Site icon Vistara News

ಕನ್ನಡ ಸಾಹಿತ್ಯ ಪರಿಷತ್ತಿನ ಹಲವು ನಿಯಮಗಳಿಗೆ ತಿದ್ದುಪಡಿ; ಸರ್ಕಾರದಿಂದ ಒಪ್ಪಿಗೆ

kannada sahitya parishat

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ನಿಬಂಧನೆಗಳಲ್ಲಿ ಆಮೂಲಾಗ್ರ ಬದಲಾವಣೆ ತರಲಾಗಿದೆ. ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿಸುವ ನಿಟ್ಟಿನಲ್ಲಿ ಕೈಗೊಳ್ಳಲಾದ ನಿಬಂಧನೆಗಳ ತಿದ್ದುಪಡಿಯನ್ನು ಸಹಕಾರ ಸಂಘಗಳ ಜಿಲ್ಲಾ ನೋಂದಣಾಧಿಕಾರಿ ಅಂಗೀಕರಿಸಿ ನೋಂದಾಯಿಸಿದ್ದಾರೆ. 

ಈ ಅನುಮೋದನೆಯನ್ನು ಬೆಂಗಳೂರು ಮಹಾನಗರ ಸಿಟಿ ಸೇಷನ್ಸ್ ನ್ಯಾಯಾಲಯದ ಮೂಲ ದಾವೆಗೆ ನೀಡಿರುವ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.

ಶತಮಾನಕ್ಕೂ ಹೆಚ್ಚು ಕಾಲದಿಂದ ಜನಪರ ಹಾಗೂ ಕನ್ನಡದ ಕಾರ್ಯಗಳನ್ನು ಮಾಡುತ್ತಾ ಬಂದಿರುವ ಕನ್ನಡ ಸಾಹಿತ್ಯ ಪರಿಷತ್ತಿನ ನಿಬಂಧನೆಗಳಿಗೆ ಆಯಾ ಕಾಲಘಟ್ಟಕ್ಕೆ ತಕ್ಕಂತೆ ಇದುವರೆಗೆ ಆರು ಬಾರಿ ತಿದ್ದುಪಡಿ ಮಾಡಲಾಗಿತ್ತು. ಇದು ಏಳನೇ ತಿದ್ದುಪಡಿಯಾಗಿದೆ. ನಾನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದಾಗ, ಚುನಾವಣೆಯ ಪ್ರಚಾರದ ಪ್ರಣಾಳಿಕೆಯಲ್ಲಿ ಸದಸ್ಯರಿಗೆ ನೀಡಿದ ಭರವಸೆಯಂತೆ ಪರಿಷತ್ತಿನ ನಿಬಂಧನೆಗಳಿಗೆ ಆಮೂಲಾಗ್ರ ಬದಲಾವಣೆ ಮಾಡಿದ್ದೇನೆ ಎಂದವರು ಹೇಳಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ  ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತಿದ್ದುಪಡಿಗಳ ಕುರಿತು ಚರ್ಚೆ ನಡೆದಿತ್ತು. ಅಗತ್ಯ ತಿದ್ದುಪಡಿಗಳನ್ನು ಮಾಡಲು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್ ಅವರ ಅಧ್ಯಕ್ಷತೆಯಲ್ಲಿ ೧೧ ಸದಸ್ಯರನ್ನೊಳಗೊಂಡ ಸಮಿತಿ ರಚಿಸಲಾಗಿತ್ತು.

ನಿಬಂಧನೆ ತಿದ್ದುಪಡಿ ಸಮಿತಿ ೬ ಬಾರಿ ಸಭೆ ನಡೆಸಿ ನಿಯಮ-ನಿಬಂಧನೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಉದ್ದೇಶಿತ ತಿದ್ದುಪಡಿಗಳ ಕರಡನ್ನು ಸಿದ್ಧಪಡಿಸಿಕೊಟ್ಟಿತ್ತು. ನಂತರ ಜರುಗಿದ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಪ್ರತ್ಯೇಕ ಸಭೆಗಳಲ್ಲಿ ಪರಿಷ್ಕೃತ ಕರಡನ್ನು ಕೂಲಂಕಷವಾಗಿ ಪರಿಶೀಲಿಸಿ, ಈ ಬದಲಾವಣೆಗೆಗಳಿಗೆ ಒಪ್ಪಿಗೆ ನೀಡಲಾಗಿತ್ತು.

