Site icon Vistara News

Kannada Book | ಸರ್ಕಾರದಿಂದ ಲೇಖಕ-ಪ್ರಕಾಶಕರಿಗೆ ₹8 ಕೋಟಿ ಬಾಕಿ; ಗ್ರಂಥಾಲಯಕ್ಕೆ ಪುಸ್ತಕ ಕೊಟ್ಟೋರು ಸುಸ್ತು

Kannada book library ಕನ್ನಡ ಪುಸ್ತಕ ಗ್ರಂಥಾಲಯ ಇಲಾಖೆ

ಬೆಂಗಳೂರು: ಕನ್ನಡ ಭಾಷೆ ಉಳಿಯಬೇಕು, ಕನ್ನಡ ಪುಸ್ತಕ (Kannada Book) ಪ್ರೀತಿ ಬೆಳೆಯಬೇಕು, ಬೆಳೆಸಬೇಕು. ಕನ್ನಡ ಲೇಖಕರು, ಪ್ರಕಾಶಕರ ಸಂಖ್ಯೆಯೂ ಹೆಚ್ಚಬೇಕು ಎಂಬ ಚರ್ಚೆಗಳು ನಡೆಯುತ್ತಿದೆ. ಆದರೆ, ಉತ್ಸಾಹದಿಂದ ಬರೆದ, ಪ್ರಕಟಪಡಿಸಿದ ಪುಸ್ತಕಗಳಿಗೆ ಸರ್ಕಾರದಿಂದ ಹಣ ಸಿಗುತ್ತಿಲ್ಲ ಎಂಬ ಆರೋಪವೂ ಈಗ ಕೇಳಿಬಂದಿದೆ. ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಮೂರು ವರ್ಷಗಳಿಂದ ಸುಮಾರು 8 ಕೋಟಿ ರೂಪಾಯಿ ಬಾಕಿ ಇದೆ. ಈ ಹಣಕ್ಕಾಗಿ ಲೇಖಕರು ಹಾಗೂ ಪ್ರಕಾಶಕರು ಇಲಾಖೆಗೆ ಅಲೆದು ಅಲೆದು ಸುಸ್ತಾಗಿದ್ದಾರೆ.

ಪ್ರತಿ ವರ್ಷ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಸಗಟು ಪುಸ್ತಕ ಖರೀದಿ ಯೋಜನೆ ಅಡಿಯಲ್ಲಿ 3700 ರಿಂದ 4000 ಪುಸ್ತಕಗಳನ್ನು ಖರೀದಿ ಮಾಡಲಾಗುತ್ತದೆ. ಇದಕ್ಕಾಗಿ ಉನ್ನತ ಮಟ್ಟದ ಪುಸ್ತಕ ಆಯ್ಕೆ ಸಮಿತಿಯನ್ನು ರಚಿಸಲಾಗಿರುತ್ತದೆ. ಈ ಆಯ್ಕೆ ಸಮಿತಿಯು ಗ್ರಂಥಾಲಯ ಇಲಾಖೆಗೆ ಬಂದಂತಹ ಪುಸ್ತಕಗಳಲ್ಲಿ ಯಾವುದು ಉತ್ತಮ ಎಂದು ಪರಿಗಣಿಸಿ ಅವುಗಳಲ್ಲಿ ನಿಗದಿಪಡಿಸಲಾದ ಸಂಖ್ಯೆಯಷ್ಟು ಪುಸ್ತಕಗಳನ್ನು ಆಯ್ಕೆ ಮಾಡುತ್ತದೆ. ಆಯ್ಕೆಯಾದ ಪುಸ್ತಕಗಳು ಗ್ರಂಥಾಲಯಗಳಿಗೆ ಹೋಗುತ್ತದೆ. ಹೀಗೆ ಒಂದು ಪುಸ್ತಕವನ್ನು ೩೦೦ ಪ್ರತಿಯಂತೆ ಕೊಂಡುಕೊಳ್ಳಲಾಗುತ್ತದೆ. ಈ ಪುಸ್ತಕದ ಪ್ರತಿ ಪುಟಕ್ಕೆ ೭೦ ಪೈಸೆಯಂತೆ ಹಣ ನೀಡಲಾಗುತ್ತದೆ.

