Site icon Vistara News

ಖ್ಯಾತ ತುಳು, ಕನ್ನಡ ಸಾಹಿತಿ, ಹೋರಾಟಗಾರ ಉದಯ ಧರ್ಮಸ್ಥಳ ಇನ್ನಿಲ್ಲ

udaya dharmasthala

ಬೆಂಗಳೂರು: ಕನ್ನಡ ಮತ್ತು ತುಳು ಭಾಷೆಯ ವಿಚಾರದಲ್ಲಿ ಸಾಕಷ್ಟು ಹೋರಾಟಗಳನ್ನು ಸಂಘಟಿಸಿದ ಸಾಹಿತಿ, ಚಿಂತಕ ಉದಯ ಧರ್ಮಸ್ಥಳ ಅವರು ಅಲ್ಪಕಾಲದ ಅಸೌಖ್ಯದ ಬಳಿಕ ಶುಕ್ರವಾರ ಸಂಜೆ ನಿಧನರಾದರು. ಅವರಿಗೆ ೬೯ ವರ್ಷ ಅಗಿತ್ತು. ಮೂಲತಃ ಧರ್ಮಸ್ಥಳದವರಾದ ಅವರು ಹಲವು ವರ್ಷಗಳಿಂದ ಬೆಂಗಳೂರಿನಲ್ಲೇ ಇದ್ದುಕೊಂಡು ಸಾಹಿತ್ಯ, ಸಾಮಾಜಿಕ ಸೇವೆಗಳಲ್ಲಿ ನಿರತರಾಗಿದ್ದರು. ಅವರಿಗೆ ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳಿದ್ದಾರೆ.

ಮಾರತ್ತಹಳ್ಳಿಯಲ್ಲಿ ವಾಸಿಸುತ್ತಿದ್ದ ಅವರು ಸಾಯಿ ಬಾಬಾ ಅವರ ಭಕ್ತರಾಗಿದ್ದು, ಸನಾತನ ಸಾರಥಿ ಎಂಬ ಮ್ಯಾಗಜಿನ್‌ನ ಸಂಪಾದಕರಾಗಿದ್ದರು. ಸಂಘಟಕಗಾಗಿ, ವಾಗ್ಮಿಯಾಗಿ, ಧಾರ್ಮಿಕ ಚಿಂತಕರಾಗಿಯೂ ಗಮನ ಸೆಳೆದಿದ್ದರು. ಸಾಹಿತ್ಯ ಪರಿಷತ್‌ನ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದ ಅವರು ಹಲವು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ತುಳು ಸಾಹಿತ್ಯ ಪರಿಷತ್‌ನ ಸದಸ್ಯರಾಗಿ ತುಳು ಪಠ್ಯ ಪುಸ್ತಕದ ರೂವಾರಿ ಎಂದೆನಿಸಿಕೊಂಡಿದ್ದಾರೆ. ಹಲವು ಸಂಘಟನೆಗಳಿಗೆ ಮಾರ್ಗದರ್ಶಕರಾಗಿ ಅವರು ಕೆಲಸ ಮಾಡುತ್ತಿದ್ದರು. ಧಾರ್ಮಿಕ ವಿಚಾರ, ತುಳು ಹೋರಾಟಗಳು ಬಂದಾಗಲೆಲ್ಲ ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿದ್ದ ಅವರನ್ನು ಆರು ತಿಂಗಳ ಹಿಂದೆ ರವೀಂದ್ರ ಕಲಾಕ್ಷೇತ್ರದಲ್ಲಿ ಸನ್ಮಾನಿಸಲಾಗಿತ್ತು. ಮೃತರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಬೆಂಗಳೂರಿನಲ್ಲಿ ಶನಿವಾರ ಬೆಳಗ್ಗೆ ೧೧ ಗಂಟೆ ಹೊತ್ತಿಗೆ ನಡೆಯಲಿದೆ.

Exit mobile version