ಈ ಎಲ್ಲಾ ಪ್ರಕ್ರಿಯೆಯ ನಂತರ ಕನ್ನಡ ಸಾಹಿತ್ಯ ಪರಿಷತ್ತಿನ ಧ್ಯೇಯೋದ್ದೇಶಗಳು ಹಾಗೂ ನಿಯಮ-ನಿಬಂಧನೆಗಳನ್ನು ಕೆಲವು ಸಣ್ಣಪುಟ್ಟ ಮಾರ್ಪಾಡುಗಳೊಂದಿಗೆ ಸಹಕಾರ ಇಲಾಖೆಯು ಕಳೆದ ಜೂನ್‌ ೩೦ರಂದು ಅಂಗೀಕರಿಸಿ, ನೋಂದಾಯಿಸಿ ಕೊಟ್ಟಿದ್ದು, ಅಂದಿನಿಂದಲೇ ಈ ಎಲ್ಲ ನಿಯಮಗಳು ಜಾರಿಗೆ ಬಂದಿವೆ ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ವಿವರಿಸಿದ್ದಾರೆ.

ಏನೇನು ತಿದ್ದುಪಡಿ?

೧. ‘ಕನ್ನಡ ಶಾಲೆಗಳನ್ನು ಉಳಿಸಿ-ಕನ್ನಡ ಬೆಳೆಸಿ’ ಧ್ಯೇಯೋದ್ದೇಶದಡಿ ಕನ್ನಡ ಶಾಲೆಗಳ ಪುನಃಶ್ಚೇತನವನ್ನು ಪರಿಷತ್ತಿನ ಘಟಕಗಳ ಮೂಲಕ ಗುರುತಿಸಿ, ಸರ್ಕಾರ, ಶಿಕ್ಷಣ ಸಂಸ್ಥೆಗಳ ಸಹಕಾರದೊಂದಿಗೆ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮಕೈಗೊಳ್ಳುವುದು.           

೨) ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜಾನಪದ ಇವುಗಳ ರಕ್ಷಣೆ, ಪ್ರಸಾರ ಮತ್ತು ಅಭಿವೃದ್ಧಿಯ ಮೂಲ ಧ್ಯೇಯೋದ್ದೇಶಗಳೊಂದಿಗೆ ‘ಕನ್ನಡ-ಕನ್ನಡಿಗ-ಕರ್ನಾಟಕದ’ ಹಿತರಕ್ಷಣೆಯ ಜವಾಬ್ದಾರಿಯನ್ನು ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆಡಳಿತಾತ್ಮಕ ಸುಧಾರಣೆ ತರಲು, ಕಾಲಕ್ಕೆ ತಕ್ಕಂತೆ ನಿಬಂಧನೆಗಳನ್ನು ಪರಿಷ್ಕರಿಸಲು, ಪ್ರಸ್ತುತ ಕಾಲಘಟ್ಟಕ್ಕೆ ತಕ್ಕಂತೆ ತಂತ್ರಜ್ಞಾನವನ್ನೂ ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿರುವುದರಿಂದ ಹಾಗೂ “ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿಸಲು” ಒಂದು ಕೋಟಿ ಸದಸ್ಯತ್ವದ ಗುರಿಯನ್ನು ಹೊಂದಲಾಗಿರುವುದರಿಂದ, ಈಗ ಇರುವ ೧೦೦ ರೂ.ಗಳನ್ನು (ಸದಸ್ಯತ್ವ ಶುಲ್ಕ ರೂ.500 ಮತ್ತು ಕನ್ನಡ ನುಡಿ ಶುಲ್ಕ ರೂ. 500) ೨೫೦ ರೂಪಾಯಿಗಳಿಗೆ ಇಳಿಸುವುದು.

