Site icon Vistara News

ಕನ್ನಡ ಸಾಹಿತ್ಯ ಸಮ್ಮೇಳನ : ತೀರ್ಪುಗಳು ಕನ್ನಡದಲ್ಲಿದ್ದರೆ ಜನರಿಗೆ ನ್ಯಾಯ: ನ್ಯಾ. ಅರಳಿ ನಾಗರಾಜ

law seminar

ಹಾವೇರಿ: ಕಾನೂನಿನ ಮೇಲೆ ಜನರಿಗೆ ನಂಬಿಕೆ ಉಳಿಯಲು ನ್ಯಾಯಾಲಯ ನೀಡುವ ತೀರ್ಪುಗಳು ಜನ ಸಾಮಾನ್ಯರಿಗೆ ಅರ್ಥವಾಗುವಂತಿರಬೇಕು, ಈ ದಿಸೆಯಲ್ಲಿ ಕನ್ನಡ ಭಾಷೆಯಲ್ಲಿ ನ್ಯಾಯದಾನ ಮಾಡಿದರೆ, ನಮ್ಮಲ್ಲಿನ ಜನರಿಗೆ ನ್ಯಾಯಾಲಯದ ಮೇಲೆ ಹೆಚ್ಚು ನಂಬಿಕೆ, ವಿಶ್ವಾಸ ಬೆಳೆಯುತ್ತದೆ ಎಂದು ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶ ಅರಳಿ ನಾಗರಾಜ ಪ್ರತಿಪಾದಿಸಿದರು.

ಶನಿವಾರ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳದ ಕನಕ-ಶರೀಫ- ಸರ್ವಜ್ಞ ಪ್ರಧಾನ ವೇದಿಕೆಯಲ್ಲಿ ನಡೆದ “ಕನ್ನಡದಲ್ಲಿ ಕಾನೂನು ಸಾಹಿತ್ಯ” ಕುರಿತ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನ್ಯಾಯಾಲಯ ನೀಡುವ ತೀರ್ಪುಗಳು ಇಂದು ಕಕ್ಷಿದಾರರಿಗೆ, ಶ್ರೀಸಾಮಾನ್ಯರಿಗೆ ಅರ್ಥವಾಗದ ಕಾರಣ, ಪ್ರಕರಣಗಳು ದೀರ್ಘಕಾಲ ನಡೆಯುತ್ತಿವೆ. ಪ್ರಕರಣಗಳ ತೀರ್ಪುಗಳು ವಿಳಂಬವಾಗುತ್ತವೆ. ಶ್ರೀಸಾಮಾನ್ಯರಿಗೆ ಕಥೆಗಳ ಮೂಲಕ, ನಾಟಕಗಳ ಮೂಲಕ, ಸಾಹಿತ್ಯದ ಮೂಲಕ ಅವರ ಮಾತೃಭಾಷೆಯಲ್ಲಿ ಕಾನೂನು ತಿಳಿವಳಿಕೆ ಮೂಡಿಸಿದರೆ ನ್ಯಾಯ ಸಾಧ್ಯ ಎಂದು ಹೇಳಿದರು.

ಹುಬ್ಬಳ್ಳಿ ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಡಾ. ಸಿ. ಬಸವರಾಜ ಮಾತನಾಡಿ, ಕಾನೂನಾತ್ಮಕ ಪುಸ್ತಕಗಳು ಹೆಚ್ಚಿನ ಪ್ರಮಾಣದಲ್ಲಿ ಕನ್ನಡದಲ್ಲಿ ಹೊರಬರುವಂತೆ ಮಾಡಲು ಸರ್ಕಾರ ಕನ್ನಡ ಕಾನೂನು ಪ್ರಾಧಿಕಾರ ರಚನೆ ಮಾಡಬೇಕೆಂದು ಒತ್ತಾಯಿಸಿದರು. ಕರ್ನಾಟಕದಲ್ಲಿ ಇಂದು ಸುಮಾರು 109 ಕಾನೂನು ಕಾಲೇಜುಗಳಿದ್ದು, ಆದರೂ ಕಾನೂನಾತ್ಮಕ ಕನ್ನಡ ಪುಸ್ತಕಗಳು ದೊರಕದೇ ಇರುವುದು ದುರ್ದೈವದ ಸಂಗತಿಯಾಗಿದೆ. ಕಾನೂನು ವ್ಯಾಸಂಗಕ್ಕೆ ಹೆಚ್ಚು ಸಂಶೋಧನಾತ್ಮಕ ಪುಸ್ತಕಗಳು ದೊರಕಿಸಿಕೊಟ್ಟರೆ ಕನ್ನಡ ಭಾಷಾಭಿಮಾನ ಹೆಚ್ಚುವುದಲ್ಲದೆ, ಕನ್ನಡ ಕಾನೂನಾತ್ಮಕ ಸಾಹಿತ್ಯ ಬೆಳೆಸುವುದರಲ್ಲಿ ಸಹಕಾರಿಯಾಗುತ್ತದೆ. ಕಾನೂನಾತ್ಮಕ ಸಾಹಿತ್ಯ ಬರೆಯುವ ಯುವ ಸಾಹಿತಿಗಳಿಗೆ ಸರ್ಕಾರ ಪ್ರೋತ್ಸಾಹ ಧನ ನೀಡಬೇಕು ಎಂದರು.

ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಮೀಸಲಾತಿ ವರ್ಗೀಕರಣ ವರದಿ ಪುನರ್‌ಪರಿಶೀಲನೆಗೆ ಸರ್ಕಾರಕ್ಕೆ ಮನವಿ: ಕೆ. ಜಯಪ್ರಕಾಶ ಹೆಗ್ಡೆ

‘ಶ್ರೀಸಾಮಾನ್ಯರಿಗೆ ಕನ್ನಡದಲ್ಲಿ ಕಾನೂನು ಅರಿವು’ ಕುರಿತು ನಿವೃತ್ತ ಜಿಲ್ಲಾ ನ್ಯಾಯಾಧೀಶ ಸಿದ್ದಪ್ಪ ಕೆಂಪನಗೌಡರ ಮಾತನಾಡಿ, ನ್ಯಾಯಾಲಯಗಳು ಇರುವುದು ನ್ಯಾಯಾಧೀಶರಿಗಲ್ಲ, ನ್ಯಾಯಾಲಯ ಇರುವುದು ಶ್ರೀಸಾಮಾನ್ಯರಿಗೆ. ಆದ್ದರಿಂದ ಪ್ರತಿಯೊಬ್ಬ ಶ್ರೀಸಾಮಾನ್ಯರಿಗೂ ಸಾಮಾನ್ಯ ಕಾನೂನು ತಿಳಿವಳಿಕೆ ಅತ್ಯಗತ್ಯವಾಗಿದೆ. ಸಾಮಾನ್ಯ ಜನರು ‘ನನಗೆ ಕಾನೂನು ಗೊತ್ತಿಲ್ಲ’ ಎನ್ನಬಾರದು, ಕಾನೂನು ತಪ್ಪು ಮಾಡಿದರೆ ಕ್ಷಮಿಸುವುದಿಲ್ಲ. ನ್ಯಾಯಾಧೀಶರು ಕೇವಲ ಪ್ರಶಸ್ತಿಗಾಗಿ ಕನ್ನಡ ಭಾಷೆಯಲ್ಲಿ ತೀರ್ಪು ನೀಡುವುದಲ್ಲ, ನ್ಯಾಯಾಧೀಶರಿಗೆ ಕನ್ನಡ ಭಾಷೆಯ ಬಗ್ಗೆ ಅಭಿಮಾನವಿರಲಿ. ತಾವು ನೀಡುವ ತೀರ್ಪುಗಳು ಕನ್ನಡದಲ್ಲಿದ್ದರೆ ಶ್ರೀಸಾಮಾನ್ಯರಿಗೂ, ಕಕ್ಷಿದಾರರಿಗೂ ನ್ಯಾಯ ಒದಗಿಸಿದಂತೆ ಎಂದರು.

‘ಕಾನೂನು ವಿಷಯಗಳ ಕುರಿತು ಸಾಹಿತ್ಯ ರಚನೆ’ ಬಗ್ಗೆ ನಿವೃತ್ತ ನ್ಯಾಯಾಧೀಶ ಬಿ. ಶಿವಲಿಂಗೇಗೌಡ ಮಾತನಾಡಿ, ಕಾನೂನು ಅದರದೇ ಆದ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುತ್ತದೆ. ಆದರೆ ಸಾಹಿತ್ಯಕ್ಕೆ ಚೌಕಟ್ಟು, ನಿರ್ಬಂಧಗಳು ಇರುವುದಿಲ್ಲ, ಕಾನೂನು ಮತ್ತು ಸಾಹಿತ್ಯ ಬೇರೆ ಬೇರೆ ಲೋಕಗಳಾಗಿದ್ದರೂ ಜೀವನಾನುಭವದಲ್ಲಿ ಕಾನೂನಿಗೆ ಸಾಹಿತ್ಯದ ಅಗತ್ಯವಿದೆ. ಆದ್ದರಿಂದ ನ್ಯಾಯಾಲಯದ ತೀರ್ಪುಗಳು, ಪ್ರಕರಣಗಳು ಅರ್ಥವಾಗಬೇಕಾದರೆ ಅವರ ಭಾಷೆ ಸಾಹಿತ್ಯಕ್ಕೆ ಅನುಗುಣವಾಗಿ ತೀರ್ಪು ನೀಡಿದರೆ ಬೇಗ ಅರ್ಥವಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಶಿವಶರಣರು ಹೊಸ ಧರ್ಮ ಸ್ಥಾಪಿಸಿದರು ಎನ್ನುವುದು ತಲೆಬುಡವಿಲ್ಲದ ವಾದ: ಡಾ. ಸಂಗಮೇಶ ಸವದತ್ತಿಮಠ ಆಕ್ರೋಶ

Exit mobile version