Site icon Vistara News

Border Dispute | ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ; ರಾಜ್ಯದ ನಿಲುವಿಗೆ‌ ಕನ್ನಡ ಸಾಹಿತ್ಯ ಪರಿಷತ್ ಬೆಂಬಲ

Kannada Sahitya Parishat

ಬೆಂಗಳೂರು: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಕುರಿತು ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿ ವಿಚಾರಣೆ ನ.23ಕ್ಕೆ ನಡೆಯಲಿದ್ದು, ರಾಜ್ಯದ ಪರವಾಗಿ ಸಮರ್ಥವಾಗಿ ವಾದ ಮಂಡಿಸಲು ರಾಜ್ಯ ಸರ್ಕಾರ ವ್ಯವಸ್ಥೆ ಮಾಡಿಕೊಂಡಿರುವುದನ್ನು ಕನ್ನಡ ಸಾಹಿತ್ಯ ಪರಿಷತ್‌ ಸ್ವಾಗತಿಸಿದ್ದು, ಗಡಿ ವಿವಾದದ ಹೋರಾಟದಲ್ಲಿ ಕಸಾಪ, ರಾಜ್ಯ ಸರ್ಕಾರದ ಬೆಂಬಲಕ್ಕೆ ನಿಂತುಕೊಳ್ಳಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.

1956ರ ರಾಜ್ಯ ಪುನರ್‌ ವಿಂಗಡಣಾ ಕಾಯ್ದೆಯನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ. 2004ರಲ್ಲಿ ಸಲ್ಲಿಕೆಯಾದ ಅರ್ಜಿಯ ವಿಚಾರಣೆ ಸತತ 18 ವರ್ಷಗಳಿಂದ ನಡೆದುಕೊಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಪರ ಸಮರ್ಥವಾದ ವಾದ ಮಂಡಿಸಲು ಬೇಕಾದ ಪೂರ್ವ ಸಿದ್ಧತೆಯನ್ನು ಅಲ್ಲಿನ ಸರ್ಕಾರ ಮಾಡಿಕೊಂಡಿದೆ ಎನ್ನಲಾಗಿದೆ. ಅದಕ್ಕಾಗಿ ಮಹಾರಾಷ್ಟ್ರ ಸರ್ಕಾರ, ಸಚಿವರಾದ ಚಂದ್ರಕಾಂತ ಪಾಟೀಲ ಹಾಗೂ ಅಬಕಾರಿ ಸಚಿವ ಶಂಭುರಾಜೇ ದೇಸಾಯಿ ಅವರನ್ನು ಗಡಿ ಉಸ್ತುವಾರಿ ಸಚಿವರೆಂದು ನಿಯೋಜಿಸಿ ಬೆಳಗಾವಿ, ಬೀದರ್‌, ಭಾಲ್ಕಿ, ಕಾರವಾರ ಸೇರಿ 865 ಹಳ್ಳಿಗಳನ್ನು ಮಹಾರಾಷ್ಟ್ರಕ್ಕೆ ಸೇರಬೇಕು ಎನ್ನುವುದು ʻಮಹಾʼ ವಾದವನ್ನು ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮಂಡಿಸಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Border Dispute | ಜತ್‌ ತಾಲೂಕಿನ ಜನ ಕರ್ನಾಟಕ ಸೇರುವ ನಿರ್ಣಯ ಮಾಡಿದ್ದರು: ಮಹಾರಾಷ್ಟ್ರಕ್ಕೆ CM ಬೊಮ್ಮಾಯಿ ಎಚ್ಚರಿಕೆ

ಇದಕ್ಕೆ ಪ್ರತಿಯಾಗಿ ಕರ್ನಾಟಕ ಸರ್ಕಾರ ಕಾಲ ಕಾಲಕ್ಕೆ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರತಿವಾದವನ್ನು ಮಂಡಿಸುತ್ತಲೇ ಬಂದಿದೆ. ಗಡಿವಿವಾದಗಳನ್ನು ಬಗೆಹರಿಸಲು ಅತ್ಯಂತ ಬಲಿಷ್ಠವಾಗಿರುವ ಹಿರಿಯ ವಕೀಲರ ತಂಡವನ್ನು ರಚನೆ ಮಾಡುವ ಮೂಲಕ ಸಿಎಂ ಬೊಮ್ಮಾಯಿ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಸರ್ಕಾರ ರಚನೆ ಮಾಡಿರುವ ವಕೀಲರ ತಂಡದಲ್ಲಿ ಹಿರಿಯ ವಕೀಲರಾದ ಮುಕುಲ್ ರೋಹಟಗಿ, ಶ್ಯಾಮ್ ದಿವಾನ್, ಉದಯ್ ಹೊಳ್ಳ, ಮಾರುತಿ ಜಿರ್ಲೆ ಹಾಗೂ ರಘುಪತಿ ಅವರನ್ನು ನೇಮಿಸಿರುವುದನ್ನು ಕನ್ನಡ ಸಾಹಿತ್ಯ ಪರಿಷತ್ ಸ್ವಾಗತಿಸುತ್ತದೆ ಎಂದು ಹೇಳಿದ್ದಾರೆ.

ಪ್ರಸ್ತುತ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ರಾಜಕೀಯ ವಸ್ತುವಾಗಿದೆ. ಮಹಾರಾಷ್ಟ್ರದಲ್ಲಿ ಯಾವುದೇ ಪಕ್ಷದ ಸರ್ಕಾರವಿದ್ದರೂ ಅಲ್ಲಿಯ ಎಲ್ಲ ಪಕ್ಷಗಳು ಕೂಡ ತಮ್ಮ ರಾಜಕೀಯ ಕಾರಣಕ್ಕಾಗಿ ಇದನ್ನು ಪೋಷಿಸುವ ಕೆಲಸ ಮಾಡುತ್ತಿವೆ. ಆದರೆ ನಿತ್ಯವೂ ಕ್ಯಾತೆ ತೆಗೆಯುತ್ತಿರುವ ಮಹಾರಾಷ್ಟ್ರ ಈವರೆಗೂ ಯಶಸ್ವಿಯಾಗಿಲ್ಲ, ಮುಂದಿನ ದಿನಗಳಲ್ಲಿ ಯಶಸ್ವಿಯಾಗುವುದೂ ಇಲ್ಲ ಎಂಬ ವಿಶ್ವಾಸವಿದೆ. ಕರ್ನಾಟಕದ ಗಡಿ ರಕ್ಷಣೆ ಮಾಡಲು ಕನ್ನಡ ಸಾಹಿತ್ಯ ಪರಿಷತ್ ಸರ್ಕಾರದೊಂದಿಗೆ ಸದಾ ಕಟಿಬದ್ಧವಾಗಿ ನಿಲ್ಲಲಿದೆ. ಕನ್ನಡ ನಾಡು, ನುಡಿ, ನೀರಿನ ಬಗ್ಗೆ ಸರ್ಕಾರದೊಂದಿಗೆ ಪ್ರತಿಯೊಬ್ಬ ಕನ್ನಡಿಗನೂ ಪಕ್ಷಭೇದ ಮರೆತು ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಕೋರಿದ್ದಾರೆ.

ಇದನ್ನೂ ಓದಿ | ಕರ್ನಾಟಕ-ಮಹಾರಾಷ್ಟ್ರ ಗಡಿ ಹೋರಾಟದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪಿಂಚಣಿ ಘೋಷಿಸಿದ ಸಿಎಂ ಶಿಂಧೆ; ಕನ್ನಡ ಪರ ಹೋರಾಟಗಾರನಿಂದ ವಿರೋಧ

Exit mobile version