ಉಡುಪಿ: ಕಾಂತಾರ ಸಿನಿಮಾದ (Kantara Movie) ಪ್ರಮುಖ ಭಾಗವಾಗಿದ್ದ ಭೂತಕೋಲ ಆಚರಣೆಯು ಹಿಂದು ಸಂಸ್ಕೃತಿ ಭಾಗವಲ್ಲ ಎಂದು ಹೇಳಿದ್ದ ನಟ ಚೇತನ್‌ಗೆ ಸಂಕಷ್ಟ ಎದುರಾಗಿದ್ದು, ನಟನ ವಿರುದ್ಧ ಉಡುಪಿಯ ಕಾರ್ಕಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಿಂದು ಜಾಗರಣಾ ವೇದಿಕೆಯವರು ದೂರು ದಾಖಲಾಗಿದ್ದು, ಕ್ರಮಕ್ಕೆ ಒತ್ತಾಯಿಸಲಾಗಿದೆ.
ಕಾಂತಾರ ಚಿತ್ರದಲ್ಲಿ ಬಳಸಲಾಗಿರುವ ದೈವಾರಾಧನೆ ವಿಚಾರವಾಗಿ ಹೇಳಿಕೆ ನೀಡಿದ್ದ ಚೇತನ್, ಭೂತಕೋಲವು ಹಿಂದು ಸಂಸ್ಕತಿಯ ಭಾಗವಲ್ಲ. ಪಂಜುರ್ಲಿ, ಪಿಲಿಚಾಮುಂಡಿ ಮುಂತಾದ ದೈವಗಳು ಮೂಲವಾಸಿ ಸಂಸ್ಕೃತಿಗೆ ಸೇರಿವೆ. ಇವು ಹಿಂದು ಸಂಪ್ರದಾಯ ಅನ್ನುವುದು ತಪ್ಪು. ಏಕೆಂದರೆ ವೇದ, ಶಾಸ್ತ್ರ, ಉಪನಿಷತ್ತುಗಳೆಲ್ಲವೂ 3 ಸಾವಿರ ವರ್ಷಗಳ ಈಚೆಗಿನ ವೈದಿಕ ಪರಂಪರೆಯವು ಎಂದು ಹೇಳಿದ್ದರು. ಇದಕ್ಕೆ ವ್ಯಾಪಕ ಟೀಕೆಗಳು ಕೇಳಿಬಂದಿದ್ದವು. ಖುದ್ದು ಕೆಲವು ಸಿನಿಮಾ ನಟರೂ ಈ ಹೇಳಿಕೆ ಬಗ್ಗೆ ಅಪಸ್ವರ ಎತ್ತಿದ್ದಾರೆ. ಈಗ ಇದರ ಬೆನ್ನಲ್ಲೇ ಕಾರ್ಕಳದಲ್ಲಿ ಚೇತನ್ ವಿರುದ್ಧ ದೂರು ದಾಖಲಾಗಿದೆ.
ದೂರಿನಲ್ಲೇನಿದೆ?
ಕರಾವಳಿ ಭಾಗದಲ್ಲಿ ಬಹಳ ಹಿಂದಿನಿಂದಲೂ ಹಿಂದು ಧರ್ಮ ಹಾಗೂ ದೈವದ ಬಗ್ಗೆ ಅಪಾರ ನಂಬಿಕೆ ಇಟ್ಟುಕೊಂಡು ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ, ನಟ ಚೇತನ್ ಈ ಭಾಗದ ಧಾರ್ಮಿಕ ಭಾವನೆಯಾದ ಭೂತಕೋಲ ಹಾಗೂ ದೈವದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಇದರಿಂದ ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ಹೀಗಾಗಿ ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಮತ್ತೊಮ್ಮೆ ಇಂಥ ಹೇಳಿಕೆಯನ್ನು ನೀಡಬಾರದು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅವನ ಯಾವನೋ? ಮುಖವನ್ನೇ ನೋಡಿಲ್ಲ- ಈಶ್ವರಪ್ಪ
“ಅವನು ಯಾವನೋ, ಅವನ ಮುಖವನ್ನೇ ನಾನು ನೋಡಿಲ್ಲ. ಅವನ ಯಾವ ಸಿನಿಮಾವನ್ನೂ ಈವರೆಗೆ ನಾನು ನೋಡಿಲ್ಲ. ಹಿಂದು ಧರ್ಮದ ಬಗ್ಗೆ ಮಾತನಾಡಲು ಅವನು ಯಾವನು?” ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ | ಕಾಂತಾರ ಎಫೆಕ್ಟ್ | ಭೂತಾರಾಧನೆ ಮಾಡುವ ದೈವನರ್ತಕರಿಗೆ ಸರ್ಕಾರದಿಂದ ಮಾಸಾಶನ