ಬೆಂಗಳೂರು: ʼಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨ʼ ತಕ್ಷಣ ಕಾನೂನಾಗುವ ಮೂಲಕ ಸಮಗ್ರ ಕನ್ನಡದ ಅಭಿವೃದ್ಧಿಗೆ ಕಾರಣವಾಗಬೇಕು ಎನ್ನುವ ಉದ್ದೇಶ ಸಮಸ್ತ ಕನ್ನಡಿಗರಿಗೆ ಇದೆ. ಆದರೆ ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಕಾನೂನಾಗುವ ಭರವಸೆ ಇಟ್ಟುಕೊಂಡವರಿಗೆ ನಿರಾಸೆಯಾಗಿದೆ. ಹೀಗಾಗಿ ವಿಧೇಯಕವನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ (Kannada Sahitya Parishat) ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಆಗ್ರಹಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕನ್ನಡ ಭಾಷೆ ಉಳಿದರೆ ಮಾತ್ರ ಕರ್ನಾಟಕದ ಅಸ್ಮಿತೆ ಇರುವುದಕ್ಕೆ ಸಾಧ್ಯ. ಆದ್ದರಿಂದ ಭಾಷೆ ಸಂಸ್ಕೃತಿಯ ಉಳಿವಿಗೆ ವಿಧೇಯಕ ಕಾನೂನಾಗಬೇಕಿರುವುದು ಅನಿವಾರ್ಯ. ವಿಧೇಯಕದ ಕುರಿತು ಸಮಗ್ರ ಚರ್ಚೆ ನಡೆಸಿ ಕಾನೂನು ಮಾಡುವುದಕ್ಕೆ ಎಲ್ಲ ಪಕ್ಷದ ನಾಯಕರು ಕನ್ನಡ ಸಾಹಿತ್ಯ ಪರಿಷತ್ಗೆ ಭರವಸೆ ನೀಡಿದ್ದಾರೆ. ಇದಕ್ಕೆ ಎಲ್ಲರ ಒಮ್ಮತದ ಒಪ್ಪಿಗೆ ಇರುವುದರಿಂದ ಆದಷ್ಟು ಬೇಗ ಕಾನೂನು ಜಾರಿಯಾಗಬೇಕು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Amit Shah | ದೇವನಹಳ್ಳಿಯಲ್ಲಿ ಕೇಂದ್ರೀಯ ಬೇಹುಗಾರಿಕೆ ತರಬೇತಿ ಶಾಲೆ ಕಟ್ಟಡಕ್ಕೆ ಶಂಕುಸ್ಥಾಪನೆ
ನ್ಯಾಯಮೂರ್ತಿ ಎಸ್.ಆರ್. ಬನ್ನೂರಮಠ ನೇತೃತ್ವದ ಕರ್ನಾಟಕ ಕಾನೂನು ಆಯೋಗವು 57ನೇ ವರದಿಯಲ್ಲಿ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨’ ಅನ್ನು ಸಿದ್ಧಪಡಿಸಿ, ವರದಿಯ ಅನುಷ್ಠಾನಕ್ಕಾಗಿ ಅಗತ್ಯ ಕ್ರಮಕೈಗೊಳ್ಳುವಂತೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಈ ವರದಿಯಲ್ಲಿ ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿಗಾಗಿ ಮತ್ತು ಕನ್ನಡಿಗರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಉತ್ತಮ ಅವಕಾಶಗಳನ್ನು ಒದಗಿಸುವುದಕ್ಕಾಗಿ ಉಪಬಂಧ ಕಲ್ಪಿಸುವ ಒಂದು ವಿಧೇಯಕ ಎಂದು ಸ್ಪಷ್ಟವಾಗಿ ನಮೂದಿಸಲಾಗಿತ್ತು. ಈ ವಿಧೇಯಕವನ್ನು ಕಾನೂನು ಆಗುವ ಸಂಬಂಧ ಸೆ. ೨೨ ರಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಅವರು ವಿಧಾನಸಭೆಯ ಅಧಿವೇಶನದಲ್ಲಿ ವಿಧೇಯಕ ಮಂಡಿಸಿದ್ದರು ಎಂದು ಹೇಳಿದ್ದಾರೆ.
