುವ ಮೂಲಕ ವಿಜಯನಗರದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಗರದ ಪುನೀತ್ ರಾಜಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಯಿತು.

ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, 74ನೇ ಕಲ್ಯಾಣ ಕರ್ನಾಟಕ ಉತ್ಸವವನ್ನು ಆಚರಿಸಿಕೊಂಡು ಬರಲಾಗಿದೆ. ಬ್ರಿಟಿಷರಿಂದ ಭಾರತ ಸ್ವತಂತ್ರಗೊಂಡರೂ, ಹೈದ್ರಾಬಾದ್ ನಿಜಾಮರಿಂದ ಹೈದ್ರಾಬಾದ್ ಕರ್ನಾಟಕ ಭಾಗವು ಮುಕ್ತಿ ಪಡೆದಿರಲಿಲ್ಲ. ಒಂದು ವರ್ಷದ ಬಳಿಕ ಈ ಭಾಗಕ್ಕೆ ಸ್ವಾತಂತ್ರ್ಯ ದೊರೆತಿದ್ದು, ಈ ದಿನವನ್ನು ಪ್ರತಿ ವರ್ಷವೂ ಸಂಭ್ರಮದಿಂದ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ವಿಜಯನಗರ ಸಂಸದ ದೇವೇಂದ್ರಪ್ಪ, ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್, ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್, ಅಪರ ಜಿಲ್ಲಾಧಿಕಾರಿ ಮಹೇಸದ್ ಬಾಬು, ನಗರಸಭೆ ಅಧ್ಯಕ್ಷೆ ಸುಂಕಮ್ಮ, ವಾರ್ತಾ ಇಲಾಖೆ ಅಧಿಕಾರಿ ರಾಮಲಿಂಗಪ್ಪ ಸೇರಿ ಇತರ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.

ಕೊಪ್ಪಳದಲ್ಲಿ ಆನಂದ್‌ ಸಿಂಗ್‌ ಚಾಲನೆ

ಕೊಪ್ಪಳದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮ.

ಹೈದ್ರಾಬಾದ್‌ ನಿಜಾಮನ ಕಪಿಮುಷ್ಠಿಯಿಂದ ಮುಕ್ತಿಹೊಂದಿದ ಹಿನ್ನೆಲೆಯಲ್ಲಿ ಆಚರಿಸಲಾಗುವ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯನ್ನು ಕೊಪ್ಪಳದಲ್ಲಿಯೂ ಸಂಭ್ರಮದಿಂದ ಆಚರಿಸಲಾಗಿದ್ದು, ಜಿಲ್ಲಾ ಕ್ರೀಡಾಂಗಣದಲ್ಲಿ ಉಸ್ತುವಾರಿ ಸಚಿವ ಆನಂದ್‌ಸಿಂಗ್‌ ರಾಷ್ಟ್ರ ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಅವರು ತೆರೆದ ವಾಹನದಲ್ಲಿ ಪರೇಡ್‌ ವೀಕ್ಷಿಸಿದರು. ಬಳಿಕ ಪೊಲೀಸ್‌, ಗೃಹರಕ್ಷಕದಳ, ಅರಣ್ಯ, ಸ್ಕೌಟ್ಸ್, ಗೈಡ್ಸ್‌, ಸೇವಾದಳದ ತಂಡಗಳಿಂದ ಗೌರವ ವಂದನೆ ಸ್ವೀಕರಿಸಿದರು.

ಈ ವೇಳೆ ಸಚಿವ ಆನಂದ್‌ಸಿಂಗ್‌ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗಕ್ಕೆ ಒಂದು ವರ್ಷ ಒಂದು ತಿಂಗಳು, ಎರಡು ದಿನದ ಬಳಿಕ ಸ್ವಾತಂತ್ರ್ಯ ಸಿಕ್ಕಿದೆ. ನಿಜಾಮನ ಆಡಳಿತದಲ್ಲಿ ಈ ಭಾಗದ ಜನರು ನಲುಗಿ ಹೋಗಿದ್ದರು. ಹೈದ್ರಾಬಾದ್‌ ನಿಜಾಮನ ಆಡಳಿತದಿಂದ ಮುಕ್ತಿಹೊಂದಲು ಈ ಭಾಗದ ಅನೇಕ ವಿಮೋಚನಾ ಚಳವಳಿಯ ಹೋರಾಟಗಾರರು ತ್ಯಾಗ ಬಲಿದಾನ ಮಾಡಿದ್ದಾರೆ. ಭಾರತ ಒಕ್ಕೂಟಕ್ಕೆ ಸೇರುವುದಿಲ್ಲ ಎನ್ನುತ್ತಿದ್ದ ನಿಜಾಮನ ವಿರುದ್ಧ ವಲ್ಲಭಭಾಯಿ ಪಟೇಲ್‌ ಅವರು ಸೇನಾ ಕಾರ್ಯಾಚರಣೆ ಮೂಲಕ ಬಗ್ಗುಬಡಿದು ನಿಜಾಮ ಆಡಳಿತದಿಂದ ವಿಮೋಚನೆಗೊಳಿಸಿದರು ಎಂದು ಸ್ಮರಿಸಿದರು.

