ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ತಾರಕಕ್ಕೇರಿರುವ ನಡುವೆಯೇ ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಕಾರ್ಯಕ್ರಮವೊಂದರಲ್ಲಿ ಕನ್ನಡ ಬಾವುಟ (Kannada Flag) ಹಾರಿಸಿದ ವಿದ್ಯಾರ್ಥಿಗೆ ಸಹಪಾಠಿಗಳು ಥಳಿಸಿದ್ದಾರೆ. ನಗರದ ಟಿಳಕವಾಡಿಯಲ್ಲಿರುವ ಗೋಗಟೆ ಕಾಲೇಜಿನಲ್ಲಿ ಭಾಷಾ ದ್ವೇಷದಿಂದ ನಡೆಸಿರುವ ಹಲ್ಲೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬುಧವಾರ ನೂರಾರು ವಿದ್ಯಾರ್ಥಿಗಳು ಕುಣಿಯುತ್ತಿದ್ದರು. ಈ ವೇಳೆ ಒಬ್ಬ ವಿದ್ಯಾರ್ಥಿ ಕನ್ನಡ ಬಾವುಟ ಹಿಡಿದು ಹೆಜ್ಜೆ ಹಾಕಿದ್ದರಿಂದ ಕೆಲ ಸಹಪಾಠಿಗಳು ಆತನನ್ನು ಹಿಡಿದು ಥಳಿಸಿದ್ದಾರೆ. ಥಳಿತಕ್ಕೆ ಒಳಗಾದ ವಿದ್ಯಾರ್ಥಿಯಿಂದ ಪೊಲೀಸ್ ಠಾಣೆಗೆ ಯಾವುದೇ ದೂರು ದಾಖಲಾಗಿಲ್ಲ. ಘಟನೆ ಬಗ್ಗೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದರಿಂದ ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕನ್ನಡ ಬಾವುಟ ಹಾರಿಸಿದ ವಿದ್ಯಾರ್ಥಿ ಮೇಲೆ ಹಲ್ಲೆ ಬಗ್ಗೆ ಬೆಳಗಾವಿ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ರವೀಂದ್ರ ಗಡಾದಿ ಪ್ರತಿಕ್ರಿಯಿಸಿ, ಸಂಜೆ 7.30ರ ಸುಮಾರಿಗೆ ಗೋಗಟೆ ಕಾಲೇಜಿನಲ್ಲಿ ಇಂಟರ್ ಕಾಲೇಜು ಫೆಸ್ಟ್ ನಡೆಯುತ್ತಿತ್ತು. ಈ ವೇಳೆ ವಿದ್ಯಾರ್ಥಿಗಳ ಮಧ್ಯೆ ಗಲಾಟೆಯಾಗಿದೆ. ಆಗ ಕನ್ನಡ ಬಾವುಟ ಹಿಡಿದು ಡ್ಯಾನ್ಸ್ ಮಾಡುತ್ತಿದ್ದ ವಿದ್ಯಾರ್ಥಿ ಮೇಲೆ ಮೂವರು ವಿದ್ಯಾರ್ಥಿಗಳು ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ವಿದ್ಯಾರ್ಥಿಯಿಂದ ಮಾಹಿತಿ ಪಡೆದುಕೊಂಡಿದ್ದೇವೆ. ಯಾರು ಹಲ್ಲೆ ಮಾಡಿದ್ದಾರೆ ಅವರ ಗುರುತು ಪತ್ತೆ ಹಚ್ಚಿ ವಿಚಾರಣೆ ಮಾಡುತ್ತೇವೆ. ಈವರೆಗೂ ಪ್ರಕರಣದ ಕುರಿತು ದೂರು ದಾಖಲಾಗಿಲ್ಲ, ಎಲ್ಲರೂ ಅಪ್ರಾಪ್ತರಾಗಿದ್ದಾರೆ. ಸದ್ಯ ಪರಿಸ್ಥಿತಿ ಶಾಂತಿಯುತವಾಗಿದೆ ಎಂದು ತಿಳಿಸಿದ್ದಾರೆ.
ಕನ್ನಡಪರ ಹೋರಾಟಗಾರರ ಆಕ್ರೋಶ; ಕಾಲೇಜಿಗೆ ಮುತ್ತಿಗೆ ಎಚ್ಚರಿಕೆ
ಕನ್ನಡ ಬಾವುಟ ಹಾರಿಸಿದ್ದಕ್ಕೆ ವಿದ್ಯಾರ್ಥಿ ಮೇಲೆ ಸಹಪಾಠಿಗಳಿಂದ ಹಲ್ಲೆ ವಿಚಾರ ತಿಳಿದು ಕಾಲೇಜಿಗೆ ಕನ್ನಡಪರ ಹೋರಾಟಗಾರರು ಭೇಟಿ ನೀಡಿ ಆಕ್ರೋಶ ಹೊರಹಾಕಿದರು. ಕರುನಾಡ ವಿಜಯ ಸೇನೆ ಯುವ ಘಟಕದ ಅಧ್ಯಕ್ಷ ಸಂಪತ್ ಕುಮಾರ್ ದೇಸಾಯಿ ನೇತೃತ್ವದಲ್ಲಿ ಕಾರ್ಯಕರ್ತರು ಭೇಟಿ ನೀಡಿ, ಗುರುವಾರ ಬೆಳಗ್ಗೆ ಕಾಲೇಜಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ | Kannada Sahitya Sammelana | ನಾಳೆ ಭುವನಗಿರಿಯಲ್ಲಿ ಕನ್ನಡ ಜ್ಯೋತಿ ಹೊತ್ತ ‘ಕನ್ನಡ ರಥ’ಕ್ಕೆ ಚಾಲನೆ