ಹಾವೇರಿ (ಕನಕ-ಶರೀಫ-ಸರ್ವಜ್ಞ ಪ್ರಧಾನ ವೇದಿಕೆ): ಉನ್ನತ ಸಾಧನೆ ಮಾಡಿದ ಕೃಷಿಕರ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತು ಇಂತಹ ಸಮ್ಮೇಳನಗಳಲ್ಲಿ ಪುಸ್ತಕಗಳನ್ನು ಬಿಡುಗಡೆ ಮಾಡುವುದು ಸೂಕ್ತ ಎಂದು ಧಾರವಾಡದ ವಿಶ್ರಾಂತ ಕುಲಪತಿ ಎಸ್.ಎ. ಪಾಟೀಲ್ ಹೇಳಿದರು.
ಭಾನುವಾರ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳದ ಕನಕ-ಷರೀಫ-ಸರ್ವಜ್ಞ ಪ್ರಧಾನ ವೇದಿಕೆಯಲ್ಲಿ ನಡೆದ ‘ಅನ್ನದಾತರ ಅಳಲು ಮತ್ತು ಅಪೇಕ್ಷೆ’ವಿಷಯ ಕುರಿತ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಮ್ಮ ಅಜ್ಜ ಮುತ್ತಜ್ಜರು ಕೃಷಿಗೆ ಹೇಗೆ ಸಮಯ ನೀಡುತ್ತಿದ್ದರೋ ಆ ರೀತಿಯಲ್ಲಿ ಇಂದಿನ ರೈತ ಕೃಷಿಗೆ ಸಮಯ ನೀಡಬೇಕಿದೆ. ಯುವ ಪೀಳಿಗೆ ಕೃಷಿಯತ್ತ ನಿರಾಸಕ್ತರಾಗುತ್ತಿದ್ದು, ಇಂಜಿನಿಯರ್, ಡಾಕ್ಟರ್, ಸಾಫ್ಟ್‍ವೇರ್, ಹಾರ್ಡ್‍ವೇರ್ ಇಂಜಿನಿಯರ್ ಕ್ಷೇತ್ರಗಳು ಅವರಿಗೆ ಆಕರ್ಷಕವಾಗಿ ಕಾಣುತ್ತಿವೆ. ಹೀಗಾಗಿ ಕೃಷಿ ಕೃಶವಾಗುತ್ತಿದೆ, ಕೃಷಿಯಲ್ಲಿ ಮೊದಲಿದ್ದ ಜೋಶ್ ಈಗ ಉಳಿದಿಲ್ಲ. ಸಾವಯವ ಕೃಷಿಗೆ ಉತ್ತೇಜನ ನೀಡುವ ಯೋಜನೆ ಜಾರಿಗೊಂಡಿದೆ, ಆದರೆ ಅದರ ಉಪಯೋಗ ಎಷ್ಟರ ಮಟ್ಟಿಗೆ ಆಗುತ್ತಿದೆ ಎಂದು ಪ್ರಶ್ನಿಸಿದ ಅವರು ರೈತರು ಶ್ರಮದ ಜೊತೆಗೆ ಬೆಳೆಯಲ್ಲೂ ವೈವಿಧ್ಯತೆ ಅಳವಡಿಸಿಕೊಂಡರೆ, ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡರೆ ಮಾತ್ರ ಲಾಭದಾಯಕವಾಗಿಸಲು ಸಾಧ್ಯ ಎಂದರು.
ಕೃಷಿ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳ ಕುರಿತು ಮಾತನಾಡಿದ ರಾಯಚೂರಿನ ಕವಿತಾ ಮಿಶ್ರಾ ಅವರು, ಜನಸಂಖ್ಯೆಗೆ ಅನುಗುಣವಾಗಿ ಆಹಾರ ಉತ್ಪಾದನೆ ಮಾಡುವುದು ಕೃಷಿ ಕ್ಷೇತ್ರಕ್ಕೆ ಇರುವ ಬಹುದೊಡ್ಡ ಸವಾಲು. ಕೃಷಿ ಬಿಟ್ಟು ರೈತ ನಗರ, ಪಟ್ಟಣಗಳತ್ತ ಮುಖ ಮಾಡುತ್ತಿದ್ದಾನೆ. ಅಂತಾರಾಜ್ಯ ನದಿಗಳ ವಿವಾದ, ಸತತ ಅನುದಾನ ಪೂರೈಕೆಯಲ್ಲಿನ ವ್ಯತ್ಯಯ ಮುಂತಾದವು ಕೂಡ ನೀರಾವರಿ ಕೃಷಿ ವಿಸ್ತರಣೆ ಕುಂಠಿತಕ್ಕೆ ಕಾರಣವಾಗಿದೆ. ಕೃಷಿ ಸಾಗುವಳಿ ಭೂಮಿಯ ಕೊರತೆ ಉಂಟಾಗುತ್ತಿದ್ದು, ಆಹಾರದ ಕೊರತೆ ಎದುರಾಗುವ ಆತಂಕವೂ ಇದೆ. ಅಕಾಲಿಕ ಮಳೆ, ಕೈಗಾರಿಕಾ ಮಾಲಿನ್ಯದಿಂದಲೂ ರೈತ ನಷ್ಟ ಅನುಭವಿಸುತ್ತಿದ್ದಾನೆ, ಆದರೆ ಕೃಷಿ ವೆಚ್ಚ ಹಿಂದಿಗಿಂತಲೂ ನಾಲ್ಕು ಪಟ್ಟು ಹೆಚ್ಚಾಗಿದೆ. ಕೃಷಿಯನ್ನು ಪೂರಕವಾಗಿಸಲು ನರೇಗಾ ಯೋಜನೆಯಲ್ಲಿ ಬದಲಾವಣೆ ಅಗತ್ಯವಿದೆ ಎಂದರು.