೩. ಆಧುನಿಕ ಗುರುತಿನ ಚೀಟಿಯಾಗಿ ಸ್ಮಾಟ್‌ ಕಾರ್ಡ್‌ ವಿತರಿಸುವುದು. (ಸ್ಮಾಟ್‌ ಕಾರ್ಡ್‌ ವೆಚ್ಚ ಮತ್ತು ಸ್ಪೀಡ್ ಪೋಸ್ಟ್ ಅಂಚೆ ವೆಚ್ಚ ರೂ.೧೫೦-೦೦ ಗಳನ್ನು ಪಡೆದುಕೊಂಡು) ಈ ಸ್ಮಾಟ್‌ ಕಾರ್ಡ್‌ನಲ್ಲಿ ಚುನಾವಣೆಯ ಸಂದರ್ಭದಲ್ಲಿ ಗುರುತಿನ ಚೀಟಿಯಾಗಿ ಬಳಸುವುದಕ್ಕಾಗಿ, ಸದಸ್ಯರ ಅವಶ್ಯವಿರುವ ಎಲ್ಲ ಮಾಹಿತಿಗಳನ್ನು ಒಳಗೊಂಡ ಚಿಪ್ ಅಳವಡಿಸಲಾಗುವುದು.

೪) ಭಾರತೀಯ ಸೇನೆ, ಅರೆಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ/ನಿವೃತ್ತರಾಗಿರುವ ಕನ್ನಡ ಸೈನಿಕರಿಗೆ ಹಾಗೂ ದಿವ್ಯಾಂಗಚೇತನರಿಗೆ ಆಜೀವ ಸದಸ್ಯತ್ವ ಮತ್ತು ಸ್ಮಾಟ್‌ ಕಾರ್ಡ್‌ ಉಚಿತವಾಗಿ ನೀಡುವುದು.

೫) ಸದಸ್ಯತ್ವ ಅರ್ಜಿಯನ್ನು ಆಧುನಿಕ ತಂತ್ರಜ್ಞಾನ ವ್ಯವಸ್ಥೆಯಲ್ಲಿ ಆನ್‌ಲೈನ್ ಮೂಲಕ ನೋಂದಾಯಿಸಲು ಅತ್ಯಾಧುನಿಕ ಆ್ಯಪ್ ಅನ್ನು ಅಳವಡಿಸಿಕೊಳ್ಳುವುದು. ಈ ಆ್ಯಪ್ ಮೂಲಕ ಸದಸ್ಯತ್ವ ವಿಳಾಸ ಬದಲಾವಣೆ ಸೇರಿದಂತೆ ಇತರೆ ಎಲ್ಲ ಮಾರ್ಪಾಡುಗಳನ್ನು ಆ್ಯಪ್ ಮೂಲಕವೇ ಮಾಡುವುದು.
ಸದಸ್ಯತ್ವ ಆನ್ಲೈನ್ ನೋಂದಣಿಗಾಗಿ ಆ್ಯಪ್ ಸಿದ್ಧಗೊಂಡಿದ್ದು, ಈ ಆ್ಯಪ್ ಮತ್ತು ಪರಿಷ್ಕೃತ  ವೆಬ್ ಸೈಟನ್ನು ಸದ್ಯದಲ್ಲೇ ಲಾಕಾರ್ಪಣೆ ಮಾಡಲಾಗುವುದು ಎಂದು ಅಧ್ಯಕ್ಷ ಮಹೇಶ್‌ ಜೋಶಿ ತಿಳಿಸಿದ್ದಾರೆ.

