Site icon Vistara News

Kannada Bhavana | ರಾಜಕೀಯಕ್ಕಾಗಿ ಗಡಿಯಾಚೆ ಸಮಸ್ಯೆ ಸೃಷ್ಟಿ: ಸಿಎಂ ಬೊಮ್ಮಾಯಿ

bjp-karnataka-will launch four rallies in karnataka in february

ಬೆಳಗಾವಿ: ರಾಜಕೀಯ ಕಾರಣಕ್ಕಾಗಿ ಮಹಾರಾಷ್ಟ್ರದಲ್ಲಿ ಗಡಿ ಸಮಸ್ಯೆ ಸೃಷ್ಟಿ (Kannada Bhavana) ಮಾಡಲಾಗುತ್ತಿದೆ. ಕರ್ನಾಟಕ ಎಂದೂ ಗಡಿ ಸಮಸ್ಯೆ ಸೃಷ್ಟಿಸಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ನಗರದ ಕನ್ನಡ ಭವನ ಕ್ಷೇಮಾಭಿವೃದ್ಧಿ ಸಂಘದ ಕನ್ನಡ ಭವನ ರಂಗಮಂದಿರವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು. ರಾಜಕೀಯವಾಗಿ ಗಡಿಯಾಚೆ ಸಮಸ್ಯೆ ಪ್ರಾರಂಭಿಸಿದ್ದಾರೆ. ಕರ್ನಾಟಕದಲ್ಲಿ ಯಾವತ್ತೂ ಹಾಗೆ ಮಾಡಿಲ್ಲ. ಕನ್ನಡಿಗರ ರಕ್ಷಣೆ ಕಾರ್ಯವನ್ನು ಸದಾ ಕಾಲ ಮಾಡಿಕೊಂಡು ಬಂದಿದ್ದೇವೆ. ಕನ್ನಡ ನಾಡಿನಲ್ಲಿ ಹುಟ್ಟಿದವರು ಕನ್ನಡಿಗರೇ. ಸತ್ಯದ ಮಾರ್ಗ ಅನುಸರಿಸಿದಾಗ ಸ್ವರ್ಗದ ದರ್ಶನವಾಗುತ್ತದೆ. ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎನ್ನುವುದನ್ನು ಅಕ್ಷರಶಃ ಪಾಲನೆ ಮಾಡಬೇಕು ಎಂದರು.

ಕನ್ನಡದಲ್ಲಿ ಪ್ರಾಮಾಣಿಕತೆ, ಒಳ್ಳೆಯತನ ಇದೆ. ಕನ್ನಡದ ಸಾಕ್ಷಿ ಪ್ರಜ್ಞೆ ಮಾನವೀಯತೆಯಿಂದ ಕೂಡಿರುವಂಥದ್ದು. ಕನ್ನಡದ ಪುರಂದರದಾಸರು, ಅಲ್ಲಮಪ್ರಭು, ಬಸವಣ್ಣ, ಅವರಿಂದ ಹರಿದುಬಂದ ಜ್ಞಾನದ ಭಂಡಾರ ಕನ್ನಡಿಗರನ್ನು ಬೆಳೆಸಿದೆ. ಇದನ್ನು ಇನ್ನಷ್ಟು ಉತ್ಕೃಷ್ಟಗೊಳಿಸುವುದು ನಮ್ಮ ಕರ್ತವ್ಯ. ಹೀಗಾಗಿ ಬೆಳಗಾವಿಯಲ್ಲಿ ಅದ್ಭುತ ರಂಗಮಂದಿರವನ್ನು ನಿರ್ಮಿಸಲಾಗಿದೆ ಎಂದರು.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ| ಬೆಳಗಾವಿಯಲ್ಲ, ಕೇಂದ್ರಾಡಳಿತ ಪ್ರದೇಶ ಮಾಡಬೇಕಾಗಿರುವುದು ಮುಂಬಯಿಯನ್ನು!

