ದಾವಣಗೆರೆ: ದೇಶದಲ್ಲಿ ಭಾರಿ ಸದ್ದು ಮಾಡುತ್ತಿರುವ ಕಾಂತಾರ ಸಿನಿಮಾ ಎಲ್ಲ ಜನವರ್ಗವನ್ನೂ ಆಕರ್ಷಿಸುತ್ತಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ನವೆಂಬರ್ ೧೧ರಂದು ಬೆಂಗಳೂರಿನಲ್ಲಿ ನಿರ್ದೇಶಕ ರಿಷಬ್ ಶೆಟ್ಟಿ ಅವರ ಜತೆ ಸಿನಿಮಾ ವೀಕ್ಷಣೆ ಮಾಡಲಿದ್ದಾರೆ ಎಂಬ ಸುದ್ದಿಯೂ ಹರಡಿದೆ. ಆದರೆ, ಅದಿನ್ನೂ ದೃಢಪಟ್ಟಿಲ್ಲ.
ಈ ನಡುವೆ, ಜನ ಗುಂಪಾಗಿ, ಕುಟುಂಬ ಸಮೇತರಾಗಿ ಸಿನಿಮಾ ನೋಡುತ್ತಿರುವುದು ಕಂಡುಬಂದಿದೆ. ಈ ಆಕರ್ಷಣೆ ಪೊಲೀಸರನ್ನೂ ಬಿಟ್ಟಿಲ್ಲ ಎಂದರೆ ನೀವು ನಂಬಲೇಬೇಕು. ಯಾಕೆಂದರೆ ದಾವಣಗೆರೆ ನಗರದ ಎಲ್ಲ ಪೊಲೀಸರು ಕುಟುಂಬ ಸಮೇತ ಹೋಗಿ ಕಾಂತಾರ ಚಿತ್ರವನ್ನು ವೀಕ್ಷಿಸಿದ್ದಾರೆ.
ಇಲ್ಲಿನ ಗೀತಾಂಜಲಿ ಚಿತ್ರಮಂದಿರದಲ್ಲಿ ಇಡೀ ಥಿಯೇಟರ್ನ ಒಂದು ಶೋವನ್ನು ಬುಕ್ ಮಾಡಿಕೊಂಡು ಜತೆಯಾಗಿ ಚಿತ್ರಮಂದಿರಕ್ಕೆ ಬಂದಿದ್ದಾರೆ. ವಿಶೇಷವೆಂದರೆ ಜಿಲ್ಲಾ ಎಸ್ಪಿ ಸಿ.ಬಿ ರಿಷ್ಯಂತ್ ಅವರೇ ಕುಟುಂಬ ಸಮೇತ ಚಿತ್ರ ನೋಡಲು ಬಂದಿದ್ದರು. ಎಎಸ್ಪಿ, ಡಿವೈಎಸ್ಪಿ, ಸರ್ಕಲ್ ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್ ಸೇರಿ ಎಲ್ಲರೂ ಬಂದಿದ್ದರು.
ಒತ್ತಡದ ಕೆಲಸಗಳ ನಡುವೆಯೂ ಬಿಡುವು ಮಾಡಿಕೊಂಡು ಜತೆಯಾಗಿ ಸಿನಿಮಾ ನೋಡಿದ ಪೊಲೀಸರು ತುಂಬ ನಿರುಮ್ಮಳರಾಗಿದ್ದರು. ಸಿನಿಮಾದ ನೆಪದಲ್ಲಿ ಕುಟುಂಬಗಳ ಪರಸ್ಪರ ಪರಿಚಯವೂ ಆದ ಹಾಗಾಗಿದೆ.
ಇದನ್ನೂ ಓದಿ | Kantara Movie | ಮಂಗಳೂರಿನಲ್ಲಿ ಕುಟುಂಬ ಸಮೇತ ಕಾಂತಾರ ಸಿನಿಮಾ ವೀಕ್ಷಿಸಿದ ಡಾ.ಡಿ.ವೀರೇಂದ್ರ ಹೆಗ್ಗಡೆ