೬) ಹಿಂದಿನ ನಿಬಂಧನೆಯಲ್ಲಿ ಸೂಚಿಸಿರುವಂತೆ, ಕನ್ನಡ ಓದು-ಬರಹ ಬಲ್ಲ ವ್ಯಕ್ತಿಗಳಿಗೆ ಸದಸ್ಯತ್ವ ನೀಡುವ ಸಂಬಂಧ ಪ್ರಾಥಮಿಕ ಶಿಕ್ಷಣ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದ್ದರೂ, ಸಾಮಾನ್ಯ ವ್ಯಕ್ತಿಗಳು ಯಾವುದೇ ಅಡಚಣೆ ಇಲ್ಲದೇ ಸದಸ್ಯರಾಗಲು ನಿಯಮಗಳನ್ನು ರೂಪಿಸಲಾಗಿದೆ. ಜಾನಪದ, ನೃತ್ಯ, ಸಂಗೀತ, ರಂಗಭೂಮಿ, ಚಿತ್ರರಂಗ, ಚಿತ್ರಕಲೆ, ಯಕ್ಷಗಾನ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕಲಾವಿದರು, ಕೃಷಿಕರು, ಕುಶಲ ಕರ್ಮಿಗಳು, ಕಾರ್ಮಿಕರು, ಇನ್ನಿತರೆ ಸಾಮಾನ್ಯ ವ್ಯಕ್ತಿಗಳು ಹಾಗೂ ಕನ್ನಡ ನಾಡು, ನುಡಿ, ನೆಲ, ಜಲ – ಇವುಗಳ ರಕ್ಷಣೆಗಾಗಿ ಶ್ರಮಿಸಿದ ಓದು, ಬರಹ ಬಾರದ ಕನ್ನಡಿಗರು, ಪರಿಷತ್ತಿನ ಸದಸ್ಯತ್ವವನ್ನು ಬಯಸಿ ಅರ್ಜಿ ಸಲ್ಲಿಸಿದಲ್ಲಿ ಕನಿಷ್ಠ ವಿದ್ಯಾರ್ಹತೆಯಿಂದ ವಿನಾಯಿತಿಯನ್ನು ನೀಡಲಾಗಿದೆ. ಜೊತೆಗೆ ಕನ್ನಡ ಓದಲು ಬರೆಯಲು ಬಾರದವರಿಗೆ ಪರಿಷತ್ತು ಸರಳ ಕನ್ನಡವನ್ನು ಕಲಿಸಲು ಅವಕಾಶ ಕಲ್ಪಿಸಲಾಗಿದೆ.

೭) ಯಾವುದೇ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗದಲ್ಲಿ ಕನ್ನಡ ವಿಷಯಕ್ಕೆ ಸಂಬಂಧಿಸಿ ಅಧ್ಯಯನ ಮಾಡುತ್ತಿರುವ ಆರ್ಥಿಕವಾಗಿ ದುರ್ಬಲರಾದ ವಿದ್ಯಾರ್ಥಿಗಳಿಗೆ ಪರಿಷತ್ತಿನಿಂದ ಆರ್ಥಿಕ ನೆರವು ಒದಗಿಸುವುದರ ಮೂಲಕ ಕನ್ನಡ ಅಧ್ಯಯನ ವಿಭಾಗಗಳು ಮುಚ್ಚದಂತೆ ಕ್ರಮವಹಿಸುವುದು.

೮) ಗ್ರಾಮಮಟ್ಟಕ್ಕೂ ಪರಿಷತ್ತನ್ನು ಕೊಂಡೊಯ್ಯಬೇಕೆನ್ನುವ ಸದುದ್ದೇಶದಿಂದ ‘ಹೋಬಳಿ ಘಟಕ’ಗಳನ್ನು ಸ್ಥಾಪಿಸಿ, ಅವುಗಳಿಗೆ ಮಾನ್ಯತೆ ನೀಡುವುದು. ಅಂತೆಯೇ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿನ ವಿಧಾನಸಭಾಕ್ಷೇತ್ರ ಘಟಕಗಳ ಅಡಿಯಲ್ಲಿ ‘ವಾರ್ಡ್ ಘಟಕ’ಗಳನ್ನು ಹಾಗೂ ಗಡಿನಾಡು ಘಟಕಗಳಲ್ಲಿ ಕನ್ನಡಿಗರ ಸಂಖ್ಯೆಯ ಅನುಗುಣವಾಗಿ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳನ್ನು ಸ್ಥಾಪಿಸುವುದು.

೯) ಸುಗಮ ಕಾರ್ಯನಿರ್ವಹಣೆಗೆ ಅನುಕೂಲವಾಗುವಂತೆ ಪರಿಷತ್ತಿನ ವಿವಿಧ ಘಟಕಗಳಿಗೆ ಸ್ವಂತ ಕಟ್ಟಡ ಹೊಂದಲು ಕ್ರಮಕೈಗೊಂಡು, ಕಟ್ಟಡ ನಿರ್ಮಾಣಕ್ಕೆ ಧನಸಂಗ್ರಹ ಮಾಡುವುದು ಹಾಗೂ ಕಟ್ಟಡ ನಿರ್ಮಾಣದಲ್ಲಿ ಏಕರೂಪತೆಯನ್ನು ಕಾಯ್ದುಕೊಳ್ಳುವುದು.

