ಮಂಗಳೂರು: ಕಾಂತಾರ ಸಿನಿಮಾದ (kantara movie) ಪಂಜುರ್ಲಿ ದೈವದ ದೃಶ್ಯವನ್ನು ರೀಲ್ಸ್ ಮಾಡಿ ಜನಾಕ್ರೋಶಕ್ಕೆ ಗುರಿಯಾಗಿದ್ದ ಬೆಂಗಳೂರಿನ ಮೇಕಪ್ ಆರ್ಟಿಸ್ಟ್ ಶ್ವೇತಾ ರೆಡ್ಡಿ ಅವರು ಶ್ರೀ ಧರ್ಮಸ್ಥಳ ಕ್ಷೇತ್ರಕ್ಕೆ ಬಂದು ತಪ್ಪು ಕಾಣಿಕೆ ಹಾಕಿದ್ದಾರೆ.
ಶುಕ್ರವಾರ ಧರ್ಮಸ್ಥಳದ ಮಂಜುನಾಥನ ಸನ್ನಿಧಿಗೆ ಆಗಮಿಸಿ ತಪ್ಪು ಕಾಣಿಕೆ ಹಾಕಿದ ಶ್ವೇತಾ ರೆಡ್ಡಿ ಅವರು, ತಪ್ಪಿನ ಅರಿವಾಗಿ ಬಂದಿದ್ದೇನೆ. ಇನ್ಯಾವತ್ತೂ ಜನರಿಗೆ ನೋವಾಗುವ ರೀತಿಯಲ್ಲಿ ನಡೆದುಕೊಳ್ಳುವುದಿಲ್ಲ ಎಂದು ಹೇಳಿದರು. ದೈವದ ಕಾರಣಿಕವನ್ನು ಅರ್ಥ ಮಾಡಿಕೊಂಡಿದ್ದೇನೆ. ನನಗೂ ಮುಂದೆ ಯಾವುದೇ ತೊಂದರೆ ಬಾರದಿರಲಿ ಎಂದು ಪ್ರಾರ್ಥಿಸಿ ತಪ್ಪು ಕಾಣಿಕೆ ಹಾಕಿದ್ದೇನೆ ಎಂದು ಶ್ವೇತಾ ರೆಡ್ಡಿ ಅವರು ವಿಸ್ತಾರ ನ್ಯೂಸ್‌ಗೆ ತಿಳಿಸಿದರು.
ಮೇಕಪ್ ಆರ್ಟಿಸ್ಟ್ ಆಗಿರುವ ಶ್ವೇತಾ ಎಸ್. ರೆಡ್ಡಿ ಅವರು ಕಾಂತಾರ ಸಿನಿಮಾದ ಕೊನೆಯಲ್ಲಿ ಬರುವ ವರಾಹ ರೂಪಂ ಹಾಡಿನ ದೃಶ್ಯವನ್ನು ವಿಡಿಯೊ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟಿದ್ದರು. ಅವರು ಬಣ್ಣ ಹಚ್ಚಿಕೊಂಡು ನೃತ್ಯ ಮಾಡಿದ್ದು ಅದನ್ನು ಇನ್‌ಸ್ಟಾ ಗ್ರಾಂನಲ್ಲಿ ಅಪ್‌ಲೋಡ್ ಮಾಡಿದ್ದರು. makeoverbyshwetha.s_reddy ಎಂಬ ಇನ್‌ಸ್ಟಾ ಖಾತೆಯಲ್ಲಿ ಮೂರು ವಿಡಿಯೊಗಳನ್ನು ಹಾಕಲಾಗಿತ್ತು. ಎರಡರಲ್ಲಿ ವರಾಹ ರೂಪಂ ಹಾಡಿನ ನೃತ್ಯದ ಸನ್ನಿವೇಶವಗಳಿದ್ದರೆ, ಮತ್ತೊಂದರಲ್ಲಿ ಮೇಕಪ್ ಮಾಡುವ ದೃಶ್ಯಗಳಿದ್ದವು. ಇದರ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾದ ಬಳಿಕ ಶ್ವೇತಾ ರೆಡ್ಡಿ ಅವರು ಇನ್‌ಸ್ಟಾ ಖಾತೆಯಿಂದ ಈ ವಿಡಿಯೊಗಳನ್ನು ಕಿತ್ತು ಹಾಕಿದ್ದರು.