“ಕೃಷಿಕ ಮತ್ತು ಕೃಷಿ ಕಾರ್ಮಿಕರ ಸ್ಥಿತಿಗತಿ” ಕುರಿತು ವಿಷಯ ಮಂಡಿಸಿದ ಹಿರಿಯ ಕೃಷಿಕ ಈರಯ್ಯ ಕಿಲ್ಲೇದಾರ, ಜಗತ್ತಿಗೆ ಅನ್ನವನ್ನು ನೀಡುವ ರೈತ ಇಂದು ಪರಾವಲಂಬಿ ಜೀವನ ಸಾಗಿಸುವ ಪರಿಸ್ಥಿತಿ ಬಂದಿದೆ. ರೈತ ಬೆಳೆದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಇಲ್ಲದೆ, ಬೆಂಬಲ ಬೆಲೆ ಇಲ್ಲದೆ ಹತಾಶರಾಗಿ ಮಾರುಕಟ್ಟೆಗೆ ತಂದ ಬೆಳೆಗಳನ್ನು ರಸ್ತೆ ಪಾಲು ಮಾಡುವ ಸ್ಥಿತಿ ಬಂದಿದೆ. ಕೃಷಿ ಮತ್ತು ಹಿಂದಿನ ಕೃಷಿ ಪರಿಕಲ್ಪನೆ, ಪರಿಕರಗಳು, ಪರಿಭಾಷೆ, ಸ್ಥಿತಿಗತಿಗಳು ಎಲ್ಲವೂ ಬದಲಾಗಿವೆ. ಪ್ರಾಚೀನ ಕಾಲದಲ್ಲಿದ್ದ ಶ್ರಮದ ಸಂಸ್ಕೃತಿ, ದುಡಿಮೆಯ ದೇವರು ಎಂದಿರುವ ಆದರ್ಶಗಳು ಇಂದು ಬದಲಾಗಿವೆ ಎಂದರು.
ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಒಂದಾಗಿಸುವ ಕವಿತೆಯಲ್ಲಿ ಮಿಂದೆದ್ದ ಕವಿಗೋಷ್ಠಿ
ಆಶಯ ನುಡಿಗಳನ್ನಾಡಿದ ಹಿರಿಯ ಕೃಷಿಕ ಎಚ್.ವಿ. ಸಜ್ಜನ್, ಅನ್ನ ಹೆಚ್ಚಿಸಲು ಭೂಮಿಯನ್ನು ರಸಗೊಬ್ಬರಗಳಿಂದ ವಿಷ ಮಾಡಿ, ವಿಷಪೂರಿತ ಆಹಾರ ಹೆಚ್ಚಾಗುತ್ತಿದೆ. ಕೃಷಿಯಲ್ಲಿ ಅನೇಕ ಮೂಲ ತಳಿಗಳನ್ನು ಕಳೆದುಕೊಂಡಿದ್ದೇವೆ. ಆಧುನಿಕ ಬೇಸಾಯ ಪದ್ದತಿಯಿಂದ ರೈತನ ಆದಾಯ ಲಾಭಕ್ಕಿಂತ ನಷ್ಟವೇ ಹೆಚ್ಚಾಗುತ್ತಿದೆ. ಮೊದಲು ಸುಸ್ಥಿರ ಕೃಷಿ ಇದ್ದಾಗ ಇತರರಿಗೂ ತಾನು ಬೆಳೆದ ಬೆಳೆಯನ್ನು ಹಂಚಿ ಶೇಖರಿಸಿ ಇಡುತ್ತಿದ್ದ. ಆದರೆ ಬದಲಾದ ಕೃಷಿ ಪದ್ಧತಿಯಿಂದ ರೈತನೇ ಕೊಂಡುಕೊಳ್ಳುವ ಸ್ಥಿತಿಗೆ ಬಂದಿದೆ. ರೈತನಿಗೆ ಸರ್ಕಾರ ಸೂಕ್ತ ಮಾರುಕಟ್ಟೆ ವ್ಯವಸ್ಥೆ, ಸೂಕ್ತ ಬೆಂಬಲ ಬೆಲೆ, ಮಧ್ಯವರ್ತಿಗಳ ಹಾವಳಿ ತಡೆಗಟ್ಟಿ ರೈತನ ಏಳಿಗಾಗಿ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.
