| ಪಾಂಡುರಂಗ ಜಂತ್ಲಿ, ವಿಜಯನಗರ
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ (Kannada University) ಮಲ್ಲಿಕಾ ಘಂಟಿ ಅವರು ಕುಲಪತಿಯಾಗಿದ್ದಾಗ ಕೋಟ್ಯಂತರ ರೂಪಾಯಿ ಅಕ್ರಮ ನಡೆದಿರುವ ಬಗ್ಗೆ ಲೋಕಾಯುಕ್ತ ತನಿಖೆಯಲ್ಲಿ ಸಾಬೀತಾಗಿದೆ. ಆರೋಪ ಕೇಳಿ ಬಂದ ಬಳಿಕ ತನಿಖೆ ನಡೆದು ಎಫ್‌ಐಆರ್ ದಾಖಲಿಸಲು ಆರು ತಿಂಗಳ ಹಿಂದೆಯೇ ನೋಟಿಸ್ ಜಾರಿಯಾಗಿದ್ದರೂ ಈಗಿನ ಕುಲಪತಿಗಳು ಯಾವುದೇ ಕಾನೂನು ಕ್ರಮ ಜರುಗಿಸದೇ ಹಿಂದೇಟು ಹಾಕುತ್ತಿದ್ದಾರಾ ಎಂಬ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ಮೂಡಿವೆ.
ಮಲ್ಲಿಕಾ ಘಂಟಿ ಕುಲಪತಿಗಳಾಗಿದ್ದ ಸಮಯದಲ್ಲಿ ೨೦೧೫- ೧೬, ೨೦೧೬- ೧೭ನೇ ಸಾಲಿನಲ್ಲಿ ಕೈಗೊಂಡ ಕಾಮಗಾರಿ ಮತ್ತು ಖರೀದಿ ಪ್ರಕ್ರಿಯೆಯಲ್ಲಿ ಕೆಟಿಪಿಪಿ ಕಾಯ್ದೆಯನ್ನು ಪಾಲಿಸಿಲ್ಲ. ಕಾಮಗಾರಿಗಳಿಗೆ ಟೆಂಡರ್ ಕರೆದಿಲ್ಲ. ಜಾಹೀರಾತು, ಪ್ರಕಟಣೆಯನ್ನೂ ಹೊರಡಿಸಿಲ್ಲ. ಕೆಟಿಪಿಪಿ ಕಾಯ್ದೆಯನ್ನು ಉಲ್ಲಂಘಿಸಿ ಕೋಟಿ ಕೋಟಿ ಬಾಚಿದ್ದಾರೆ ಎಂದು ಭ್ರಷ್ಟಾಚಾರದ ಗಂಭೀರ ಆರೋಪ ಕೇಳಿ ಬಂದಿತ್ತು.
ಈ ಕುರಿತಂತೆ ಸೋಮನಾಥ್ ಎಚ್.ಎಂ. ಎಂಬುವವರು ಅಂದಿನ ಕುಲಪತಿಯಾಗಿದ್ದ ಡಾ.ಮಲ್ಲಿಕಾ ಘಂಟಿ, ಕುಲಸಚಿವ ಡಾ.ಡಿ.ಪಾಂಡುರಂಗ ಬಾಬು, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ, ಉನ್ನತ ಶಿಕ್ಷಣ ಇಲಾಖೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಸ್.ಎ.ಕೋರಿ ಹಾಗೂ ಮತ್ತಿತರರ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದರು. ಲೋಕಾಯುಕ್ತ ತನಿಖಾ ವರದಿಯಲ್ಲಿ ಸುಮಾರು 50 ಕೋಟಿಗೂ ಅಧಿಕ ಹಣ ಅಕ್ರಮ ಆಗಿದೆ ಎಂದು ಸಾಬೀತಾದರೂ ಏಕೆ ದೂರು ದಾಖಲಾಗಿಲ್ಲ ಎಂದು ದೂರುದಾರ ಸೋಮನಾಥ್ ಎಚ್.ಎಂ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ | Border Dispute | ಬೆಳಗಾವಿಗೆ ಕಳ್ಳ ಹೆಜ್ಜೆ ಇಟ್ಟ ಶರದ್ ಪವಾರ್ ಸಹೋದರನ ಪುತ್ರ; ವಿವಿಧ ಕಡೆ ಸಂಚಾರ, ಕನ್ನಡಿಗರ ಆಕ್ರೋಶ
ಮಲ್ಲಿಕಾ ಘಂಟಿ ಅವಧಿಯಲ್ಲಿ ನಡೆದಿದೆ ಎನ್ನಲಾದ 50 ಕೋಟಿಗೂ ಅಧಿಕ ಅವ್ಯವ್ಯಹಾರ ಲೋಕಾಯುಕ್ತ ತನಿಖೆಯಲ್ಲಿ ಅಕ್ರಮ ದೃಢ ಆಗಿದೆ. ಸೋಮನಾಥ ಅವರ ದೂರು ಆಧರಿಸಿ ತನಿಖೆ ನಡೆಸಿರುವ ಲೋಕಾಯುಕ್ತರ ತನಿಖಾ ತಂಡ, ೨೦೧೫- ೧೬, ೨೦೧೬- ೧೭ನೇ ಸಾಲಿನಲ್ಲಿ ಆರ್ಥಿಕ ದುರುಪಯೋಗ ಆಗಿರುವುದನ್ನು ಪತ್ತೆ ಮಾಡಿದೆ. ಸರ್ಕಾರ ಬಿಡುಗಡೆ ಮಾಡಿದ್ದ ೭೭.೮೪ ಕೋಟಿ ರೂ. ಗಳನ್ನು ಟೆಂಡರ್ ಕರೆಯದೇ ನಿರ್ವಹಿಸಿದೆ. ಇ- ಟೆಂಡರ್ ಕರೆಯದೇ ೫೦.೮೬ ಕೋಟಿ ರೂ. ಮೊತ್ತದ ಕಾಮಗಾರಿಯನ್ನು ಪೀಸ್ ವರ್ಕ್ಗಳನ್ನಾಗಿ ನಿರ್ವಹಿಸಿದ್ದು, ಆರ್ಥಿಕ ಅವ್ಯವಹಾರ ಆಗಿದೆ ಎಂಬುದನ್ನು ಖಚಿತ ಪಡಿಸಿದ್ದಾರೆ. ಈ ಕುರಿತಂತೆ ಕುಲಪತಿ ಡಾ.