Site icon Vistara News

Kantara Movie | ನಟ ಚೇತನ್‌ ಮೇಲೆ ಮತ್ತೊಂದು ಕೇಸ್‌; ಭೂತಕೋಲ ಹಿಂದು ಸಂಸ್ಕೃತಿಯಲ್ಲವೆಂದಿದ್ದಕ್ಕೆ ವಿರೋಧ

kantara case 3

ಮಡಿಕೇರಿ: ಕಾಂತಾರ ಸಿನಿಮಾದ (Kantara Movie) ಪ್ರಮುಖ ಭಾಗವಾಗಿದ್ದ ಭೂತಕೋಲ ಆಚರಣೆಯು ಹಿಂದು ಸಂಸ್ಕೃತಿ ಭಾಗವಲ್ಲ ಎಂದು ಹೇಳಿದ್ದ ನಟ ಚೇತನ್‌ ಮೇಲೆ ಈಗ ಮತ್ತೊಂದು ಕೇಸ್‌ ಬಿದ್ದಿದೆ. ಮಡಿಕೇರಿಯಲ್ಲಿ ಕೊಡಗು ಯುವ ಸೇನೆ ದೂರು ದಾಖಲಿಸಿದೆ.

ದೈವಾರಾಧನೆ ಹಿಂದು ಸಂಪ್ರದಾಯವಲ್ಲವೆಂದು ಹೇಳಿಕೆ ನೀಡುವ ಮೂಲಕ ನಟ ಚೇತನ್ ಲಕ್ಷಾಂತರ ಭಕ್ತರ ಮನಸ್ಸಿಗೆ ನೋವುಂಟು ಮಾಡಿದ್ದಾರೆ. ಅಲ್ಲದೆ, ಸಮಾಜದಲ್ಲಿ ಗೊಂದಲ ಸೃಷ್ಟಿಸಿ, ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಯುವಸೇನೆಯ ಜಿಲ್ಲಾ ಉಪಾಧ್ಯಕ್ಷ ನಡುಮುಟ್ಲು ಪ್ರವೀಣ್ ನೇತೃತ್ವದಲ್ಲಿ ಸಂಘದ ಕಾರ್ಯಕರ್ತರು, ಡಿವೈಎಸ್‌ಪಿಗೆ ದೂರು ಸಲ್ಲಿಸಿ ಚೇತನ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ನಿರ್ದೇಶಕ ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದಿರುವ ಕಾಂತಾರ ಸಿನಿಮಾದಲ್ಲಿ ದೈವಾರಾಧನೆಯ ಕಥೆಯನ್ನು ಉತ್ತಮವಾಗಿ ನಿರೂಪಣೆ ಮಾಡಲಾಗಿದೆ. ಹಾದಿ ತಪ್ಪುತ್ತಿರುವ ಯುವ ಜನಾಂಗಕ್ಕೆ ಮಾರ್ಗದರ್ಶನ ಮಾಡುವಲ್ಲಿ ಈ ಸಿನಿಮಾ ಯಶಸ್ವಿಯಾಗಿದೆ. ಅಲ್ಲದೆ, ದೈವಶಕ್ತಿಯನ್ನು ಪ್ರತಿಬಿಂಬಿಸಿದೆ. ಚಿತ್ರ ಲಕ್ಷಾಂತರ ಭಕ್ತರ ಮನಸೂರೆಗೊಳ್ಳುತ್ತಿರುವ ಹೊತ್ತಿನಲ್ಲೇ ನಟ ಚೇತನ್ ದೈವಾರಾಧನೆಯ ಕುರಿತು ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಪ್ರವೀಣ್ ಅಸಮಾಧಾನ ವ್ಯಕ್ತಪಡಿಸಿದರು. ಯವಸೇನೆಯ ಮುಖಂಡ ಕುಲ್ದೀಪ್ ಪೂಣಚ್ಚ ಕೂಡ ಚೇತನ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಇದನ್ನೂ ಓದಿ | Kantara Movie | ಚೇತನ್‌ ಟೀಕೆಗೆ ಉತ್ತರ ಕೊಟ್ಟ ರಿಷಬ್‌ ಶೆಟ್ಟಿ: ಏನಂದರು ಗೊತ್ತೆ?

