Site icon Vistara News

SIIMA 2023: ʼಸೈಮಾʼದಲ್ಲೂ ಕಾಂತಾರ ಕಲರವ; ಅತಿ ಹೆಚ್ಚು ಪ್ರಶಸ್ತಿ ಬಾಚಿದ ದಾಖಲೆ!

Actor Rishab Shetty

ಬೆಂಗಳೂರು: ಕಳೆದ ವರ್ಷ ಬಿಡುಗಡೆಗೊಂಡ ʼಕಾಂತಾರʼ ಸಿನಿಮಾದ ಅಲೆ ಇನ್ನೂ ಕಡಿಮೆಯಾಗಿಲ್ಲ. ದುಬೈನಲ್ಲಿ ನಡೆದ ಸೈಮಾ ಅವಾರ್ಡ್ಸ್ 2023 (SIIMA 2023) ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳಲ್ಲಿ ಕಾಂತಾರ ಸಿನಿಮಾ 10 ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

ಹೊಂಬಾಳೆ ಫಿಲ್ಮ್ಸ್‌ ಲಾಂಛನದಲ್ಲಿ ವಿಜಯ್ ಕಿರಗಂದೂರ್ ಅವರು ನಿರ್ಮಿಸಿ, ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ಸಿನಿಮಾ ʼಕಾಂತಾರʼ, ಕಳೆದ ವರ್ಷ ಬಿಡುಗಡೆಯಾಗಿ ದೇಶದೆಲ್ಲೆಡೆ ಉತ್ತಮ ಪ್ರಶಂಸೆ ಗಳಿಸಿತ್ತು. ಪ್ರಸ್ತುತ ಸೈಮಾ ಅವಾರ್ಡ್ಸ್‌ನಲ್ಲಿ ಅತ್ಯುತ್ತಮ ನಟನೆ, ನಿರ್ದೇಶನ ಹಾಗೂ ಪಾಥ್ ಬ್ರೇಕಿಂಗ್ ಸ್ಟೋರಿಗೆ ಸ್ಪೆಷಲ್ ಅಪ್ರಿಸಿಯೇಷನ್ ಅವಾರ್ಡ್ ಸೇರಿ ಒಟ್ಟು 3 ಅವಾರ್ಡ್‌ಗಳು ರಿಷಬ್ ಶೆಟ್ಟಿಯವರಿಗೆ ದೊರಕಿದೆ.

ಇನ್ನು ವಿಶೇಷವಾಗಿ ʼಕಾಂತಾರʼ ಚಿತ್ರಕ್ಕೆ ಬೆನ್ನೆಲುಬಾಗಿದ್ದಂತಹ ದೈವ ನರ್ತಕರಾದ ಮುಖೇಶ್ ಲಕ್ಷ್ಮಣ್ ಅವರು ದುಬೈನಲ್ಲಿ ಸೈಮಾ ಪ್ರಶಸ್ತಿ ಸ್ವೀಕರಿಸಿದ್ದಾರೆ. ಎಲೆಮರೆಕಾಯಿಯಂತಿದ್ದ ದೈವ ನರ್ತಕರು ಇಂದು ಪ್ರತಿಷ್ಠಿತ ʼಸೈಮಾʼ ಪ್ರಶಸ್ತಿ ಪಡೆದಿದ್ದಾರೆ. ಇಂತಹ ಜಗಮೆಚ್ಚಿದ ಚಿತ್ರದ ನಿರ್ದೇಶಕರಾದ ರಿಷಬ್‌ ಶೆಟ್ಟಿ ಅವರಿಗೆ ಅಭಿನಂದನೆ ಸಲ್ಲಬೇಕು.

ಇದನ್ನೂ ಓದಿ | SIIMA 2023: ʻನನ್ನದು ಕುಂದಾಪುರ, ನಿಮ್ಮ ತಾಯಿ ಊರುʼ; ಸೈಮಾ ವೇಳೆ ಕನ್ನಡದಲ್ಲಿ ಮಾತನಾಡಿದ ರಿಷಬ್‌-ಜ್ಯೂ.ಎನ್‌ಟಿಆರ್‌!

