ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ (Kannada Sahitya Parishat) 2020, 2021 ಹಾಗೂ 2022ನೇ ಸಾಲಿನ ʻಪಾಂಡಪ್ಪ ಲಕ್ಷ್ಮಣ ಹೂಗಾರ ದತ್ತಿʼ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಮೂವರು ಸಾಧಕರನ್ನು ಆಯ್ಕೆ ಮಾಡಿದೆ. ಜತೆಗೆ 2022ನೇ ಸಾಲಿನ ʻಡಾ. ಎಚ್. ವಿಶ್ವನಾಥ್ ಮತ್ತು ಎಂ.ಎಸ್.ಇಂದಿರಾ ದತ್ತಿʼ ಪ್ರಶಸ್ತಿಯನ್ನೂ ಪ್ರಕಟಿಸಿದೆ.
2020ನೇ ಸಾಲಿನ ʻಪಾಂಡಪ್ಪ ಲಕ್ಷ್ಮಣ ಹೂಗಾರ ದತ್ತಿʼ ಪ್ರಶಸ್ತಿಗಾಗಿ ಶಿಕ್ಷಣ ಕ್ಷೇತ್ರದಲ್ಲಿ ಅಗಣಿತ ಸಾಧನೆ ಮಾಡಿರುವ ಬಸವರಾಜ ಪಾಟೀಲ ಸೇಡಂ ಅವರು ಆಯ್ಕೆಯಾಗಿದ್ದಾರೆ. 2021ನೇ ಸಾಲಿನ ಪ್ರಶಸ್ತಿಗಾಗಿ ಸಮಾಜ ಸೇವಾ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಸಂಸ್ಥೆಯಾದ ಬೆಂಗಳೂರಿನ ʻಸಂಧ್ಯಾ ದೀಪ ಸಂಸ್ಥೆʼ ಆಯ್ಕೆಯಾಗಿದೆ. 2022ನೇ ಸಾಲಿನ ಪ್ರಶಸ್ತಿಗಾಗಿ ವಚನ ಸಾಹಿತ್ಯ ಕ್ಷೇತ್ರದಲ್ಲಿ ನಿರಂತರ ಸಾಧನೆಮಾಡುತ್ತಿರುವ ಧಾರವಾಡದ ಬಸವರಾಜ ಸಾದರ ಅವರನ್ನು ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ | Dancing in nature: ಅವನಿ ವಿಹಾರಂ- ಪ್ರಕೃತಿಯ ಮಡಿಲಲ್ಲಿ ಭರತನಾಟ್ಯ ವೈಭವಂ..! ಕನಕಮಜಲಿನಲ್ಲಿ ವೈಶಿಷ್ಟ್ಯಪೂರ್ಣ ಶಿಬಿರ
ವಿಶೇಷ ದೃಷ್ಟಿಚೇತನ ಲೇಖಕರಿಗಾಗಿ ಮೀಸಲಿದ್ದ ʻಡಾ. ಎಚ್. ವಿಶ್ವನಾಥ್ ಮತ್ತು ಎಂ.ಎಸ್. ಇಂದಿರಾ ದತ್ತಿʼ ಪ್ರಶಸ್ತಿಯನ್ನು 2022ನೇ ಸಾಲಿನ ಪ್ರಶಸ್ತಿಗೆ ʻಬೆಳ್ಳಿ ಸೀಮೆಯ ರೈಲ್ವೆ ಸ್ಟೇಷನ್ʼ ಎನ್ನುವ ಕಾದಂಬರಿ ರಚಿಸಿದ ಲೇಖಕಿ ಉಡುಪಿಯ ಸೌಮ್ಯ ಪುತ್ರನ್ ಅವರು ಆಯ್ಕೆಯಾಗಿರುತ್ತಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಣೆ ತಿಳಿಸಿದೆ.
ದತ್ತಿ ಆಯ್ಕೆ ಸಮಿತಿಯ ಅಧ್ಯಕ್ಷತೆ ವಹಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರು ಮಾತನಾಡಿ, ಪ್ರಸ್ತುತ ದತ್ತಿ ಪ್ರಶಸ್ತಿಗಳ ಆಯ್ಕೆಯಾಯಾಗಿರುವ ಎಲ್ಲಾ ಸಾಧಕರಿಗೆ ಕನ್ನಡ ಸಾಹಿತ್ಯ ಪರಿಷತ್ತು ಅಭಿನಂದಿಸಿ ಅವರ ಸಾಹಿತ್ಯ ಸೇವೆ ಹಾಗೂ ಸಮಾಜ ಸೇವೆ ನಿರಂತರವಾಗಿರಲಿ ಎಂದು ಆಶಿಸುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಅಪರಿಮಿತ ಸಾಧನೆ ಮಾಡಿರುವ ಗಣ್ಯರನ್ನು ಸೂಕ್ಷ್ಮವಾಗಿ ಗುರುತಿಸಿ ದತ್ತಿ ಪ್ರಶಸ್ತಿಗೆ ಆಯ್ಕೆ ಸಮಿತಿ ಆಯ್ಕೆ ಮಾಡಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ | ರಾಜ ಮಾರ್ಗ ಅಂಕಣ : ನೀವೆಷ್ಟು ಪ್ರತಿಭಾವಂತರೇ ಆದರೂ ವೃತ್ತಿಪರತೆ ಇಲ್ಲದಿದ್ದರೆ ನೀವು ಗೆಲ್ಲುವುದಿಲ್ಲ!
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ನಾಡೋಜ ಡಾ. ಮನು ಬಳಿಗಾರ್, ಡಾ.ಎಚ್.ವಿಶ್ವನಾಥ್ ಬೆಂಗಳೂರು, ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ನೇ.ಭ.ರಾಮಲಿಂಗ ಶೆಟ್ಟಿ, ಡಾ. ಪದ್ಮಿನಿ ನಾಗರಾಜು ಹಾಗೂ ಗೌರವ ಕೋಶಾಧ್ಯಕ್ಷರಾದ ಡಾ. ಬಿ.ಎಂ.ಪಟೇಲ್ ಪಾಂಡು ಇದ್ದರು.