ವಿಜಯಪುರ: ರಾಜ್ಯದ ಇತಿಹಾಸದಲ್ಲಿ ಐದು ವರ್ಷಗಳಲ್ಲಿ ಮುಖ್ಯಮಂತ್ರಿಯಾಗಿ ಅತಿ ಹೆಚ್ಚು ಸಾಲ ಮಾಡಿರುವ ಖ್ಯಾತಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರದ್ದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಅವರು ಶನಿವಾರ ವಿಜಯಪುರದ ಸೈನಿಕ್ ಸ್ಕೂಲ್ ಹೆಲಿಪ್ಯಾಡ್‍ಗೆ ಬಂದಿಳಿದು ಕಾರ್ಯಕ್ರಮಕ್ಕೆ ತೆರಳುವ ಮುನ್ನ ಮಾಧ್ಯಮದವರ ಜತೆ ಮಾತನಾಡಿದರು.
ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಪರಮೇಶ್ವರ್ ಅವರು ಅಸಮಾಧಾನಗೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅದು ಅವರ ಆಂತರಿಕ ವಿಚಾರ ಎಂದರು. ಪರಮೇಶ್ವರ್ ಅವರು ಬಹಳ ಬುದ್ದಿವಂತರು. ಎಲ್ಲವನ್ನೂ ಅರಿತವರು. ಅಸಮಾಧಾನ ವ್ಯಕ್ತಪಡಿಸಿದ್ದಾರೆ, ಅರ್ಥಮಾಡಿಕೊಳ್ಳಬೇಕು ಎಂದರು.
ಕಾಂಗ್ರೆಸ್ ಪಕ್ಷದ ಶಾಸಕರನ್ನು ಭದ್ರ ಮಾಡಿಕೊಳ್ಳಲಿ
ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪರ ಅಲೆ ಇದೆ ಎಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಸಿದ್ದರಾಮಯ್ಯ ಅವರು ಪ್ರವಾಸ ಮಾಡುತ್ತಿರುವ ಭಾಗದ ಶಾಸಕರನ್ನು ಗಟ್ಟಿಯಾಗಿ ಹಿಡಿದುಕೊಳ್ಳಲಿ. ಕಾಂಗ್ರೆಸ್ ಪಕ್ಷದ ಶಾಸಕರನ್ನು ಭದ್ರ ಮಾಡಿಕೊಳ್ಳಲಿ. ಜವಾಬ್ದಾರಿಯುತ ಸ್ಥಾನ ದಲ್ಲಿರುವ ನಾನು ಇಷ್ಟೇ ಸಲಹೆ ನೀಡಲು ಸಾಧ್ಯ ಎಂದರು.
ಕಾರ್ಕಳ ಸುನೀಲ್ ಕುಮಾರ್ ಕ್ಷೇತ್ರ
ಕಾರ್ಕಳದಲ್ಲಿ ಪ್ರಮೋದ್ ಮುತಾಲಿಕ್ ಅವರು ಬಿಜೆಪಿ ಅಭ್ಯರ್ಥಿಯನ್ನು ಹಾಕಬಾರದು ಎಂದು ಶ್ರೀ ರಾಮಸೇನೆಯವರು ಒತ್ತಡ ಹಾಕುತ್ತಿರುವ ಬಗ್ಗೆ ಉತ್ತರಿಸಿದ ಅವರು, ಕಾರ್ಕಳದಲ್ಲಿ ನಮ್ಮ ಮಂತ್ರಿ ಸುನೀಲ್ ಕುಮಾರ್ ಅವರು ಮೂರು ಬಾರಿ ಆರಿಸಿ ಬಂದಿದ್ದಾರೆ. ಸುನೀಲ್ ಕುಮಾರ್ ಅವರ ಕ್ಷೇತ್ರ ಕಾರ್ಕಳ. ಅವರು ಮನವಿ ಮಾಡುವ ಅಧಿಕಾರವಿದೆ. ಆದರೆ ರಾಷ್ಟ್ರೀಯ ಪಕ್ಷವಾಗಿ ನಾವು ಎಲ್ಲಾ 224 ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ ಎಂದರು.
ಇದನ್ನೂ ಓದಿ : Karnataka Election: ಪ್ರಜಾಧ್ವನಿಗೆ ಇರುವುದು ಎರಡೇ ಬಸ್; 4 ಇದ್ದಿದ್ರೆ ನಾನೂ ಸಾರಥಿ ಆಗ್ತಿದ್ದೆ: ಡಾ.ಜಿ.ಪರಮೇಶ್ವರ್