ಉಳಿದಂತೆ ಅತ್ಯುತ್ತಮ ನಟಿ, ಖಳನಟ, ಹಾಸ್ಯನಟ, ಸಂಗೀತ ನಿರ್ದೇಶಕ, ಗಾಯಕ, ಸಾಹಿತಿ ಸೇರಿ ಒಟ್ಟು 10 ಅವಾರ್ಡ್ಸ್ ಕಾಂತಾರ ಸಿನಿಮಾ ಗೆದ್ದು ಸದ್ದು ಮಾಡಿದೆ. ಇದುವರೆಗೆ ಸೈಮಾ ಅವಾರ್ಡ್ಸ್‌ನಲ್ಲಿ ಅತಿ ಹೆಚ್ಚು ಅವಾರ್ಡ್‌ಗಳನ್ನು ಪಡೆದ ಚಿತ್ರ ಎಂಬ ಹೆಗ್ಗಳಿಕೆಗೆ ಕಾಂತಾರ ಪಾತ್ರವಾಗಿದೆ.

ಒಟ್ಟಾರೆ ಕನ್ನಡ ಸಿನಿಮಾ ಈ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ ಎಂಬುವುದು ಹೆಮ್ಮೆಯ ವಿಷಯ. ಇದೀಗ ʼಕಾಂತಾರ 2ʼ ಚಿತ್ರ ಬರವಣಿಗೆ ಹಂತದಲ್ಲಿದ್ದು, ಪ್ರೇಕ್ಷಕರಲ್ಲಿ ಮತ್ತಷ್ಟು ನಿರೀಕ್ಷೆ ಹೆಚ್ಚು ಮಾಡಿದೆ.

ಕಾಂತಾರ ಪಡೆದ ಪ್ರಶಸ್ತಿಗಳು

1. ಅತ್ಯುತ್ತಮ ನಿರ್ದೇಶಕ-ರಿಷಬ್ ಶೆಟ್ಟಿ
2.ಅತ್ಯುತ್ತಮ ನಟ (ಕ್ರಿಟಿಕ್ಸ್)- ರಿಷಬ್ ಶೆಟ್ಟಿ
3.ವಿಶೇಷ ಮೆಚ್ಚುಗೆ ಪ್ರಶಸ್ತಿ (ಪಾಥ್ ಬ್ರೇಕಿಂಗ್ ಸ್ಟೋರಿ‌)-ರಿಷಬ್ ಶೆಟ್ಟಿ
4.ಅತ್ಯುತ್ತಮ ನಟಿ (ಕ್ರಿಟಿಕ್ಸ್)-ಸಪ್ತಮಿ ಗೌಡ
5.ಅತ್ಯುತ್ತಮ ಖಳನಟ- ಅಚ್ಯುತ್ ಕುಮಾರ್
6.ಅತ್ಯುತ್ತಮ ಸಂಗೀತ ನಿರ್ದೇಶಕ- ಅಜನೀಶ್ ಲೋಕನಾಥ್
7.ಅತ್ಯುತ್ತಮ ಗಾಯಕ-ವಿಜಯ್ ಪ್ರಕಾಶ್‌
8.ಅತ್ಯುತ್ತಮ ಗೀತೆ ರಚನೆಕಾರ-ಪ್ರಮೋದ್‌ ಮರವಂತೆ
9.ಅತ್ಯುತ್ತಮ ಹಾಸ್ಯ ನಟ- ಪ್ರಕಾಶ್‌ ತೂಮಿನಾಡು
10.ವಿಶೇಷ ಮೆಚ್ಚುಗೆ ಪ್ರಶಸ್ತಿ- ಮುಖೇಶ್ ಲಕ್ಷ್ಮಣ್

ಇದನ್ನೂ ಓದಿ | SIIMA 2023: ಅತ್ಯುತ್ತಮ ನಟ ಯಶ್‌; ಅವಾರ್ಡ್‌ ಗೆದ್ದ ರಿಷಬ್, ರಕ್ಷಿತ್, ಸಪ್ತಮಿ ಗೌಡ; ಇಲ್ಲಿದೆ ಸಂಪೂರ್ಣ ಪಟ್ಟಿ!

ʻವಿಕ್ರಾಂತ್ ರೋಣʼ ಮಡಿಲಿಗೆ ಎರಡು ಸೈಮಾ ಪ್ರಶಸ್ತಿ!

