ಹಾವೇರಿ: ಈ ಬಾರಿಯ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ (kannada Sahitya Sammelana) ಸಂಪೂರ್ಣ ಅರ್ಥಪೂರ್ಣವಾಗಿ ನಡೆಸಲಿದ್ದೇವೆ. ಸಮ್ಮೇಳನದ ಭಾಗವಾಗಿ ನಾಡಿನ ಅಜ್ಞಾತ ಕಲಾವಿದರಿಗೆ ಭರಪೂರ ಅವಕಾಶ ಕಲ್ಪಿಸುವ ಮಹದಾಸೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಹೊಂದಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ತಿಳಿಸಿದ್ದಾರೆ.
ನಗರದ ಸೇಂಟ್ಸ್ ಆನ್ಸ್ ಶಾಲೆಯ ಸಭಾ ಭವನದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್‌ನಿಂದ ಏರ್ಪಡಿಸಿದ್ದ ‘ಸಾಮರಸ್ಯದ ಭಾವ- ಕನ್ನಡದ ಜೀವ’ ಎನ್ನುವ ಶೀರ್ಷಿಕೆಯಡಿ ಕನಕ, ಶರೀಫ್, ಸರ್ವಜ್ಞ ವಚನ ಹಾಗೂ ಹಾಡುಗಳ ಗಾಯನ ಹಾಗೂ ನೃತ್ಯ ಕಾರ್ಯಕ್ರಮಕ್ಕಾಗಿ ಧ್ವನಿ ಹಾಗೂ ನೃತ್ಯ ಪರೀಕ್ಷೆಯಲ್ಲಿ ಮಾತನಾಡಿದರು.
ನಾಡಿನ ಎಲ್ಲಾ ಭಾಗದ ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸುವ ಹಿನ್ನೆಲೆಯಲ್ಲಿ ಧ್ವನಿ ಹಾಗೂ ನೃತ್ಯ ಪರೀಕ್ಷೆಯಲ್ಲಿ ಎಲ್ಲರಿಗೂ ಮುಕ್ತ ಅವಕಾಶ ನೀಡಲಾಗಿದೆ. ನಾಡಿನ ವಿವಿಧ ಮೂಲೆ ಮೂಲೆಗಳಿಂದ ೩೦೦ಕ್ಕೂ ಹೆಚ್ಚು ಸಂಗೀತ ಕಲಾವಿದರು ಹಾಗೂ ೧೫೦ಕ್ಕೂ ಹೆಚ್ಚು ನೃತ್ಯ ಕಲಾತಂಡಗಳು, ೫೦ಕ್ಕೂ ಹೆಚ್ಚು ಜಾನಪದ ಕಲಾತಂಡಗಳು ಹಾಗೂ ೪೦ಕ್ಕೂ ಹೆಚ್ಚು ಏಕ ವ್ಯಕ್ತಿ ನೃತ್ಯ ಪಟುಗಳು ಪರೀಕ್ಷೆಯಲ್ಲಿ ಭಾಗವಹಿಸಿದ್ದರು ಎಂದು ಮಾಹಿತಿ ನೀಡಿದರು.
ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ಧ್ವನಿ ಪರೀಕ್ಷೆ ಹಾಗೂ ನೃತ್ಯ ಪರೀಕ್ಷೆಯಲ್ಲಿ ರಾಜ್ಯದ ನಾಲ್ಕು ದಿಕ್ಕಿನ ಕಲಾವಿದರು ಭಾಗವಿಸಿದ್ದು ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ. ಆಬಾಲ ವೃದ್ಧರಾದಿಯಾಗಿ ವಯಸ್ಸಿನ ಇತಿ ಮಿತಿಯಿಲ್ಲದೆ ಕಲಾವಿದರು ಭಾಗವಹಿಸಿರುವುದು ಕನ್ನಡ ನಾಡಿನಲ್ಲಿ ಕಲೆಗೆ ಇರುವ ಆಸಕ್ತಿ ಎಂತಹದ್ದು ಎಂಬುವುದನ್ನು ತೋರಿಸುತ್ತದೆ ಹೇಳಿದರು.
ಇಲ್ಲಿ ಆಯ್ಕೆಯಾಗುವವರಿಗೆ ಸೂಕ್ತ ತರಬೇತಿಯನ್ನು ನೀಡಿ ಕಾರ್ಯಕ್ರಮದಲ್ಲಿ ಅವಕಾಶ ನೀಡಲಾಗುವುದು. ಇನ್ನು ಕೆಲವು ಕಲಾವಿದರಿಗೆ ನಾವಾಡುವ ನುಡಿಯೇ ಕನ್ನಡ ನುಡಿ ಎನ್ನುವ ವಿಶೇಷ ಕಾರ್ಯಕ್ರಮದಲ್ಲಿ ಅವಕಾಶ ನೀಡಲಾಗುವುದು ಎಂದು ನಾಡೋಜ ಡಾ.ಮಹೇಶ ಜೋಶಿ ತಿಳಿಸಿದ್ದಾರೆ.
ಧ್ವನಿ ಪರೀಕ್ಷೆಯಲ್ಲಿ ನಿರ್ಣಾಯಕರಾಗಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ, ಹಿರಿಯ ಹಿನ್ನೆಲೆ ಗಾಯಕಿ ಹಾಗೂ ನೃತ್ಯ ನಿರ್ದೇಶಕಿ ಮಂಜುಳಾ ಪರಮೇಶ್ವರ, ಸಮತಾ ಕಲಾ ತಂಡದ ಅಧ್ಯಕ್ಷರಾದ ಮಧುಮತಿ ಚಿಕ್ಕಗೌಡರು ಭಾಗವಹಿಸಿದ್ದರು.
ಇದನ್ನೂ ಓದಿ | ವಿಸ್ತಾರ ಸಂಪಾದಕೀಯ | ಬೆಳಗಾವಿ ಚಳಿಗಾಲದ ಅಧಿವೇಶನ ಫಲಪ್ರದವಾಗಲಿ