೧೦) ಪರಿಷತ್ತಿನ ಕಾರ್ಯಚಟುವಟಿಕೆಗಳನ್ನು ವಿಶ್ವವ್ಯಾಪಿಯಾಗಿ ವಿಸ್ತರಿಸಲು, ಕನಿಷ್ಠ ೧೦೦ ಮಂದಿ ಪರಿಷತ್ತಿನ ಆಜೀವ ಸದಸ್ಯರು ಇರುವ ಹೊರರಾಜ್ಯ, ಕೇಂದ್ರಾಡಳಿತ ಪ್ರದೇಶ ಹಾಗೂ ಹೊರದೇಶ ಘಟಕಗಳನ್ನು ಸ್ಥಾಪಿಸುವುದು.

೧೧) ಕನ್ನಡದ ಹಿರಿಯ ವಿದ್ವಾಂಸರು, ಸಾಹಿತಿಗಳ ಜೊತೆಗೆ ಕನ್ನಡ-ಕನ್ನಡಿಗ-ಕರ್ನಾಟಕಕ್ಕೆ ಸೇವೆ ಸಲ್ಲಿಸಿದ ಗಣ್ಯ ವ್ಯಕ್ತಿಗಳಿಗೂ ಪರಿಷತ್ತಿನ ಗೌರವ ಸದಸ್ಯತ್ವ(ಫೆಲೋಷಿಪ್)ವನ್ನು ನೀಡಲು ನಿಯಮ ರೂಪಿಸಿರುವುದು.

೧೨) ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಶಿಸ್ತುಬದ್ಧವಾಗಿ ಹಾಗೂ ಯಶಸ್ವಿಯಾಗಿ ಸಂಘಟಿಸಲು  ಜಿಲ್ಲಾಡಳಿತ ಮತ್ತು ಸರ್ಕಾರದ ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸುವ ಸಂಬಂಧ ಕೇಂದ್ರ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪಾತ್ರಗಳ ಕುರಿತು ನಿಯಮಗಳನ್ನು ರಚಿಸಲಾಗಿದೆ.

೧೩) ಪರಿಷತ್ತಿನ ಕಾರ್ಯಚಟುವಟಿಕೆಗಳ ಬಗ್ಗೆ ವಿವರವನ್ನು ಸದಸ್ಯರು ಪಡೆದುಕೊಳ್ಳಲು ಪರಿಷತ್ತಿಗೆ ಮಾಹಿತಿಹಕ್ಕು ಅಧಿನಿಯಮ ೨೦೦೫ ಅನ್ವಯಿಸಿರುವುದು.

೧೪) ಕೇಂದ್ರ ಪರಿಷತ್ತಿನ ಅಧ್ಯಕ್ಷರ ಅಧಿಕಾರ ಮತ್ತು ಜವಾಬ್ದಾರಿಗಳನ್ನು ಸ್ಪಷ್ಟೀಕರಣಗೊಳಿಸಿರುವುದು.

೧೫) ಯಾವುದೇ ಸದಸ್ಯನ ವರ್ತನೆಯು ಪರಿಷತ್ತಿನ ಘನತೆ, ಗೌರವ ಹಾಗೂ ಧ್ಯೇಯೋದ್ದೇಶಗಳಿಗೆ ವಿರುದ್ಧವಾಗಿ ಕಂಡುಬಂದಾಗ ಅಂತಹ ಸದಸ್ಯತ್ವವನ್ನು ನಿಯಮಾನುಸಾರ ಅಮಾನತ್ತುಗೊಳಿಸುವ ಅಧಿಕಾರವನ್ನು ಕೇಂದ್ರ ಪರಿಷತ್ತಿನ ಅಧ್ಯಕ್ಷರಿಗೆ ನೀಡಿರುವುದು.

