ಬೆಂಗಳೂರು: ನಾಡಿನ ಖ್ಯಾತ ಸಾಹಿತಿ, ನಾಡೋಜ ಪ್ರೊ. ಕಮಲಾ ಹಂಪನಾ (Kamala Hampana) ಅವರು ಇಂದು (ಜೂನ್ 22) ನಿಧನ ಹೊಂದಿದರು. ಅವರಿಗೆ 89 ವರ್ಷ ವಯಸ್ಸಾಗಿತ್ತು. ನಾಡಿನ ಅಗ್ರಗಣ್ಯ ಮಹಿಳಾ ಸಾಹಿತಿಯಾಗಿ ಗುರುತಿಸಿಕೊಂಡಿದ್ದ ಕಮಲಾ ಹಂಪನಾ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ʼʼಹಿರಿಯ ಸಾಹಿತಿ ಡಾ.ಕಮಲಾ ಹಂಪನಾ ಅವರ ಅನಿರೀಕ್ಷಿತ ಸಾವಿನಿಂದ ದುಃಖಿತನಾಗಿದ್ದೇನೆ. ಸಾಹಿತ್ಯ ಕೃಷಿಯ ಜತೆ ಸಂಶೋಧನೆ ಮತ್ತು ಬೋಧನೆಗಳಿಂದಲೂ ಜನಪ್ರಿಯರಾಗಿದ್ದ ಡಾ.ಕಮಲಾ ಅವರದ್ದು ಸರ್ವರಿಗೂ ಒಳಿತನ್ನು ಬಯಸಿದ ಜೀವ. ಡಾ.ಹಂಪ ನಾಗರಾಜಯ್ಯ ಮತ್ತವರ ಕುಟುಂಬದ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ.
ಮೃತರ ಆತ್ಮಕ್ಕೆ ಶಾಂತಿ ಕೋರುವೆ” ಎಂದು ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಹಿರಿಯ ಸಾಹಿತಿ ಡಾ.ಕಮಲ ಹಂಪನಾ ಅವರ ಅನಿರೀಕ್ಷಿತ ಸಾವಿನಿಂದ ದು:ಖಿತನಾಗಿದ್ದೇನೆ.
— CM of Karnataka (@CMofKarnataka) June 22, 2024
ಸಾಹಿತ್ಯ ಕೃಷಿಯ ಜೊತೆ ಸಂಶೋಧನೆ ಮತ್ತು ಬೋಧನೆಗಳಿಂದಲೂ ಜನಪ್ರಿಯರಾಗಿದ್ದ ಡಾ.ಕಮಲಾ ಅವರದ್ದು ಸರ್ವರಿಗೂ ಒಳಿತನ್ನು ಬಯಸಿದ ಜೀವ.
ಡಾ.ಹಂಪ ನಾಗರಾಜಯ್ಯ ಮತ್ತವರ ಕುಟುಂಬದ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ.
ಮೃತರ ಆತ್ಮಕ್ಕೆ ಶಾಂತಿ ಕೋರುವೆ.
-… pic.twitter.com/mIKLAR9jAF
ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭ
ಡಾ.ಕಮಲಾ ಹಂಪನಾ ಅವರು 1935ರಲ್ಲಿ ದೇವನಹಳ್ಳಿಯಲ್ಲಿ ಸಿ.ರಂಗಧಾನಮನಾಯಕ್ ಮತ್ತು ಲಕ್ಷ್ಮಮ್ಮ ದಂಪತಿಗೆ ಜನಿಸಿದರು. ಕನ್ನಡ ಸಾಹಿತ್ಯ ಲೋಕದಲ್ಲಿ, ಸಂಶೋಧನಾ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿರುವ ಅವರು 1959ರಲ್ಲಿ ಕನ್ನಡ ಶಿಕ್ಷಕಿಯಾಗಿ ತಮ್ಮ ವೃತ್ತಿಜೀವನ ಆರಂಭಿಸಿದರು. ಮೈಸೂರು, ಬೆಂಗಳೂರು ಮಹಾರಾಣಿ ಮಹಿಳಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ ಅವರು ನಂತರ ಬೆಂಗಳೂರಿನ ವಿಜಯನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕೆಲಸ ಮಾಡಿದರು. ನಿವೃತ್ತರಾದ ನಂತರವೂ ತಮ್ಮ ನೆಚ್ಚಿನ ಅಧ್ಯಾಪನ ಕೆಲಸ ಮುಂದುವರಿಸಿದರು. ಮೈಸೂರು ವಿವಿ ಜೈನಶಾಸ್ತ್ರ, ಪ್ರಾಕೃತ ಅಧ್ಯಯನದ ಅಧ್ಯಕ್ಷರಾಗಿ, ಹಂಪಿ ಕನ್ನಡ ವಿವಿ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದರು.