ಮಲ್ಲಿಕಾ ಘಂಟಿ, ಕುಲಸಚಿವ ಡಾ.ಡಿ.ಪಾಂಡುರಂಗಬಾಬು ಮತ್ತು ಉನ್ನತ ಶಿಕ್ಷಣ ಇಲಾಖೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಸ್.ಎ.ಕೋರಿ ಅವರು ಯಾವುದೇ ಅಕ್ರಮಗಳು ನಡೆದಿಲ್ಲವೆಂದು ಸಮಜಾಯಿಷಿ ನೀಡಿದ್ದರಾದರೂ, ಅದನ್ನು ತನಿಖಾ ತಂಡ ತಿರಸ್ಕರಿಸಿದೆ.
ಈ ಬಗ್ಗೆ ಹಂಪಿ ಕನ್ನಡ ವಿವಿ ಕುಲಪತಿ ಪ್ರೊ. ಸ.ಚಿ. ರಮೇಶ್ ಪ್ರತಿಕ್ರಿಯಿಸಿ, ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆದಿರುವ ಅಕ್ರಮಗಳಿಗೆ ಸಂಬಂಧಿಸಿದಂತೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಅದಕ್ಕೆ ಪರ್ಯಾಯವಾಗಿ ಲೋಕಾಯುಕ್ತರಿಂದ ಕ್ರಮ ಜರುಗಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಿಸಿ ೧೩-೮-೨೦೨೧ರ ಆಗಸ್ಟ್ ೧೩ರಂದು ಲೋಕಾಯುಕ್ತ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಿದೆ. ಜತೆಗೆ ಪ್ರಕರಣವನ್ನು ಕಾನೂನು ತಜ್ಞರಿಗೆ ಒಪ್ಪಿಸಲಾಗಿದೆ. ಸರ್ಕಾರದಿಂದ ಆದೇಶ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ನೋಟಿಸ್ ಬಂದು ೬ ತಿಂಗಳು ಕಳೆದರೂ ಕ್ರಮವಿಲ್ಲ
ಈಗಾಗಲೇ ಸರ್ಕಾರಕ್ಕೆ ಲೋಕಾಯುಕ್ತರ ತನಿಖಾ ವರದಿ ಸಲ್ಲಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ, ಆ ಬಗ್ಗೆ ವರದಿ ನೀಡುವಂತೆ ೨೦೨೧ರ ಡಿ.೨೦ರಂದು ಲೋಕಾಯುಕ್ತರ ಹೆಚ್ಚುವರಿ ರಿಜಿಸ್ಟ್ರಾರ್, ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಜ್ಞಾಪನಾ ಪತ್ರ ಹೊರಡಿಸಿದ್ದರು. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ೨೦೧೫-೧೬, ೨೦೧೬-೧೭ನೇ ಸಾಲಿನಲ್ಲಿ ಆರ್ಥಿಕ ಅವ್ಯವಹಾರಕ್ಕೆ ಸಂಬಂಧಪಟ್ಟ ವರದಿಗಳನ್ನು ಪರಿಶೀಲಿಸಲಾಗಿದೆ. ಅಂದಿನ ಕುಲಪತಿಗಳ ವಿರುದ್ಧ ಮಾಡಿರುವ ಆರೋಪ ಸತ್ಯಾಂಶದಿಂದ ಕೂಡಿದೆ. ಈ ಹಿನ್ನೆಲೆಯಲ್ಲಿ ಅಂದಿನ ಕುಲಪತಿ ಮತ್ತು ಇತರ ನಿವೃತ್ತ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ದೂರು ದಾಖಲಿಸುವಂತೆ ನಿರ್ದೇಶಿಸಿ ೨೦೨೨ರ ಜುಲೈ ೧೫ರಂದು ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರಿಗೆ ಪತ್ರ ಬರೆದಿದ್ದರು. ಆದರೆ, ಈ ಪತ್ರ ತಲುಪಿ ೬ ತಿಂಗಳು ಕಳೆದರೂ, ಯಾವುದೇ ಕ್ರಮ ಕೈಗೊಳ್ಳದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಇದನ್ನೂ ಓದಿ | Dept of higher education | ಸಿಬ್ಬಂದಿ ಸಮಸ್ಯೆ ಪರಿಹರಿಸಲು ಸಮಗ್ರ ಪೋರ್ಟಲ್ ಸಿದ್ಧ: ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