‘ಸಾವಯವ ಕೃಷಿ ಮತ್ತು ಇಂದಿನ ಸ್ಥಿತಿಗತಿ’ಕುರಿತು ಡಾ. ಚನ್ನಪ್ಪ ಅಂಗಡಿ ಮಾತನಾಡಿ, ರೈತನ ಸ್ಥಿತಿಗತಿ ಸುಧಾರಿಸಲು ಸಾವಯವ ಕೃಷಿ ಪದ್ಧತಿ ಇಂದು ಅಗತ್ಯವಾಗಿದ್ದು, ಹಿಂದಿನ ಸ್ಥಿತಿಯನ್ನು ಸುಧಾರಿಸುವುದು ಸಾವಯವ ಕೃಷಿ ಪದ್ಧತಿಯ ಉದ್ದೇಶವಾಗಿದೆ. ಬಾಹ್ಯ ಬೇಸಾಯದ ಜೊತೆ ಅಂತರಂಗದ ಬೇಸಾಯ ಪದ್ಧತಿಯನ್ನು ಅಳವಡಿಸಿದರೆ ಮಾತ್ರ ಸಾವಯವ ಕೃಷಿ ಮಾಡಲು ಸಾಧ್ಯ. ಇಂದು ರೈತರು ಕೃಷಿಯಲ್ಲಿ ಹೆಚ್ಚು ಹೆಚ್ಚು ರಾಸಾಯನಿಕ ಗೊಬ್ಬರ ಬಳಸುವುದರಿಂದ ನಾವು ಬೆಳೆಯುವ ಆಹಾರ ವಿಷಪೂರಿತವಾಗಿವೆ. ಹೀಗಾಗಿ ನೆಲದ ಫಲವತ್ತತೆ ನಾಶವಾಗಿದೆ. ಇನ್ನಷ್ಟು ವರ್ಷಗಳು ಗತಿಸಿದರೆ ಎಲ್ಲರಿಗೂ ಆಹಾರ ಸಿಗುವುದು ಕಷ್ಟದಾಯಕವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಿ, ಎಲ್ಲ ಭೂಮಿ ಸಾವಯವ ಕೃಷಿ ಪದ್ಧತಿಗೆ ಅಳವಡಿಸಬೇಕೆಂದು ಹೇಳಿದರು.
ಜಲತಜ್ಞ ಡಾ. ಎನ್.ಕೆ. ದೇವರಾಜ ರೆಡ್ಡಿ ಅವರು “ಜಲಮೂಲಗಳ ಅಳಿವು ಉಳಿವು”ಕುರಿತು ವಿಷಯ ಮಂಡಿಸಿ, ಕೃಷಿ ಭೂಮಿಗಳು ಲೇಔಟ್‍ಗಳಾಗಿ ಪರಿವರ್ತನೆಗೊಳ್ಳುತ್ತಿದ್ದು, ಕೃಷಿ ಭೂಮಿ ಕಡಿಮೆಯಾಗುತ್ತಿವೆ, ಬೋರ್‍ವೆಲ್ ಕೊರೆಯಿಸುವ ಸಂಖ್ಯೆ ಹೆಚ್ಚಾಗುತ್ತಿದೆ. ಅಂತರ್ಜಲ ಈಗ ಕೇವಲ ಶೇ. 0.58ನಷ್ಟು ಮಾತ್ರ ಉಳಿದಿದೆ. ಅಂತರ್ಜಲವನ್ನು ಅತ್ಯಂತ ಯೋಚನೆ ಮತ್ತು ಯೋಜನಾ ಬದ್ಧವಾಗಿ ಬಳಸಿಕೊಂಡರೆ ಮಾತ್ರ ಭವಿಷ್ಯದಲ್ಲಿ ಅಂತರ್ಜಲ ಉಳಿಯಲಿದೆ. ರಾಜ್ಯದಲ್‍ಲಿ ಸುಮಾರು 36 ಸಾವಿರಕ್ಕೂ ಹೆಚ್ಚು ಕೆರೆಗಳಿದ್ದು, ಇದರಲ್ಲಿ ನೀರು ತುಂಬಿಸುವ ಕಾರ್ಯವಾದರೆ ಅಂದಾಜು 600 ಟಿಎಂಸಿ ನೀರು ಶೇಖರಿಸಿಟ್ಟು, ಅಂತರ್ಜಲ ವೃದ್ಧಿ, ಕೃಷಿ ಬಳಕೆ ಹಾಗೂ ಲವಣಾಂಶರಹಿತ ಶುದ್ಧ ಕುಡಿಯುವ ನೀರು ಪಡೆಯಬಹುದು ಎಂದರು.
ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಆಂಗ್ಲ ಶಾಲೆಗಳಂತೆ ಕನ್ನಡ ಶಾಲೆಗಳನ್ನು ರೂಪಿಸಿ: ಮೋಹನ್ ಆಳ್ವ