ಕಾರ್ಕಳದಲ್ಲಿ ದಾಖಲಾಗಿದ್ದ ದೂರು
ನಟ ಚೇತನ್‌ ಹೇಳಿಕೆ ವಿರುದ್ಧ ಗುರುವಾರ (ಅ.೨೦) ಉಡುಪಿಯ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಹಿಂದು ಜಾಗರಣಾ ವೇದಿಕೆಯವರು ದೂರು ದಾಖಲಿಸಿದ್ದರು.

ಕಾಂತಾರ ಚಿತ್ರದಲ್ಲಿ ಬಳಸಲಾಗಿರುವ ದೈವಾರಾಧನೆ ವಿಚಾರವಾಗಿ ಹೇಳಿಕೆ ನೀಡಿದ್ದ ಚೇತನ್, ಭೂತಕೋಲವು ಹಿಂದು ಸಂಸ್ಕತಿಯ ಭಾಗವಲ್ಲ. ಪಂಜುರ್ಲಿ, ಪಿಲಿಚಾಮುಂಡಿ ಮುಂತಾದ ದೈವಗಳು ಮೂಲವಾಸಿ ಸಂಸ್ಕೃತಿಗೆ ಸೇರಿವೆ. ಇವು ಹಿಂದು ಸಂಪ್ರದಾಯ ಅನ್ನುವುದು ತಪ್ಪು. ಏಕೆಂದರೆ ವೇದ, ಶಾಸ್ತ್ರ, ಉಪನಿಷತ್ತುಗಳೆಲ್ಲವೂ 3 ಸಾವಿರ ವರ್ಷಗಳ ಈಚೆಗಿನ ವೈದಿಕ ಪರಂಪರೆಯವು ಎಂದು ಹೇಳಿದ್ದರು. ಇದಕ್ಕೆ ವ್ಯಾಪಕ ಟೀಕೆಗಳು ಕೇಳಿಬಂದಿದ್ದವು. ಖುದ್ದು ಕೆಲವು ಸಿನಿಮಾ ನಟರೂ ಈ ಹೇಳಿಕೆ ಬಗ್ಗೆ ಅಪಸ್ವರ ಎತ್ತಿದ್ದಾರೆ. ಈಗ ಇದರ ಬೆನ್ನಲ್ಲೇ ಕಾರ್ಕಳದಲ್ಲಿ ಚೇತನ್‌ ವಿರುದ್ಧ ದೂರು ದಾಖಲಾಗಿದೆ.‌

ದೂರಿನಲ್ಲೇನಿದೆ?
ಕರಾವಳಿ ಭಾಗದಲ್ಲಿ ಬಹಳ ಹಿಂದಿನಿಂದಲೂ ಹಿಂದು ಧರ್ಮ ಹಾಗೂ ದೈವದ ಬಗ್ಗೆ ಅಪಾರ ನಂಬಿಕೆ ಇಟ್ಟುಕೊಂಡು ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ, ನಟ ಚೇತನ್‌ ಈ ಭಾಗದ ಧಾರ್ಮಿಕ ಭಾವನೆಯಾದ ಭೂತಕೋಲ ಹಾಗೂ ದೈವದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಇದರಿಂದ ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ಹೀಗಾಗಿ ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಮತ್ತೊಮ್ಮೆ ಇಂಥ ಹೇಳಿಕೆಯನ್ನು ನೀಡಬಾರದು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ | Kantara Movie | ಕಾಂತಾರದ ಈ ವಾರದ ಓಟಕ್ಕೆ ಬ್ರೇಕ್ ಬೀಳುತ್ತಾ? 10 ಸಿನಿಮಾಗಳು ರಿಲೀಸ್‌!

Exit mobile version