ಯಕ್ಷಗಾನ, ಇದೂ ಒಂದೇ ಅಂದುಕೊಂಡಿದ್ದೆ
ಗುರುವಾರ ಬೆಳಗ್ಗೆ ತನ್ನ ಗೆಳತಿಯೊಂದಿಗೆ ಧರ್ಮಸ್ಥಳದ ನೇತ್ರಾವತಿ ಸ್ನಾನ ಘಟ್ಟದಲ್ಲಿ ತೀರ್ಥ ಸ್ನಾನ ಮಾಡಿದ ಶ್ವೇತಾ ರೆಡ್ಡಿ ಅವರು ಬಳಿಕ ದೇವಸ್ಥಾನಕ್ಕೆ ಆಗಮಿಸಿ ಮಂಜುನಾಥನ ದರ್ಶನ ಮಾಡಿ ಕ್ರಮ ಪ್ರಕಾರ ತಪ್ಪು ಕಾಣಿಕೆ ಹಾಕಿದರು.
ನಾನು ಯಕ್ಷಗಾನ ಮತ್ತು ವರಾಹರೂಪಂ ಹಾಡು ಎಲ್ಲ ಒಂದೇ ಅಂದುಕೊಂಡಿದ್ದೆ. ಹಾಗಾಗಿ ಮೇಕಪ್ ಮಾಡಿಕೊಂಡು ನೃತ್ಯ ಮಾಡಿದ್ದೆ. ಆದರೆ, ನಾನು ಇನ್‌ಸ್ಟಾದಲ್ಲಿ ಹಾಕುತ್ತಿದ್ದಂತೆಯೇ ದೊಡ್ಡ ಮಟ್ಟದಲ್ಲಿ ಆಕ್ರೋಶ ಕೇಳಿಬಂದಾಗ ಭಯವಾಯಿತು. ಕೂಡಲೇ ಡಿಲೀಟ್ ಮಾಡಿದೆ. ಆದರೂ ನಾನು ತಪ್ಪು ಮಾಡಿದ್ದೇನೆ. ಮಾಡಬಾರದಿತ್ತು ಅಂತೆಲ್ಲ ಅನಿಸ್ತಾ ಇತ್ತು. ನನ್ನಿಂದ ದೊಡ್ಡ ತಪ್ಪಾಗಿರುವುದನ್ನು ಅರ್ಥ ಮಾಡಿಕೊಂಡೆ. ತುಂಬಾ ಜನರಿಗೆ ನೋವಾಗಿದೆ ಎನ್ನುವುದು ಗೊತ್ತಾಯಿತು. ಹೀಗಾಗಿ ಯಾರಿಗೂ ನೋವಾಗಬಾರದು ಎಂಬ ಕಾರಣಕ್ಕಾಗಿ ಕ್ಷಮೆ ಯಾಚಿಸಿದ್ದೇನೆ. ನಾನು ಮಾಡಿದ ತಪ್ಪಿಗಾಗಿ ತಪ್ಪು ಕಾಣಿಕೆ ಹಾಕಿದ್ದೇನೆ ಎಂದರು ಶ್ವೇತಾ ರೆಡ್ಡಿ.
ದೈವಾರಾಧನೆಯ ಬಗ್ಗೆ ಈಗಷ್ಟೇ ನನಗೆ ಗೊತ್ತಾಗಿದೆ. ಇದರ ಬಗ್ಗೆ ನನಗೆ ನಂಬಿಕೆ ಬಂದಿದೆ. ಮುಂದೆ ಅವಕಾಶ ಸಿಕ್ಕರೆ ದೈವದ ಕೋಲ ನೋಡುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ | Kantara Movie | ಪಂಜುರ್ಲಿ ದೈವದಂತೆ ಬಣ್ಣ ಹಚ್ಚಿ ವಿಡಿಯೊ ಮಾಡಿದ ಯುವತಿ ವಿರುದ್ಧ ವ್ಯಾಪಕ ಆಕ್ರೋಶ