ಇದರ ಕುರಿತು ಕನ್ನಡ ಸಾಹಿತ್ಯ ಪರಿಷತ್ತು ಅಕ್ಟೋಬರ್ ೧೦ರಂದು ಶ್ರೀಕೃಷ್ಣ ಪರಿಷತ್ತಿನ ಮಂದಿರದಲ್ಲಿ ಚಿಂತನ-ಮಂಥನ ಏರ್ಪಡಿಸಿತ್ತು. ನಾಡಿನ ಹಿರಿಯ ಸಾಹಿತಿಗಳು, ವಿಶ್ರಾಂತ ನ್ಯಾಯಮೂರ್ತಿಗಳು ಸೇರಿ ವಿವಿಧ ಗಣ್ಯರು, ವಿಷಯ ತಜ್ಞರು ಭಾಗವಹಿಸಿ ವಿಚಾರ ಮಂಡಿಸಿದ್ದರು. ಇದನ್ನು ಸರ್ಕಾರದ ಗಮನಕ್ಕೆ ತರಲಾಗಿತ್ತು ಎಂದು ತಿಳಿಸಿದ್ದಾರೆ.
ಸರ್ಕಾರದಿಂದ ʻರಾಜ್ಯ ಸಚಿವ ಸ್ಥಾನಮಾನʼ ಗೌರವವನ್ನು ಹೊಂದಿರುವ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ನ ಚುನಾಯಿತ ಅಧ್ಯಕ್ಷರನ್ನು ʻರಾಜ್ಯಮಟ್ಟದ ಸಮಿತಿಗೆ ಉಪಾಧ್ಯಕ್ಷರಾಗಬೇಕು ಎಂದು ಒಕ್ಕೊರಲಿನಿಂದ ಹೇಳಿ, ಜಿಲ್ಲಾ ಸಮಿತಿಯಲ್ಲಿ ಕಸಾಪ ಜಿಲ್ಲಾ ಘಟಕಗಳ ಚುನಾಯಿತ ಅಧ್ಯಕ್ಷರು ಇರುವಂತೆ, ತಾಲೂಕು ಮಟ್ಟದ ಸಮಿತಿಯಲ್ಲಿ ಕಸಾಪ ತಾಲೂಕು ಘಟಕದ ಅಧ್ಯಕ್ಷರು ಕಾರ್ಯನಿರ್ವಹಿಸಬೇಕು. ಜತೆಗೆ ಸರ್ಕಾರಿ ಅಧಿಕಾರೇತರ ಸದಸ್ಯರು ಈ ಸಮಿತಿಯಲ್ಲಿ ಇರಬೇಕು ಎಂಬ ಸರ್ವಾನುಮತದ ಸಲಹೆಯನ್ನು ನೀಡಲಾಗಿದೆ ಎಂದು ನಾಡೋಜ ಡಾ. ಮಹೇಶ ಜೋಶಿ ಹೇಳಿದ್ದಾರೆ.
ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕವನ್ನು ಬೆಳಗಾವಿಯಲ್ಲಿ ನಡೆದ ವಿಧಾನ ಮಂಡಲದ ಚಳಿಗಾಲದ ಅಧಿವೇಶದಲ್ಲಿಯೇ ಅಂಗೀಕರಿಸಿ ಕಾನೂನಾಗಿಸುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದ್ದರು. ಹೀಗಾಗಿ ಈ ಕೂಡಲೇ ವಿಧೇಯಕವನ್ನು ಸುಗ್ರೀವಾಜ್ಞೆ ರೂಪದಲ್ಲಿ ಕೂಡಲೇ ಜಾರಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ | Siddheshwar Swamiji | ಶ್ರೀ ಸಿದ್ದೇಶ್ವರ ಸ್ವಾಮೀಜಿ ಆರೋಗ್ಯದಲ್ಲಿ ಚೇತರಿಕೆ; ನಾಳೆಯಿಂದ ವರ್ಚುವಲ್ ದರ್ಶನ