ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ವೇಳೆ ವಿವಿಧ ಗಣ್ಯರನ್ನು, ಸಾಧಕರನ್ನು ಅವಮಾನಿಸಲಾಗಿದೆ ಎಂಬ ಆರೋಪಗಳು ಮುಂದುವರಿದಿವೆ. ಈ ಹಿಂದಿನ ಪ್ರೊ. ಬರಗೂರು ರಾಮಚಂದ್ರಪ್ಪ ಸಮಿತಿ ಮಾಡಿದ ಎಡವಟ್ಟುಗಳನ್ನು ಸರಿಪಡಿಲು ಹೋದ ರಾಜ್ಯ ಸರ್ಕಾರ ಮತ್ತಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡು ಹೊರಬರಲಾಗದೆ ಒದ್ದಾಡುತ್ತಿದೆ. ಇದೀಗ, ಕನಕದಾಸರಿಗೆ ಅವಮಾನ ಮಾಡಲಾಗಿದೆ ಎಂದು ಕಾಗಿನೆಲೆ ಸಂಸ್ಥಾನವು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದೆ.
ಬಸವಣ್ಣನವರಿಗೆ ಅವಮಾನ ಮಾಡಲಾಗಿದೆ ಎಂದು ವೀರಶೈವ ಲಿಂಗಾಯತ ಸಮುದಾಯದ ಅನೇಕ ಮಠಾಧೀಶರು ಈ ಹಿಂದೆ ಆಕ್ಷೇಪ ವ್ಯಕ್ತಪಡಿಸಿದ್ದರು. ರಾಷ್ಟ್ರಕವಿ ಕುವೆಂಪು ಹಾಗೂ ನಾಡಗೀತೆಯನ್ನು ಅವಮಾನಿಸಲಾಗಿದೆ ಎಂದು ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ರಾಜ್ಯ ಒಕ್ಕಲಿಗರ ಸಂಘದಿಂದ ಆಕ್ಷೇಪಿಸಲಾಗಿತ್ತು.
ಇದನ್ನೂ ಓದಿ | Text book | ಪಠ್ಯ ಪುಸ್ತಕ ಪರಿಷ್ಕರಣೆ ಎಡವಟ್ಟು ತಿದ್ದಲಿದೆ ಶಿಕ್ಷಣ ಇಲಾಖೆ!
ಇದೀಗ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಚಿತ್ರದುರ್ಗದ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಪತ್ರ ಬರೆದಿದ್ದಾರೆ.
2021-22ರ 9ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಭಕ್ತಿ ಪಂಥದ ಕುರಿತು ದಾಸ ಶ್ರೇಷ್ಠ ಕನಕದಾಸರ ಬಗ್ಗೆ ಒಂದು ಪುಟಕ್ಕೂ ಹೆಚ್ಚಿನ ಮಾಹಿತಿ ಇದ್ದು, ಈ ಗಿನ ಪರಿಷ್ಕರಣೆಯಲ್ಲಿ 2022-23ರ 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದ ಭಕ್ತಿ ಪಂಥದಲ್ಲಿ ಕೇವಲ ಒಂದೇ ಸಾಲಿನಲ್ಲಿ ಪರಿಚಯಿಸಿರುವ ಕಾರಣ ತಿಳಿಯುತ್ತಿಲ್ಲ.
16ನೇ ಶತಮಾನದಲ್ಲಿ ಸಾಮಾಜಿಕ ವೈರುದ್ಯಗಳ ವಿರುದ್ಧ, ಜಾತೀಯತೆಯನ್ನು ಹೋಗಲಾಡಿಸಲು ಬಹುದೊಡ್ಡ ಕೊಡುಗೆಯನ್ನು ನೀಡಿದವರು. ಕೀರ್ತನೆಗಳ ಮೂಲಕ ದಾಸ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕನಕದಾಸರ ಕುರಿತು ಮಾಹಿತಿ ಇಲ್ಲದೇ ಇರುವುದು ಎಷ್ಟು ಸರಿ. ಈ ಎಲ್ಲ ವಿಚಾರವನ್ನೂ ತಾವು ಮನಗಂಡು ಪಠ್ಯಪುಸ್ತಕ ಪರಿಷ್ಕರಣ ಸಮಿತಿಗೆ ಸೂಚನೆ ನೀಡಿ ಆಗಿರುವ ತಪ್ಪುಗಳನ್ನು ತಿದ್ದಿ ಕನಕದಾಸರನ್ನು ಕುರಿತು ಸರಿಯಾದ ಮಾಹಿತಿಯನ್ನು ಪಠ್ಯಪುಸ್ತಕದಲ್ಲಿ ನೀಡಬೇಕೆಂದು ಈ ಮೂಲಕ ತಿಳಿಯಬಯಸುತ್ತೇವೆ.
ತಜ್ಞರಲ್ಲದ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿಯನ್ನು ರದ್ದುಗೊಳಿಸಿ ಈಗಾಗಲೆ ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ಇರುವ ಪಠ್ಯವನ್ನೇ ಮುಂದುವರಿಸಲು ತಿಳಿಯಬಯಸುತ್ತೇನೆ ಎಂದು ಸ್ವಾಮೀಜಿ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಪಠ್ಯಪುಸ್ತಕ ಪರಿಷ್ಕರಣೆಯನ್ನು ಯಾವುದೇ ಕಾರಣಕ್ಕೆ ಹಿಪಡೆಯುವುದಿಲ್ಲ ಎಂದು ಕಂದಾಯ ಸಚಿವ ಗುರುವಾರವಷ್ಟೆ ಸುದ್ದಿಗೋಷ್ಠಿ ನಡೆಸಿ ತಿಳಿಸಿದ್ದರು. ಇದೇ ವೇಳೆ, ಶಿಕ್ಷಣ ಇಲಾಖೆಯ ಅಧಿಕಾರಿಗಳೇ ಕುಳಿತು ತಪ್ಪುಗಳನ್ನು ತಿದ್ದುವ ಪ್ರಯತ್ನಕ್ಕೂ ಸರ್ಕಾರ ಚಾಲನೆ ನೀಡಿತ್ತು. ದಿನೇದಿನ ತಣ್ಣಗಾಗುವ ಬದಲು ಪಠ್ಯಪುಸ್ತಕ ವಿವಾದ ಹೊಸ ತಿರುವ ಪಡೆಯುತ್ತಲೇ ಇರುವುದು ಬಿಜೆಪಿ ಸರ್ಕಾರಕ್ಕೆ ಮುಜುಗರ ಹೆಚ್ಚಿಸಿದೆ.
ಇದನ್ನೂ ಓದಿ | Text book | ಮರುಪರಿಷ್ಕೃತ ಪಠ್ಯಪುಸ್ತಕ ಹಿಂಪಡೆಯಲು ಸಿಎಂಗೆ ಹೆಚ್.ಡಿ. ದೇವೇಗೌಡ ಪತ್ರ