ತಮ್ಮ ಅಧ್ಯಯನ, ಅಧ್ಯಾಪನ, ಲೇಖನ, ಭಾಷಣ ಮತ್ತು ಸಂಶೋಧನೆಗಳಿಂದ 60 ವರ್ಷಗಳ ಕಾಲ ಸಾಹಿತ್ಯ ಕ್ಷೇತ್ರದಲ್ಲಿ ಅವಿರತವಾಗಿ ತೊಡಗಿಸಿಕೊಂಡಿದ್ದ ಡಾ. ಕಮಲಾ ಹಂಪನಾ ಅವರು ಸಮಕಾಲೀನ ಕನ್ನಡ ಸಾಹಿತ್ಯದ ಹಿರಿಯ ಬರಹಗಾರ್ತಿಯಾಗಿದ್ದರು. ಅವರ ಪತಿ ಪತಿ ಹಂ.ಪ.ನಾಗರಾಜಯ್ಯ ಅವರೂ ಸಾಹಿತಿ, ಸಂಶೋಧಕರಾಗಿ ಗುರುತಿಸಿಕೊಂಡಿದ್ದಾರೆ.
ಹಲವು ಕೃತಿ
ಕಮಲಾ ಹಂಪನಾ ಅವರ ಲೇಖನಿಯಿಂದ ಹಲವು ಕೃತಿ, ಸಂಶೋಧನಾ ಬರಹಗಳು ಮೂಡಿ ಬಂದಿವೆ. ಕಥಾ ಸಂಕಲನ, ಕಾದಂಬರಿಯಿಂದ ಹಿಡಿದು ಸಂಶೋಧನಾ ಕೃತಿಗಳ ವರೆಗೆ ವಿವಿಧ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿದ್ದಾರೆ. ʼನಕ್ಕಿತು ಹಾಲಿನ ಬಟ್ಟಲುʼ, ʼರೆಕ್ಕೆ ಮುರಿದಿತ್ತುʼ, ʼಚಂದನಾʼ, ʼಬಣವೆʼ ಕಥಾ ಸಂಲನಗಳು. ʼಬುಗುಡಿʼ, ʼಬಿಂದಲಿʼ ವಚನ ಸಂಕಲನ. ʼತುರಂಗ ಭಾರತ – ಒಂದು ಅಧ್ಯಯನʼ, ʼಶಾಂತಿನಾಥʼ, ʼಆದರ್ಶ ಜೈನ ಮಹಿಳೆಯರುʼ, ʼಅನೇಕಾಂತವಾದʼ, ʼನಾಡು ನುಡಿ ನಾವುʼ, ʼಜೈನ ಸಾಹಿತ್ಯ ಪರಿಸರʼ, ʼಬದ್ದವಣʼ, ʼರೋಣದ ಬಸದಿʼ, ʼಮಹಾಮಂಡಲೇಶ್ವರಿ ರಾಣಿ ಚೆನ್ನಭೈರಾದೇವಿ ಮತ್ತು ಇತರ ಕರಾವಳಿ ರಾಣಿಯರುʼ ಇತ್ಯಾದಿ ಸಂಶೋಧನಾ ಲೇಖನಗಳು.
