Site icon Vistara News

Kannada Sahitya Sammelana | ಸಾಮಾಜಿಕ‌ ಜಾಲತಾಣದಲ್ಲಿ ಹರಿದಾಡಿದ ಸಮ್ಮೇಳನದ ಆಹ್ವಾನ ಪತ್ರಿಕೆ; ಅಧಿಕೃತವಲ್ಲ ಎಂದ ಕಸಾಪ

Kannada Sahitya Sammelana

ಹಾವೇರಿ: ಜನವರಿಯಲ್ಲಿ ಹಾವೇರಿಯಲ್ಲಿ ನಡೆಯುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ (Kannada Sahitya Sammelana) ಭರದ ಸಿದ್ಧತೆಗಳು ನಡೆಯುತ್ತಿವೆ. ಈ ನಡುವೆ ಅಧಿಕೃತವಾಗಿ ಬಿಡುಗಡೆಯಾಗುವುದಕ್ಕೂ ಮೊದಲೇ ಸಮ್ಮೇಳನದ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿರುವುದು ಕಸಾಪಗೆ ಮುಜುಗರ ತರಿಸಿದೆ. ಆದರೆ, ಈ ಆಹ್ವಾನ ಪತ್ರಿಕೆ ಅಧಿಕೃತವಲ್ಲ ಎಂದು ಕಸಾಪ ಅಧ್ಯಕ್ಷರು ಸ್ಪಷ್ಟನೆ ನೀಡಿದ್ದಾರೆ.

ಜನವರಿ 6,7 ಹಾಗೂ 8ರಂದು ಹಾವೇರಿಯಲ್ಲಿ ನಡೆಯುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ತಯಾರಿ ಚುರುಕಾಗಿ ಸಾಗುತ್ತಿದೆ. ವೇದಿಕೆ, ವಸತಿ ಸೇರಿ ಹಲವು ಸಮಿತಿಗಳ ಮೂಲಕ ಸಿದ್ಧತಾ ಕಾರ್ಯಗಳಿಗೆ ವೇಗ ಹೆಚ್ಚಿಸಲಾಗಿದ್ದು, ಈ ನಡುವೆ ಮುಂದಿನ ವಾರ ಅಧಿಕೃತವಾಗಿ ಬಿಡುಗಡೆಯಾಗಬೇಕಿದ್ದ ಸಮ್ಮೇಳನದ ಆಹ್ವಾನ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸುದ್ದಿಗೋಷ್ಠಿ ಕರೆದು ಆಹ್ವಾನ ಪತ್ರಿಕೆಯನ್ನು ಬಿಡುಗಡೆ ಮಾಡುವುದು ಸಂಪ್ರದಾಯ. ‌ಆದರೆ, ಇದಕ್ಕೂ ಮೊದಲೇ ಈ ಆಹ್ವಾನ ಪತ್ರಿಕೆಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ವೈರಲ್ ಮಾಡಲಾಗಿದೆ. ಇದು ಕನ್ನಡ ಸಾಹಿತ್ಯ ಪರಿಷತ್ತಿಗೆ ಸಾಕಷ್ಟು ಮುಜುಗರವನ್ನುಂಟು ಮಾಡಿದೆ.

ಇದನ್ನೂ ಓದಿ | ಟಿಪ್ಪು ವಿವಾದ | ದೇವಾಲಯಗಳಲ್ಲಿ ಟಿಪ್ಪು ಆರಂಭಿಸಿದ್ದ ದೀವಟಿಕೆ ಸಲಾಮ್‌ಗೆ ಬ್ರೇಕ್‌, ಮುಜರಾಯಿ ಇಲಾಖೆ ಹೆಸರೂ ಬದಲು

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆಹ್ವಾನ ಪತ್ರಿಕೆ ಬಗ್ಗೆ ಕಸಾಪ ಅಧ್ಯಕ್ಷ ನಾಡೋಜ ಮಹೇಶ ಜೋಶಿ ಸ್ಪಷ್ಟನೆ ನೀಡಿದ್ದು, ಇದು ಅಧಿಕೃತ ಆಹ್ವಾನ ಪತ್ರಿಕೆಯಲ್ಲ, ಕೆಲ ಕಿಡಿಗೇಡಿಗಳು ಇದನ್ನು ಹರಿಬಿಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಆಹ್ವಾನ ಪತ್ರಿಕೆ ಸಿದ್ಧತಾ ಹಂತದಲ್ಲಿರುವಾಗ ಗೊಂದಲ ಉಂಟು ಮಾಡುವ ದುರುದ್ದೇಶದಿಂದ ಯಾರೋ ಹೀಗೆ ಮಾಡಿದ್ದು, ಕಸಾಪ ಪರಂಪರೆಯಂತೆ ಗಣ್ಯರ ಸಮ್ಮುಖದಲ್ಲಿ ಮಾಧ್ಯಮದವರನ್ನು ಕರೆದು ಪತ್ರಿಕೆ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.‌ ಇನ್ನೊಂದೆಡೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಕನ್ನಡಾಭಿಮಾನಿಗಳು ಆಗ್ರಹಿಸಿದ್ದಾರೆ.

ಅಧಿಕೃತವಾಗಿ ಬಿಡುಗಡೆಗೂ ಮೊದಲೇ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿರುವುದು ಕಸಾಪದ ಮುಜುಗರಕ್ಕೆ ಕಾರಣವಾಗಿದ್ದು, ಸಮ್ಮೇಳನವನ್ನು ಅಚ್ಚುಕಟ್ಟಾಗಿ ಮಾಡಲು ಹೆಚ್ಚಿನ ನಿಗಾವಹಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ | Border dispute | ಅಮಿತ್‌ ಶಾಗೆ ವಿವರ ನೀಡಿದ ಬೊಮ್ಮಾಯಿ, ಸೋಮವಾರ ರಾಜ್ಯದ ಸಂಸದರಿಂದ ಶಾ ಭೇಟಿ

Exit mobile version