8 ಕೋಟಿ ರೂಪಾಯಿ ಬಾಕಿ
2019ನೇ ಸಾಲಿನಲ್ಲಿ ಉನ್ನತ ಮಟ್ಟದ ಪುಸ್ತಕ ಆಯ್ಕೆ ಸಮಿತಿಯಿಂದ 3704 ಪುಸ್ತಕಗಳು ಆಯ್ಕೆಯಾಗಿತ್ತು. ಪ್ರತಿ ಪುಸ್ತಕವನ್ನು 300 ಪ್ರತಿಗಳಂತೆ ಖರೀದಿಸಲಾಗಿತ್ತು. ಈ ವೇಳೆ ಸುಮಾರು ಅರ್ಧದಷ್ಟು ಅಂದರೆ 8 ಕೋಟಿ ರೂ. ಬಿಲ್‌ಗಳನ್ನು ಪಾವತಿಸಲಾಗಿದೆ. ಅಂದರೆ, ಇನ್ನೂ ೮.೪೦ ಕೋಟಿ ರೂಪಾಯಿ ಬಾಕಿ ಇದೆ. ಬಾಕಿ ಉಳಿಸಿಕೊಂಡು ಮೂರು ವರ್ಷವಾದರೂ ಪಾವತಿ ಮಾಡಲಾಗಿಲ್ಲ ಎಂಬುದು ಲೇಖಕರು ಹಾಗೂ ಪ್ರಕಾಶಕರ ಅಳಲಾಗಿದೆ. ಈ ಸಂಬಂಧ ಗ್ರಂಥಾಲಯ ಇಲಾಖೆ ಸೇರಿದಂತೆ ಮುಖ್ಯಮಂತ್ರಿ ಅವರನ್ನೂ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಆದರೂ ಪ್ರಯೋಜನವಾಗಿಲ್ಲ ಎಂದು ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | Job News | ಸ್ಯಾಮ್‌ಸಂಗ್‌ನಿಂದ ಒಂದು ಸಾವಿರ ಎಂಜಿನಿಯರ್‌ಗಳ ನೇಮಕ

ಬಾಕಿ ಹಣ ಪಾವತಿಗಾಗಿ ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಭೇಟಿ ನೀಡಿ ನಿರ್ದೇಶಕರನ್ನು ಪ್ರಶ್ನೆ ಮಾಡಿದರೆ, ತಾವು ಸರ್ಕಾರಕ್ಕೆ ಹಣಕ್ಕಾಗಿ ಪತ್ರ ಬರೆದಿದ್ದೇವೆ. ಸರ್ಕಾರದಿಂದ ಇನ್ನೂ ಹಣ ಬಂದಿಲ್ಲ ಎಂಬ ಹೇಳಿಕೆಯನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿರುವ ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘವು, ರಾಜ್ಯ ಸರ್ಕಾರ ಮೇಲೂ ಹಲವು ರೀತಿಯ ಒತ್ತಡವನ್ನು ತಂದಿದೆ. ಆದರೂ, ಹಣ ಬಿಡುಗಡೆಯಾಗಿಲ್ಲ. ಇದರಿಂದ ಆರ್ಥಿಕ ಸಂಕಷ್ಟಕ್ಕೆ ಎದುರಾಗಿದೆ ಎಂದು ಬೇಸರವನ್ನು ಹೊರಹಾಕುತ್ತಿದ್ದಾರೆ.

