ತುಮಕೂರು: ಕರಾವಳಿ ಭಾಗದ ದೈವಾರಾದನೆ, ಪ್ರಕೃತಿ ಹಾಗೂ ಭೂಮಾಲೀಕರ ಹುನ್ನಾರಗಳ ಕಥಾಹಂದರ ಹೊಂದಿರುವ ಕಾಂತಾರಾ (Kantara Movie) ದೇಶ-ವಿದೇಶಗಳಲ್ಲಿ ಭಾರಿ ಹೆಸರು ಮಾಡಿ ಇನ್ನೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದೇ ವೇಳೆ ತುಮಕೂರಿನ ಚಿತ್ರಮಂದಿರವೊಂದರಲ್ಲಿ ಸಿನಿಮಾ ಇನ್ನೇನು ಮುಗಿಯುತ್ತಾ ಬಂದು ಎಂಬ ಸನ್ನಿವೇಶದಲ್ಲಿ ತಾಂತ್ರಿಕ ದೋಷದಿಂದ ಸ್ಥಗಿತಗೊಂಡಿದ್ದು, ಪ್ರೇಕ್ಷಕರು ಪ್ರತಿಭಟನೆ ನಡೆಸಿದ್ದಾರೆ.
ತುಮಕೂರಿನ ಗಾಯತ್ರಿ ಚಿತ್ರಮಂದಿರದಲ್ಲಿ ಈ ಘಟನೆ ನಡೆದಿದ್ದು, ಮ್ಯಾಟ್ನಿ ಪ್ರದರ್ಶನವು ತಾಂತ್ರಿಕ ದೋಷದಿಂದ ಅರ್ಧಕ್ಕೆ ಬಂದ್ ಆದ ಕಾರಣದಿಂದ ಟಿಕೆಟ್ ಹಣ ವಾಪಸ್ ನೀಡುವಂತೆ ಚಿತ್ರಮಂದಿರದ ಎದುರು ಪ್ರೇಕ್ಷಕರ ಗಲಾಟೆ ಮಾಡಿದ್ದಾರೆ. ಚಿತ್ರದ ಕೊನೇ 20 ನಿಮಿಷ ಬಾಕಿ ಇರುವಾಗ ಪ್ರದರ್ಶನ ಬಂದ್ ಆಗಿತ್ತು.
ಸಮಸ್ಯೆ ಏನಾಗಿತ್ತು?
ಚಿತ್ರದ ಕೊನೇ ಭಾಗ ಬರುವ ವೇಳೆ ಸೌಂಡ್ ಪ್ರೊಸೆಸರ್ ಕೈಕೊಟ್ಟಿದೆ. ಇದರಿಂದಾಗಿ ಆಡಿಯೊ ಸಮಸ್ಯೆ ಎದುರಾಗಿದೆ. ಹೀಗಾಗಿ ಚಿತ್ರಮಂದಿರದವರು ಪ್ರದರ್ಶನವನ್ನು ಅಲ್ಲಿಗೇ ನಿಲ್ಲಿಸಬೇಕಾಯಿತು. ಅಲ್ಲದೆ, ಈ ತಾಂತ್ರಿಕ ದೋಷದಿಂದ ಸಂಜೆ 5 ಗಂಟೆಯ ಪ್ರದರ್ಶನವನ್ನೂ ರದ್ದು ಮಾಡುತ್ತಿರುವುದಾಗಿ ಚಿತ್ರಮಂದಿರದವರು ಘೋಷಿಸಿದರು. ಇದರಿಂದಾಗಿ 5 ಗಂಟೆಯ ಶೋಗೆ ಟಿಕೆಟ್ ಪಡೆದವರಿಗೂ ಸಮಸ್ಯೆಯಾಯಿತು.
ಹಣ ವಾಪಸ್‌ಗಾಗಿ ಗಲಾಟೆ
ಚಿತ್ರವನ್ನು ಅರ್ಧಕ್ಕೇ ಮೊಟಕುಗೊಳಿಸಿರುವುದು ಚಿತ್ರಮಂದಿರ ತಪ್ಪು. ನಮಗೆ ನಮ್ಮ ಹಣವನ್ನು ವಾಪಸ್ ನೀಡಬೇಕು ಎಂದು ಆಗ್ರಹಿಸಿ, ಚಿತ್ರಮಂದಿರದ ಎದುರು ಪ್ರೇಕ್ಷಕರು ಗಲಾಟೆ ಮಾಡಿದರು. ಇದರಿಂದ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿದೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಚಿತ್ರಮಂದಿರದ ಎದುರು ಹತ್ತಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಇದನ್ನೂ ಓದಿ | Kantara Movie | ಮಂಗಳೂರಿನಲ್ಲಿ ಕುಟುಂಬ ಸಮೇತ ಕಾಂತಾರ ಸಿನಿಮಾ ವೀಕ್ಷಿಸಿದ ಡಾ.ಡಿ.ವೀರೇಂದ್ರ ಹೆಗ್ಗಡೆ