ʼಅಕ್ಕ ಮಹಾದೇವಿʼ, ʼಹೆಳವನಕಟ್ಟೆ ಗಿರಿಯಮ್ಮʼ, ʼವೀರವನಿತೆ ಓಬವ್ವʼ, ʼಜನ್ನʼ, ʼಚಿಕ್ಕವರಿಗಾಗಿ ಚಿತ್ರದುರ್ಗಾʼ, ʼಡಾ.ಬಿ.ಆರ್. ಅಂಬೇಡ್ಕರ್ʼ, ʼಮಳಬಾಗಿಲುʼ, ʼಮಕ್ಕಳೊಡನೆ ಮಾತುಕತೆʼ ಶಿಶು ಸಾಹಿತ್ಯ. ʼಬಕುಳʼ, ʼಬಾನಾಡಿʼ, ʼಬೆಳ್ಳಕ್ಕಿʼ ಆಕಾಶವಾಣಿ ನಾಟಕ ರೂಪಕಗಳು. ಇತರ ಭಾಷೆಗಳಿಂದ ʼಬೀಜಾಕ್ಷರ ಮಾಲೆʼ, ʼಜಾತಿ ನಿರ್ಮೂಲನೆʼ, ʼಭಾರತದಲ್ಲಿ ಜಾತಿಗಳುʼ, ʼಏಷಿಯಾದ ಹಣತೆಗಳುʼ, ʼಜಾತಿ ಮೀಮಾಂಸೆʼ ಸೇರಿದಂತೆ ಅನೇಕ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಜತೆಗೆ ಆತ್ಮಕಥೆ, ವಿಮರ್ಶೆಗಳನ್ನೂ ಬರೆದಿದ್ದಾರೆ.
ಸಂದ ಪ್ರಶಸ್ತಿಗಳು
ಕಮಲಾ ಹಂಪನಾ ಅವರನ್ನು ಹುಡುಕಿಕೊಂಡು ಹಲವು ಪ್ರಶಸ್ತಿಗಳು ಬಂದಿವೆ. ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಬಾಬಾ ಆಮ್ಟೆ ರಾಷ್ಟ್ರೀಯ ಪ್ರಶಸ್ತಿ, ಸಾಹಿತ್ಯ ವಿಶಾರದೆ ಪ್ರಶಸ್ತಿ, ಗೊಮ್ಮಟೇಶ್ವರ ವಿದ್ಯಾಪೀಠ ಪ್ರಶಸ್ತಿ, ವರ್ಷದ ಲೇಖಕಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ದಾನ ಚಿಂತಾಮಣಿ ಪ್ರಶಸ್ತಿ ಈ ಪೈಕಿ ಪ್ರಮುಖವಾದವು. ಅಲ್ಲದೆ 2003ರಲ್ಲಿ ಮೂಡುಬಿದಿರೆಯಲ್ಲಿ ನಡೆದ 71ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
ದೇಹ ದಾನ
ಕಮಲಾ ಹಂಪನಾ ಅವರ ಇಚ್ಛೆಯಂತೆ ರಾಮಯ್ಯ ಮೆಡಿಕಲ್ ಕಾಲೇಜಿಗೆ ಕಣ್ಣು ಮತ್ತು ದೇಹ ದಾನ ಮಾಡಲಾಗುವುದು.ಸಂಜೆ 5ರ ತನಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬಳಿಕ ರಾಮಯ್ಯ ಮೆಡಿಕಲ್ ಕಾಲೇಜಿಗೆ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಕೇಂದ್ರ ಸಚಿವ ವಿ.ಸೋಮಣ್ಣ ಮತ್ತಿತರರು ಈಗಾಗಲೇ ಅಂತಿಮ ದರ್ಶನ ಪಡೆದಿದ್ದಾರೆ.
ʼʼ2 – 3 ದಿನಗಳ ಹಿಂದೆಯಷ್ಟೇ ಅವರು ತಮ್ಮ ಅಂತಿಮ ಆಸೆಯನ್ನು ತಿಳಿಸಿದ್ದರು. ನಿಧನದ ನಂತರ ರಾಜಾಜಿನಗರ ಮನೆಯಲ್ಲೇ ಅಂರಿತಿಮ ದರ್ಶನಕ್ಕೆ ವ್ಯವಸ್ಥೆ ಮಾಡಬೇಕು ಎಂದು ಹೇಳಿದ್ದರು. ನೇತ್ರದಾನ ಮಾತ್ರವಲ್ಲದೇ ಇತರ ಅಂಗಗಳನ್ನೂ ದಾನ ಮಾಡಬೇಕು ಎಂದು ಬರೆಸಿಕೊಂಡಿದ್ದರುʼʼ ಎಂದು ಅವರ ಪುತ್ರಿ ವಿಸ್ತಾರ ನ್ಯೂಸ್‌ಗೆ ತಿಳಿಸಿದ್ದಾರೆ.
ಇದನ್ನೂ ಓದಿ: Kamala Hampana: ಖ್ಯಾತ ಸಾಹಿತಿ ನಾಡೋಜ ಕಮಲಾ ಹಂಪನಾ ಇನ್ನಿಲ್ಲ