ಬೆಂಗಳೂರು: ಹಾವೇರಿಯಲ್ಲಿ 2023ರ ಜನವರಿ 6, 7 ಹಾಗೂ 8ರಂದು ನಡೆಯುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಆಯೋಜಿಸಿರುವ ಕನ್ನಡ ಜ್ಯೋತಿಯನ್ನು ಹೊತ್ತ “ಕನ್ನಡ ರಥ”ದ ಜಾಥಾಗೆ ಡಿಸೆಂಬರ್ 1ರಂದು ಬೆಳಗ್ಗೆ 10 ಗಂಟೆಗೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಭುವನಗಿರಿಯ ಕನ್ನಡ ತಾಯಿ ಭುವನೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ವಿದ್ಯುಕ್ತ ಚಾಲನೆ ನೀಡಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ತಿಳಿಸಿದ್ದಾರೆ.
ಭುವನಗಿರಿಯಿಂದ ಹೊರಡುವ ಕನ್ನಡ ರಥಯಾತ್ರೆ ರಾಜ್ಯದ ವಿವಿಧ ಭಾಗಗಳಲ್ಲಿ ಮತ್ತು ಹಾವೇರಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಸಂಚರಿಸಲಿದೆ. ಸಮ್ಮೇಳನ ಉದ್ಘಾಟನೆ ಸಂದರ್ಭದಲ್ಲಿ ಕನ್ನಡ ರಥವು ವಿಶೇಷವಾಗಿ ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದೆ. ಇದರಲ್ಲಿನ ಕನ್ನಡ ಜ್ಯೋತಿಯಿಂದಲೇ 2023ರ ಜನವರಿ 6ರಂದು ನಡೆಯುವ ಸಮ್ಮೇಳನದಲ್ಲಿ ಉದ್ಘಾಟನೆ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜ್ಯೋತಿ ಬೆಳಗಿಸಿ ಚಾಲನೆ ನೀಡಲಿದ್ದಾರೆ ಎಂದು ಹೇಳಿದ್ದಾರೆ.
ಹಾವೇರಿಯಲ್ಲಿ ಹಿರಿಯ ಕವಿ ಡಾ. ದೊಡ್ಡರಂಗೇಗೌಡ ಅವರ ಅಧ್ಯಕ್ಷತೆಯಲ್ಲಿ ಸಮ್ಮೇಳನವು ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿಯೇ ಮೊದಲ ಬಾರಿಗೆ “ಕನ್ನಡ ಜ್ಯೋತಿ”ಯನ್ನು ಹೊತ್ತ ಕನ್ನಡದ ಸ್ವಾಭಿಮಾನದ ಸಂಕೇತವಾದ “ಕನ್ನಡ ರಥ”ದ ಜಾಥಾವನ್ನು ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದು, ಹೊಸ ಪರಂಪರೆಗೆ ನಾಂದಿ ಹಾಡಲಾಗುತ್ತಿದೆ. ಈ ಜಾಥಾವನ್ನು ಮಾದರಿಯನ್ನಾಗಿಸುವ ನಿಟ್ಟಿನಲ್ಲಿ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಕನ್ನಡ ರಥ ಜಾಥಾ ಯಶಸ್ವಿಗೊಳಿಸಲು ಸಮಸ್ತ ಕನ್ನಡಿಗರು ಸಹಕಾರ ನೀಡಬೇಕೆಂದು ಕೋಡಿದ್ದಾರೆ.
ಇದನ್ನೂ ಓದಿ | CM Bommai | ಕೇಂದ್ರ ಜಲಶಕ್ತಿ ಸಚಿವರ ಜತೆ ಸಿಎಂ ಬೊಮ್ಮಾಯಿ ಚರ್ಚೆ: ರಾಜ್ಯದ ಯೋಜನೆಗಳಿಗೆ ಶೀಘ್ರ ಅನುಮತಿ ಕೋರಿಕೆ