ಬೆಂಗಳೂರು/ನವದೆಹಲಿ: ‘ಸುಲಿದ ಬಾಳೆಯ ಹಣ್ಣಿನಂದದಿ, ಕಳಿದ ಸಿಗುರಿನ ಕಬ್ಬಿನಂದದಿ’… ಎಂಬುದಾಗಿ ಕನ್ನಡ ನಾಡಿನ ಕವಿಗಳು ಕನ್ನಡ ಭಾಷೆಯು ಎಷ್ಟು ಸರಳ, ಸುಲಭ ಹಾಗೂ ಸುಂದರ ಎನ್ನುವುದನ್ನು ಕವನದ ಮೂಲಕ ವಿವರಿಸಿದ್ದಾರೆ. ಹೀಗೆ, ಕನ್ನಡ ಭಾಷೆಯು ಸರಳ ಹಾಗೂ ಸುಂದರ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ (Modi On Kannada Learning) ಅವರೂ ಒಪ್ಪಿದ್ದಾರೆ.
ಕನ್ನಡದ ವರ್ಣಮಾಲೆಗಳಲ್ಲಿಯೇ ಆ ಪದದಿಂದ ಆರಂಭವಾಗುವ ವಸ್ತು, ಪ್ರಾಣಿ, ಪಕ್ಷಿಗಳ ಚಿತ್ರಗಳಿರುವ ಫೋಟೊವನ್ನು ಕಿರಣ್ ಕುಮಾರ್ ಎಸ್. ಎಂಬುವರು ಟ್ವೀಟ್ ಮಾಡಿದ್ದಾರೆ. ವರ್ಣಮಾಲೆಯ ೪೯ ಅಕ್ಷರಗಳ ಪೈಕಿ ೪೬ ಅಕ್ಷರಗಳನ್ನು ಚಿತ್ರಗಳಲ್ಲಿಯೇ ಬಿಡಿಸಿರುವ ಬಗ್ಗೆ, ಮಕ್ಕಳು ಇವುಗಳನ್ನು ನೋಡಿಕೊಂಡು ಸುಲಭವಾಗಿ ಕನ್ನಡ ಕಲಿಯುವ ಬಗ್ಗೆ ಒಕ್ಕಣೆ ಬರೆದಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, “ವಿಭಿನ್ನ ಪ್ರಯತ್ನದಿಂದ ಭಾಷೆಯನ್ನು ಕಲಿಸುತ್ತಿರುವುದು ಶ್ಲಾಘನೀಯ. ಅಷ್ಟಕ್ಕೂ, ಕನ್ನಡವು ಕಲಿಯಲು ಸುಂದರ ಹಾಗೂ ಸುಲಭವಾಗಿದೆ” ಎಂದಿದ್ದಾರೆ. ಮೋದಿ ಅವರ ಪ್ರತಿಕ್ರಿಯೆಗೆ ಕನ್ನಡಿಗರಿಂದ ಪ್ರಶಂಸೆ ವ್ಯಕ್ತವಾಗಿದೆ.
ಚಿತ್ರಗಳನ್ನು ಬಿಡಿಸಿದ್ದು ಬಾದಲ್ ನಂಜುಂಡಸ್ವಾಮಿ
ಮೈಸೂರಿನ ಕಲಾವಿದ ಬಾದಲ್ ನಂಜುಂಡಸ್ವಾಮಿ ಅವರು ಕನ್ನಡದ ವರ್ಣಮಾಲೆಗಳಲ್ಲಿಯೇ ಚಿತ್ರಗಳನ್ನು ಬಿಡಿಸುವ ಮೂಲಕ ಕನ್ನಡದ ಕಲಿಯುವ ಮಕ್ಕಳಿಗೆ ಅನುಕೂಲ ಮಾಡಿದ್ದಾರೆ. ಮೋದಿ ಮೆಚ್ಚುಗೆ ಕುರಿತು ಬಾದಲ್ ನಂಜುಂಡಸ್ವಾಮಿ ಅವರೇ ಟ್ವೀಟ್ ಮೂಲಕ ಪ್ರಧಾನಿಗೆ ಧನ್ಯವಾದ ತಿಳಿಸಿದ್ದಾರೆ.
ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಮಕ್ಕಳು ಕನ್ನಡ ಕಲಿಯಬೇಕು ಎಂದು ಕ್ಯಾಲಿಗ್ರಫಿ ಮೂಲಕ ಕನ್ನಡ ವರ್ಣಮಾಲೆಗಳನ್ನು ಗೋಡೆಯ ಮೇಲೆ ಮೂಡಿಸಿದ್ದಾರೆ. ಇದು ಈಗ ಪ್ರಧಾನಿಯವರ ಗಮನವನ್ನೂ ಸೆಳೆದಿರುವುದು ವಿಶೇಷವಾಗಿದೆ.
ಇದನ್ನೂ ಓದಿ: Modi In Karnataka: ಮೋದಿಯಿಂದಲೇ ಅಡಿಗಲ್ಲು-ಉದ್ಘಾಟನೆ: ಹಿಂದಿನ ಸರ್ಕಾರಗಳು ಹೀಗಿರಲಿಲ್ಲ ಎಂದ ಸಿಎಂ ಬೊಮ್ಮಾಯಿ