೧೬) ಪರಿಷತ್ತಿನ ದೈನಂದಿನ ಕಾರ್ಯಗಳನ್ನು ನಿರ್ವಹಿಸುವುದಕ್ಕಾಗಿ ಅವಶ್ಯವಿರುವ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವುದು ಹಾಗೂ ಸಿಬ್ಬಂದಿಗಳ ನಿರ್ವಹಣೆಗಾಗಿ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಸರ್ಕಾರದ ಅನುಮತಿಯೊಂದಿಗೆ ರಚಿಸಿಕೊಳ್ಳಲು ಸೇವಾ ನಿಯಮಗಳನ್ನು ರೂಪಿಸಲಾಗಿದೆ.

೧೭) ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಕಟಗೊಳ್ಳುವ ಗ್ರಂಥಗಳ ಮುದ್ರಣ ವೆಚ್ಚಕ್ಕಾಗಿ, ದಾನಿಗಳಿಂದ ‘ಗ್ರಂಥ ದಾಸೋಹ’ ಯೋಜನೆಯಡಿ ದೇಣಿಗೆಯನ್ನು ಸ್ವೀಕರಿಸುವುದು.

೧೮) ಪರಿಷತ್ತಿನ ಸರ್ವತೋಮುಖ ಅಭಿವೃದ್ಧಿಗಾಗಿ ಹಾಗೂ ಕಾರ್ಯಕ್ರಮಗಳ ಯಶಸ್ಸಿಗಾಗಿ ಪರಿಷತ್ತಿಗೆ ಸೂಕ್ತ ಸಲಹೆ, ಸೂಚನೆಗಳನ್ನು ನೀಡಲು ಹಾಗೂ ಪರಿಷತ್ತಿಗೆ ಮಾರ್ಗದರ್ಶನ ಮಾಡಲು ‘ಮಾರ್ಗದರ್ಶಿ ಸಮಿತಿ’ ರಚನೆ ಮಾಡಿ, ವಿವಿಧ ವರ್ಗಗಳ ತಜ್ಞ, ಗಣ್ಯವ್ಯಕ್ತಿಗಳನ್ನು ಸದಸ್ಯರನ್ನಾಗಿ ನೇಮಿಸುವುದು.

೧೯) ಪರಿಷತ್ತಿನ ಕಾರ್ಯಕಾರಿ ಸಮಿತಿಯಲ್ಲಿ ಹಿಂದುಳಿದ ವರ್ಗಗಳ ಪ್ರತಿನಿಧಿಗಳಿಗೆ ಹಾಗೂ ಅಲ್ಪಸಂಖ್ಯಾತರ ಪ್ರತಿನಿಧಿಗಳಿಗೆ ಅವಕಾಶ ಮಾಡಿಕೊಟ್ಟು ಆ ವರ್ಗಗಳಿಗೆ ಪ್ರಾತಿನಿಧ್ಯ ನೀಡಲಾಗಿದೆ. ಜಿಲ್ಲಾ ಸಂಘಗಳ ರಿಜಿಸ್ಟ್ರಾರ್, ವಾರ್ತಾ ಮತ್ತು ಪ್ರಸಾರ ಇಲಾಖೆಯ ನಿರ್ದೇಶಕರು ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರನ್ನು ಪರಿಷತ್ತಿನ ಕಾರ್ಯಕಾರಿ ಸಮಿತಿಯ ಪದನಿಮಿತ್ತ ಸದಸ್ಯರನ್ನಾಗಿ ಸೇರಿಸುವ ಮೂಲಕ ಕಾರ್ಯಕಾರಿ ಸಮಿತಿಯ  ಬಲವನ್ನು ಹೆಚ್ಚಿಸಲಾಗಿದೆ.

ಇದನ್ನೂ ಓದಿ | ಸಾಹಿತ್ಯ ಸಮ್ಮೇಳನಕ್ಕೂ ಮುನ್ನ ನಾಡಗೀತೆಗೆ ಮುಕ್ತಿ ನೀಡಿ: ಧಾಟಿ ನಿಗದಿಗೆ ಸರ್ಕಾರವನ್ನು ಒತ್ತಾಯಿಸಿದ ಕಸಾಪ

Exit mobile version