ಸಂಸದ ಸಂಗಣ್ಣ ಕರಡಿ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಜಿಲ್ಲಾಧಿಕಾರಿ ಎಂ. ಸುಂದರೇಶಬಾಬು, ಜಿಲ್ಲಾ ಪಂಚಾಯತ್ ಸಿಇಓ ಫೌಜಿಯಾ ತರನ್ನುಮ್ ಸೇರಿದಂತೆ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಧ್ವಜಾರೋಹಣದಲ್ಲಿ ರಾಷ್ಟ್ರಧ್ವಜಕ್ಕೆ ಹಗ್ಗದ ತೊಡಕು
ಕುಷ್ಟಗಿ ತಹಸೀಲ್ದಾರ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸುವಾಗ ಹಗ್ಗ ಸಿಲುಕಿ ಸಮಸ್ಯೆಯಾಗಿತ್ತು. ಈ ವೇಳೆ ಯುವಕನೊಬ್ಬ ಸರಸರನೇ ಧ್ವಜದ ಕಂಬವೇರಿ ಸರಿಪಡಿಸಿದ್ದಾನೆ.

ಬೀದರ್‌ನಲ್ಲಿ ಜಿಲ್ಲಾಧಿಕಾರಿ ಚಾಲನೆ
ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಪ್ರಯುಕ್ತ ಬೀದರ್‌ನಲ್ಲಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿಧಾನ ಪರಿಷತ್ ಉಪಾ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ, ಶಾಸಕ ರಹೀಂಖಾನ್‌, ಬೀದರ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ. ಕೀಶೋರ್ ಬಾಬು ಇದ್ದರು.

ರಾಯಚೂರಲ್ಲಿ ಜನಪ್ರತಿನಿಧಿಗಳು ಚಕ್ಕರ್‌
ರಾಯಚೂರಿನಲ್ಲಿ ಜಿಲ್ಲಾಧಿಕಾರಿ ಚಂದ್ರಶೇಖರ ನಾಯ್ಕ್ ಧ್ವಜಾರೋಹಣ ನೆರವೇರಿಸುವ ಮೂಲಕ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಸದ ರಾಜಾ ಅಮರೇಶ್ವರ ನಾಯ್ಕ್, ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಬಿ ಪಾಟೀಲ್ ಮುನೇನಕೊಪ್ಪ, ರಾಯಚೂರು ನಗರ ಶಾಸಕ ಶಿವರಾಜ್ ಪಾಟೀಲ್, ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ವಿಧಾನ ಪರಿಷತ್ ಸದಸ್ಯ ಶರಣೇಗೌಡ ಬಯ್ಯಾಪುರ ಸೇರಿದಂತೆ ಬಹುತೇಕ ಜನಪ್ರತಿನಿಧಿಗಳು ಗೈರು ಹಾಜರಾಗಿದ್ದರು.

ಯಾದಗಿರಿಯಲ್ಲಿ ಚಾಲನೆ
ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ನಿಮಿತ್ತ ಯಾದಗಿರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್‌ ಜಿಲ್ಲಾ ಕ್ರೀಡಾಂಗಣದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಶಾಸಕ ವೆಂಕಟರೆಡ್ಡಿ ಮುದ್ನಾಳ, ಜಿಲ್ಲಾಧಿಕಾರಿ ಸ್ನೇಹಲ್ ಆರ್., ಎಸ್‌ಪಿ ಡಾ.ಸಿ.ಬಿ. ವೇದಮೂರ್ತಿ‌ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

ಇದನ್ನೂ ಓದಿ | ಕಲ್ಯಾಣ ಕರ್ನಾಟಕದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ; ಹೈ-ಕ ವಿಮೋಚನಾ ದಿನಕ್ಕೆ ಅದ್ಧೂರಿ ಕಾರ್ಯಕ್ರಮ

Exit mobile version