೨೦೨೦ರಲ್ಲಿ ಗ್ರಂಥಾಲಯ ಇಲಾಖೆಯಿಂದ ಪುಸ್ತಕಕ್ಕಾಗಿ ಅರ್ಜಿ ಆಹ್ವಾನ ಮಾಡಿರಲಿಲ್ಲ. ಇನ್ನು ೨೦೨೧ಕ್ಕೆ ಅರ್ಜಿ ಆಹ್ವಾನ ಮಾಡಿದ್ದು, ಪುಸ್ತಕಗಳ ಆಯ್ಕೆ ಪ್ರಕ್ರಿಯೆ ನಡೆದಿಲ್ಲ. ಹಾಗೆಯೇ ೨೦೨೨ರ ಅವಧಿಯಲ್ಲಿ ಪುಸ್ತಕಕ್ಕೆ ಅರ್ಜಿ ಆಹ್ವಾನ ಮಾಡಲಾಗಿಲ್ಲ. ಈ ಹಿನ್ನೆಲೆಯಲ್ಲಿ ಪ್ರಕ್ರಿಯೆಗೆ ತ್ವರಿತ ಚಾಲನೆ ನೀಡಬೇಕಾಗಿದೆ ಎಂಬ ಆಗ್ರಹ ಕೇಳಿಬಂದಿದೆ.

೨೫ ಕೋಟಿ ರೂ. ಮೀಸಲಿಡಲು ಒತ್ತಾಯ
ಸಗಟು ಪುಸ್ತಕ ಖರೀದಿಗಾಗಿ ರಾಜ್ಯ ಸರ್ಕಾರವು ಪ್ರತಿ ವರ್ಷ ಆಯವ್ಯಯದಲ್ಲಿ 25 ಕೋಟಿ ರೂಪಾಯಿ ಅನುದಾನವನ್ನು ಮೀಸಲಿಡಬೇಕು. ಈ ಮೂಲಕ ಕನ್ನಡ ಪುಸ್ತಕಗಳಿಗೆ ಪ್ರೋತ್ಸಾಹ ನೀಡಬೇಕು. ಜ್ಞಾನವನ್ನು ಪಸರಿಸುವ ಪುಸ್ತಕವು ಇಂದು ಬೆಲೆ ಏರಿಕೆಯಿಂದ ಲಾಭದಾಯಕ ಉದ್ಯಮವಾಗಿ ಉಳಿದಿಲ್ಲ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರು ಹಾಗೂ ಗ್ರಂಥಾಲಯ ಸಚಿವರು ಗಮನಹರಿಸಿ ಹಣ ಪಾವತಿಗೆ ಕ್ರಮ ಜರುಗಿಸಬೇಕು ಎಂದು ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ ಒತ್ತಾಯ ಮಾಡಿದ್ದಾರೆ.

ಪುಟಕ್ಕೆ ೧ ರೂಪಾಯಿ ನಿಗದಿಗೆ ಒತ್ತಾಯ
ಇಂದು ಪೇಪರ್‌, ಮುದ್ರಣ ವೆಚ್ಚಗಳು ದುಬಾರಿಯಾಗಿವೆ. ಪ್ರಸ್ತುತ ಒಂದು ಪುಟಕ್ಕೆ ೭೦ ಪೈಸೆಯಂತೆ ಹಣ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇನ್ನೂ 30 ಪೈಸೆಯನ್ನು ಹೆಚ್ಚಿಸಿ, ೧ ಪುಟಕ್ಕೆ ೧ ರೂಪಾಯಿ ಹೆಚ್ಚಳ ಮಾಡಬೇಕು. ಈ ಪ್ರಸ್ತಾವನೆಯಲ್ಲಿ ಈಗಾಗಲೇ ಸಲ್ಲಿಕೆ ಮಾಡಲಾಗಿದ್ದು, ಇನ್ನೂ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದು ಹತ್ತು ವರ್ಷಗಳ ಹಿಂದಿನ ದರವಾಗಿದೆ. ಈಗ ಕಾಲ ಬದಲಾಗಿದೆ ಎಲ್ಲವುಗಳ ದರ ದುಬಾರಿಯಾಗಿದೆ. ಈ ಬಗ್ಗೆ ಶೀಘ್ರವೇ ಸರ್ಕಾರ ಗಮನ ಹರಿಸಲಿ ಎಂದು ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಕಾರ್ಯದರ್ಶಿ ಆರ್.‌ ದೊಡ್ಡೆಗೌಡ ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ | GDP Growth | ಜುಲೈ-ಸೆಪ್ಟೆಂಬರ್‌ನಲ್ಲಿ ಜಿಡಿಪಿ ಬೆಳವಣಿಗೆ 6.3%ಕ್ಕೆ ಇಳಿಕೆ

Exit mobile version