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ನಟನೆಯ ʻವಿಕ್ರಾಂತ್ ರೋಣʼ ಸಿನಿಮಾಗೆ 2 ವಿಭಾಗದಲ್ಲಿ ಸೈಮಾ ಪ್ರಶಸ್ತಿ ಒಲಿದು ಬಂದಿದೆ. ಅತ್ಯುತ್ತಮ ಉದಯೋನ್ಮುಖ ನಟಿ ಹಾಗೂ ಅತ್ಯುತ್ತಮ ಗಾಯಕಿ ಪ್ರಶಸ್ತಿ ವಿಕ್ರಾಂತ್ ರೋಣ ಸಿನಿಮಾಗೆ ಬಂದಿದೆ. ಅಜನೀಶ್ ಲೋಕನಾಥ್ ಟ್ಯೂನ್ ಹಾಕಿದ್ದ ಅನೂಪ್ ಭಂಡಾರಿ ಪದ ಪೊಣಿಸಿದ್ದ ರಾರಾ ರಕ್ಕಮ್ಮ ಹಾಡು ಸೂಪರ್ ಡೂಪರ್ ಹಿಟ್ ಆಗಿತ್ತು. ಈ ಜಬರ್ದಸ್ತ್ ಹಾಡಿನಲ್ಲಿ ಸುದೀಪ್ ಜತೆ ಬಾಲಿವುಡ್ ಬ್ಯೂಟಿ ಜಾಕ್ವೆಲಿನ್ ಫರ್ನಾಂಡಿಸ್ ಹೆಜ್ಜೆ ಹಾಕಿದ್ದರು ಸುನಿಧಿ ಚೌಹಾಣ್ ಅದ್ಭುತವಾಗಿ ರಾರಾ ರಕ್ಕಮ್ಮ ಹಾಡು ಹಾಡಿದ್ದರು. ದುಬಾರಿ ಬಜೆಟ್‌ನಲ್ಲಿ ತಯಾರಾಗಿದ್ದ ವಿಕ್ರಾಂತ್ ರೋಣ ಸಿನಿಮಾಗೆ ಅನೂಪ್ ಭಂಡಾರಿ ನಿರ್ದೇಶನ ಮಾಡಿದ್ದರು. ನೀತಾ ಆಶೋಕ ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಚೊಚ್ಚಲ ಚಿತ್ರದಲ್ಲಿ ಅದ್ಭುತವಾಗಿ ನಟಿಸಿದ್ದ ನೀತಾ ಅವರು ಸೈಮಾ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ.

ಈ ಬಾರಿ SIIMA (ಸೈಮಾ ಅವಾರ್ಡ್‌) 11ನೇ ಆವೃತ್ತಿಯು ದುಬೈನಲ್ಲಿ ಸೆಪ್ಟೆಂಬರ್ 15 ರಂದು ವರ್ಲ್ಡ್ ಟ್ರೇಡ್ ಸೆಂಟರ್‌ನಲ್ಲಿ ನಡೆದಿದೆ . ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಚಲನಚಿತ್ರೋದ್ಯಮದ ಪ್ರಮುಖ ತಾರೆಯರು ಈ ಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾಗಿದ್ದರು. ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ದಿಗಂತ್, ಜ್ಯೂ.ಎನ್‌ಟಿಆರ್, ಶ್ರೀಲೀಲಾ ಸೇರಿದಂತೆ ಕನ್ನಡ, ತೆಲುಗಿನ ತಾರೆಯರು ಸೈಮಾ ವೇದಿಕೆಯಲ್ಲಿ ಕಾಣಿಸಿಕೊಂಡರು.ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಅಚ್ಯುತ್‌ ಕುಮಾರ್, ಸಪ್ತಮಿ ಗೌಡ ಸೇರಿದಂತೆ ಹಲವರು ದುಬೈನಲ್ಲಿ ನಡೆದ ಸೈಮಾ 2023 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿ ಆಗಿ ಪ್ರಶಸ್ತಿ ಸ್ವೀಕರಿಸಿದರು. ಯಶ್ ಸೇರಿದಂತೆ ಹಲವರು ಭಾಗಿ ಆಗಲು ಸಾಧ್ಯವಾಗಲಿಲ್ಲ.

Exit mobile version