ಹಾವೇರಿ: ಇಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನ ನಿಜಾರ್ಥದಲ್ಲಿ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಆಗಿದೆ. ಇಲ್ಲಿ ವಿಶ್ವದ ಎಲ್ಲ ಕಡೆಯಿಂದ ಕನ್ನಡಿಗರು ಆಗಮಿಸಿದ್ದಾರೆ. ಲೋಕದ ಎಲ್ಲ ಜ್ಞಾನ ಇಲ್ಲಿ ಸಂಗಮಿಸಿದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಅವರು ಹಾವೇರಿಯ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ದಿನ ಪ್ರಧಾನ ವೇದಿಕೆಯಲ್ಲಿ ನಡೆದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ವರ ಹಿತವನ್ನು ಕಾಪಾಡುವುದು ಸಾಹಿತ್ಯ. ಶಾಸನ ಸಭೆಗಳಲ್ಲಿ ಶಾಸಕ ಜನರ ಸಮಸ್ಯೆಗಳನ್ನು ಹೇಳಿದರೆ ಕವಿ ತನ್ನ ಬರಹಗಳ ಮುಖಾಂತರ ಸಮಾಜವನ್ನು ತಿದ್ದುವ ಕೆಲಸ ಮಾಡುತ್ತಾನೆ. ಇತ್ತೀಚಿನ ದಿನಗಳಲ್ಲಿ ಆಂಗ್ಲ ಭಾಷೆಯ ಶಾಲೆಗಳು ಹೆಚ್ಚುತ್ತಿವೆ. ಆದರೆ ಆಧುನಿಕ ಯುಗದಲ್ಲೂ ನಮ್ಮ ಮಕ್ಕಳಿಗೆ ಕನ್ನಡದ ಮೇಲೆ ಪ್ರೀತಿ ಹೆಚ್ಚುತ್ತಿದೆ. ಈ ಪ್ರೀತಿಯನ್ನು ನಮ್ಮ ಮಕ್ಕಳಲ್ಲಿ ಬೆಳೆಸಬೇಕಿದೆ. ಯಾವ ಭಾಷೆಗಳನ್ನು ಕಲಿತರೂ, ನಮ್ಮ ಮಾತೃಭಾಷೆಯನ್ನು ಮರೆಯಬಾರದು ಎಂದವರು ನುಡಿದರು.
ಎಲ್ಲೆಲ್ಲಿ ಕನ್ನಡದ ಆಸಕ್ತಿ, ಪ್ರೀತಿ ಇದೆಯೋ ಅದೆಲ್ಲಾ ಕನ್ನಡದ ಲೋಕವೆಂದೇ ಭಾವಿಸಬೇಕು. ಅದು ಕೆನಡಾ ಇರಬಹುದು, ಬೆಲ್ಜಿಯಂ ಕೂಡ ಇರಬಹುದು. ಎರಡು ಸಾವಿರ ವರ್ಷಗಳ ಸಂಪನ್ನ ಇತಿಹಾಸ ಹೊಂದಿರುವ ಕನ್ನಡ ಭಾಷೆಯ ಸಾಹಿತ್ಯವು ನಿತ್ಯಕ್ಕಿಂತ ಭಿನ್ನವಾದ ಪ್ರಪಂಚವನ್ನು ನಮಗೆ ಸಾಹಿತ್ಯದ ಮೂಲಕ ತೋರಿಸಿಕೊಡುತ್ತದೆ. ಹಿತವಾದುದನ್ನು ಬೇಕೆಂದು ಸ್ವೀಕರಿಸುವುದು, ಅಹಿತವಾದುದನ್ನು ಬೇಡವೆಂದು ಬಿಡುವುದನ್ನು ಕಲಿಸಿಕೊಡುತ್ತದೆ ಎಂದು ನಟ ರಮೇಶ್ ಅರವಿಂದ್ ಹೇಳಿದರು.
ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಚಲನಚಿತ್ರಗಳು ಹಾಗೂ ಧಾರಾವಾಹಿಗಳು ಅವಲೋಕನ ಮಾಡಿಕೊಳ್ಳಬೇಕು: ಹಿರಿಯ ನಟ ದತ್ತಣ್ಣ ಅಭಿಪ್ರಾಯ
ವಿಶ್ರಾಂತ ಲೋಕಾಯುಕ್ತರಾದ ನ್ಯಾ.ಸಂತೋಷ್ ಹೆಗ್ಡೆ ಅವರು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ನೆರವೇರಿಸಿದರು. ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಗುರುರಾಜ ಕರ್ಜಗಿ, ಜಿನದತ್ತ ದೇಸಾಯಿ, ಡಾ.ಶರಣ ಪಾಟೀಲ ಸೇರಿದಂತೆ ಮೂವತ್ತು ಮಂದಿ ಸಾಧಕರನ್ನು ಸನ್ಮಾನಿಸಲಾಯಿತು. ಸಮ್ಮೇಳನಾಧ್ಯಕ್ಷ ಡಾ.ದೊಡ್ಡರಂಗೇಗೌಡ, ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಉಪಸ್ಥಿತರಿದ್ದರು.
ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಆಕ್ರೋಶದ ಕವಿತೆ ಮತ್ತು ಕವಿಯ ಜೋಳಿಗೆಯ ಸವಿಜೇನು!