ಮಂಗಳೂರು: ಮೂಡಬಿದಿರೆ ತಾಲೂಕಿನ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕಾಂತಾರ ಸಿನಿಮಾ (Kantara Movie) ನಟಿ ಸಪ್ತಮಿ ಗೌಡ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ.
ನಟ ಸನಿಲ್ ಗುರು, ತಾಯಿ ಶಾಂತಿ ಜತೆ ಅವರು ದೇವಸ್ಥಾನಕ್ಕೆ ಭೇಟಿ ನೀಡಿದ್ದು, ದುರ್ಗಾಪರಮೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ದೇವರ ಶೇಷ ವಸ್ತ್ರ ಪ್ರಸಾದ ನೀಡಿ ದೇವಳದ ಅರ್ಚಕರು ಗೌರವಿಸಿದರು.
ಮೂಗುತಿ ಸುಂದರಿ ಜತೆ ಸೆಲ್ಫಿ
ಮೂಗುತಿ ಸುಂದರಿ ಎಂದೇ ಖ್ಯಾತವಾಗಿರುವ ಸಪ್ತತಿ ಗೌಡ ಅವರಿಗೆ ಈಗ ಫ್ಯಾನ್ ಕ್ರೇಜ್ ಹೆಚ್ಚಾಗಿದೆ. ಅವರು ಹೋದಲ್ಲೆಲ್ಲ ಜನರು ಖುಷಿಯಿಂದ ಮಾತನಾಡಿಸುತ್ತಿದ್ದಾರೆ. ಫೋಟೊ ತೆಗೆದುಕೊಳ್ಳುತ್ತಿದ್ದಾರೆ. ಇದೇ ವೇಳೆ ಕಟೀಲು ದೇವಳಕ್ಕೆ ಭೇಟಿ ನೀಡಿದ್ದ ಹಾಗೂ ಸ್ಥಳೀಯರು ನಟಿ ಸಪ್ತಮಿ ಜತೆ ಸೆಲ್ಫಿಗಾಗಿ ಮುಗಿಬಿದ್ದರು.
ಇದನ್ನೂ ಓದಿ | Actress Ramya | ಸದ್ದಿಲ್ಲದೆ ಶೂಟಿಂಗ್ ಮುಗಿಸಿದ ಸ್ವಾತಿ ಮುತ್ತಿನ ಮಳೆ ಹನಿಯೇ; ರಮ್ಯಾರಿಂದ ಮತ್ತೊಂದು ಸರ್ಪ್ರೈಸ್
ಕಾಂತಾರ ಬಗ್ಗೆ ನನಗೆ ಹೆಮ್ಮೆ ಇದೆ
ದೇವರ ದರ್ಶನ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ನಟಿ ಸಪ್ತಮಿ ಗೌಡ, “ಕಾಂತಾರ ಸಿನಿಮಾ ಯಶಸ್ಸಿನ ಬಗ್ಗೆ ಹೆಮ್ಮೆ ಇದೆ. ನನಗೆ ಇಂಥದ್ದೊಂದು ಪಾತ್ರದಲ್ಲಿ ಅಭಿನಯಿಸಲು ಅವಕಾಶ ಮಾಡಿಕೊಟ್ಟ ನಾಯಕ ನಟ ರಿಷಬ್ ಶೆಟ್ಟಿ ಹಾಗೂ ಚಿತ್ರತಂಡಕ್ಕೆ ನಾನು ಧನ್ಯವಾದ ಅರ್ಪಿಸುತ್ತೇನೆ. ತುಳುನಾಡಿನ ದೈವಾರಾದನೆ ಬಗ್ಗೆ ನನಗೆ ಮೊದಲು ತಿಳಿದಿರಲಿಲ್ಲ. ಕಾಂತಾರ ಚಿತ್ರದ ನಂತರ ಅದರ ಮಹತ್ವ ತಿಳಿದಿದೆ ಎಂದು ಹೇಳಿದರು.
ಹೊಸ ಸಿನಿಮಾಗಳಿಗೆ ಮಾತುಕತೆ
ಮೊದಲ ಸಿನಿಮಾ ಕಾಂತಾರದಲ್ಲಿಯೇ ಎಲ್ಲರ ಮನ ಗೆದ್ದಿರುವ ಸಪ್ತಮಿ ಗೌಡ ಅವರಿಗೆ ಈಗ ಹೊಸ ಸಿನಿಮಾಗೋಸ್ಕರ ಹಲವಾರು ಆಫರ್ಗಳು ಬರುತ್ತಿವೆ. ಈ ಸಂಬಂಧ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬೇರೆ ಬೇರೆ ಸಿನಿಮಾದ ಬಗ್ಗೆ ಮಾತುಕತೆ ನಡೆಯುತ್ತಿದೆ. ಚಿತ್ರದ ಕತೆ ಹಾಗೂ ನನ್ನ ಪಾತ್ರದ ಬಗ್ಗೆ ನಾನು ಹೆಚ್ಚಿನ ಗಮನ ಕೊಡುತ್ತಿದ್ದೇನೆ ಎಂದು ಹೇಳಿದರು. ಅಲ್ಲದೆ, ತುಳು ಭಾಷೆಯ ಸಿನಿಮಾದಲ್ಲಿ ಅವಕಾಶ ಸಿಕ್ಕಿದರೆ ಖಂಡಿತವಾಗಿಯೂ ನಟಿಸುವೆ ಎಂದು ಅವರು ಪ್ರತಿಕ್ರಿಯೆ ನೀಡಿದರು.
ಇದನ್ನೂ ಓದಿ | Mata Film | ನೂತನ ‘ಮಠ’ ಸಿನಿಮಾಕ್ಕೆ ಧರ್ಮ ಸಂಕಟ; ಚಿತ್ರ ಬಿಡುಗಡೆಗೆ ತಡೆ ನೀಡಲು ಋಷಿ ಕುಮಾರ ಸ್ವಾಮಿ ಆಗ್ರಹ