ಗಡಿ ಭಾಗದ ಶಾಲೆಗಳ ಅಭಿವೃದ್ಧಿ ಬಗ್ಗೆ ಎಲ್ಲ ವ್ಯವಸ್ಥೆ ಕಲ್ಪಿಸಲಾಗುವುದು. ಗಡಿಯಾಚೆಗಿನ ಕನ್ನಡ ಶಾಲೆಗಳ ಬಗ್ಗೆಯೂ ಸಂಪೂರ್ಣ ಕಾಳಜಿ ವಹಿಸಲಾಗುವುದು. ಈಗಾಗಲೇ 100 ಕೋಟಿ ರೂ.ಗಳನ್ನು ಗಡಿ ಭಾಗದ ಅಭಿವೃದ್ಧಿಗೆ ನೀಡಲಾಗಿದೆ. ಕೆಲವೇ ದಿನಗಲ್ಲಿ ಗಡಿ ಭಾಗದಲ್ಲಿ ಏನಾಗಬೇಕೆಂದು ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಸೂಚಿಸಿದರೆ ಅದನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.

ಈ ಹಿಂದೆ ಬೆಳಗಾವಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ನಡೆಸಲಾಗಿದೆ. ಶೀಘ್ರದಲ್ಲಿ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸಲಾಗುವುದು. ರಂಗಮಂದಿರದ ಬಾಕಿಯಿರುವ ಕೆಲಸಗಳಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ಸಂಸ್ಕೃತಿ ಮತ್ತು ಭಾಷೆಗೆ ನಿಕಟ ಸಂಬಂಧವಿದೆ
ಬೆಳಗಾವಿಯಲ್ಲಿ ಇಷ್ಟು ಸುಸಜ್ಜಿತ ಕನ್ನಡ ಭವನ ನಿರ್ಮಾಣ ಮಾಡಿರುವುದು ಈ ಭಾಗದಲ್ಲಿ ಕನ್ನಡಕ್ಕೆ ಮತ್ತಷ್ಟು ಮಹತ್ವ ಬಂದಂತಾಗಿದೆ. ಸಂಸ್ಕೃತಿ ಮತ್ತು ಭಾಷೆಗೆ ಬಹ‌ಳ ನಿಕಟ ಸಂಬಂಧ ಇದೆ. ನಾವು ಕನ್ನಡಿಗರು ಅತಿಥಿಗಳನ್ನು ಸ್ವಾಗತಿಸುವ, ಉಪಚರಿಸುವ ರೀತಿ ಎಲ್ಲವೂ ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಭಗವಂತ ಮನುಷ್ಯನಿಗೆ ಬುದ್ಧಿ ಕೊಟ್ಟಿದ್ದಾನೆ. ಭಾಷೆ ಇಡೀ ಮನುಕುಲದಲ್ಲಿ ಮಹತ್ವದ ಪಾತ್ರ ವಹಿಸಿದೆ. ಮನುಷ್ಯನಿಗೆ ಅಭಿವ್ಯಕ್ತಪಡಿಸಲು ಭಾಷೆ ಮುಖ್ಯವಾಗಿದೆ. ಮನಸ್ಸುಗಳನ್ನು ಒಗ್ಗೂಡಿಸುವ, ತತ್ವಾದರ್ಶಗಳನ್ನು, ದೇಶಭಕ್ತಿಯನ್ನು ಜೋಡಿಸಲು ಭಾಷೆ ಮುಖ್ಯವಾಗುತ್ತದೆ ಎಂದರು.

ಜಗದ್ಗುರು ತೋಂಟದ ಸಿದ್ಧರಾಮ ಸ್ವಾಮೀಜಿ, ಸಚಿವ ಗೋವಿಂದ ಕಾರಜೋಳ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ, ಹಿರಿಯ ಕಲಾವಿದೆ ಗಿರಿಜಾ ಲೋಕೇಶ್, ಸಂಸದೆ ಮಂಗಳಾ ಅಂಗಡಿ, ಮಾಜಿ ಸಂಸದರು ಹಾಗೂ ಕೆಎಲ್ ಇ ಸಂಸ್ಥೆ ಅಧ್ಯಕ್ಷ ಪ್ರಭಾಕರ ಕೋರೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ | Belagavi Session | ಗುರು ರಾಘವೇಂದ್ರ ಬ್ಯಾಂಕ್ ಅಕ್ರಮ; ಆರ್‌ಬಿಐ ವರದಿ ಬಂದ ಬಳಿಕ ಕ್ರಮ ಎಂದ ಎಸ್‌.ಟಿ.ಸೋಮಶೇಖರ್‌

Exit mobile version