ನವ ದೆಹಲಿ: ನಾಗರಿಕ ದಂಗೆ ಎದುರಿಸುತ್ತಿರುವ ಸುಡಾನ್‌ನಲ್ಲಿ ಸಂಕಷ್ಟ ಎದುರಿಸುತ್ತಿರುವ ಕನ್ನಡಿಗರ ಪರಿಸ್ಥಿತಿಗೆ ಸಂಬಂಧಿಸಿ (Kannadigas in Sudan ) ರಾಜಕೀಯ ಮಾಡುವುದು ಬೇಡ ಎಂದು ವಿದೇಶಾಂಗ ಸಚಿವ ಜೈ ಶಂಕರ್ ಅವರು ಟ್ವೀಟ್ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.
ಕರ್ನಾಟಕದ ಹಕ್ಕಿ ಪಿಕ್ಕಿ ಸಮುದಾಯದ 31 ಮಂದಿ ಜನತೆ ಸುಡಾನ್‌ನಲ್ಲಿ ಅತಂತ್ರರಾಗಿದ್ದಾರೆ. ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಅವರ ಸುರಕ್ಷಿತ ಮರಳುವಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.
ಸಿದ್ದರಾಮಯ್ಯನವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಜೈ ಶಂಕರ್ ಅವರು, ನಿಮ್ಮ ಟ್ವೀಟ್ ನೋಡಿ ನನಗೆ ಗಾಬರಿಯಾಯಿತು. ಅಲ್ಲಿ ಜನತೆ ಸಂಕಷ್ಟದಲ್ಲಿ ಇದ್ದಾರೆ. ಅವರ ಬಗ್ಗೆ ರಾಜಕೀಯ ಮಾಡಬೇಡಿ. ನಾಗರಿಕ ದಂಗೆ ಏಪ್ರಿಲ್ 14ರಂದು ಶುರುವಾದಾಗಿನಿಂದ ಖಾರ್‌ಟೋಮ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸುಡಾನ್‌ನಲ್ಲಿನ ಬಹುತೇಕ ಭಾರತೀಯರ ಜತೆಗೆ ನಿಕಟ ಸಂಪರ್ಕ ಇಟ್ಟುಕೊಂಡಿದೆ. ಅವರ ಸುರಕ್ಷತೆಗೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.
ಸುಡಾನ್‌ನಲ್ಲಿ ಸಂಕಷ್ಟದಲ್ಲಿರುವವರ ಸ್ಥಳ ವಿವರಗಳನ್ನು ಭದ್ರತೆಯ ದೃಷ್ಟಿಯಿಂದ ಬಹಿರಂಗಪಡಿಸಲು ಸಾಧ್ಯವಾಗುತ್ತಿಲ್ಲ. ತೀವ್ರ ಕಾಳಗ ನಡೆಯುತ್ತಿರುವುದರಿಂದ ಅವರ ಚಲನವಲನಗಳಿಗೆ ನಿರ್ಬಂಧ ಇದೆ ಎಂದು ಸರಣಿ ಟ್ವೀಟ್ ಮೂಲಕ ಜೈಶಂಕರ್ ತಿಳಿಸಿದ್ದಾರೆ.