ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸಬಾರದು ಎಂದು ಒತ್ತಾಯಿಸಿ ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಕರ್ನಾಟಕ ರಕ್ಷಣಾ ವೇದಿಕೆ ಸೇರಿ ಹಲವು ಕನ್ನಡ ಪರ ಸಂಘಟನೆಗಳು ಶುಕ್ರವಾರ ಪ್ರತಿಭಟನೆ ನಡೆಸಿದವು. ರಸ್ತೆ ತಡೆ ನಡೆಸಿ, ಪ್ರತಿಭಟನಾ ಮೆರವಣಿಗೆಯಿಂದ ಹೋರಾಟ ತೀವ್ರಗೊಂಡಿದ್ದರಿಂದ ಪರಿಸ್ಥಿತಿ ನಿಯಂತ್ರಿಸಲು ಹಲವೆಡೆ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕರವೇ ವಿಧಾನ ಸೌಧ ಮುತ್ತಿಗೆ ಯತ್ನ ವಿಫಲ
ಬೆಂಗಳೂರಿನಲ್ಲಿ ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ನೇತೃತ್ವದಲ್ಲಿ ಪಾದಯಾತ್ರೆ ನಡೆಸಿ, ವಿಧಾನ ಸೌಧಕ್ಕೆ ಮುತ್ತಿಗೆ ಹಾಕಲು ಕಾರ್ಯಕರ್ತರು ನಿರ್ಧರಿಸಿದ್ದರು. ಈ ನಿಟ್ಟಿನಲ್ಲಿ ಕೆ.ಆರ್.ಪುರದಿಂದ ಪಾದಯಾತ್ರೆ ಆರಂಭಗೊಂಡಿತ್ತು. ಆದರೆ ಪಾದಯಾತ್ರೆ ಆರಂಭವಾದ ಬೆನ್ನಲ್ಲೇ ಪೊಲೀಸರು ತಡೆದರು. ಹೀಗಾಗಿ ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ಹಾಗೂ ಬೆಂಬಲಿಗರು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಹೀಗಾಗಿ ಅವರನ್ನು ಪೊಲೀಸರು ವಶಕ್ಕೆ ಪಡೆದರು.
ಈ ವೇಳೆ ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ಮಾತನಾಡಿ, ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗೆಳಿಗೆ ಎಚ್ಚರಿಕೆ ನೀಡುತ್ತಿದ್ದೇವೆ. ಈ ಹಿಂದೆ ಬಂಗಾರಪ್ಪರಂತೆ ಧಿಟ್ಟ ನಿರ್ಧಾರ ಕೈಗೊಂಡು ಅವರ ಮಾದರಿಯನ್ನು ಅನುಸರಿಸಬೇಕು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೂ ಎಚ್ಚರಿಕೆ ನೀಡಲು ಬಯಸುತ್ತೇವೆ. ನಗರದಲ್ಲೇ ಕುಡಿಯಲ್ಲಿ ನೀರಿಲ್ಲ, ಹೀಗಿರುವಾಗ ತಮಿಳುನಾಡಿಗೆ ನೀರು ಹರಿಸುವುದು ಸೂಕ್ತವಲ್ಲ. ಈ ಕೂಡಲೇ ನೀರು ಹರಿಸುವುದು ನಿಲ್ಲಿಸಬೇಕು. ಸುಪ್ರೀಂ ಕೋರ್ಟ್ ಆದೇಶ ಆದಾಗಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು. ನಮ್ಮ ರಾಜ್ಯದ ಸಂಸದರು ನಿದ್ದೆ ಮಾಡುತ್ತಿದ್ದಾರೆ. ನಾಳೆ ಅತ್ತಿಬೆಲೆ ಗೇಟ್ ಬಂದ್ ಮಾಡಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಅತ್ತಿಬೆಲೆ ಗಡಿಯಲ್ಲಿ ಹೆದ್ದಾರಿ ತಡೆದು ಆಕ್ರೋಶ
ಆನೇಕಲ್: ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದಿಂದ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಅತ್ತಿಬೆಲೆ ಗಡಿಭಾಗದಲ್ಲಿ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು. ಯಾವುದೇ ಕಾರಣಕ್ಕು ತಮಿಳುನಾಡಿಗೆ ಕಾವೇರಿ ನೀರು ಬಿಡಬಾರದು ಎಂದು ಆಗ್ರಹಿಸಿದ ಕಾರ್ಯಕರ್ತರು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಇದೇ ವೇಳೆ ಹೆದ್ದಾರಿಯಲ್ಲಿ ತಮಿಳುನಾಡಿನಿಂದ ಬರುವ ವಾಹನಗಳನ್ನು ಅಡ್ಡಗಟ್ಟಿ ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ | Cauvery Dispute : ಕಾವೇರಿ ಹೋರಾಟಕ್ಕೆ ಧುಮುಕಿದ ಆದಿಚುಂಚನಗಿರಿ ಶ್ರೀ; ರೈತ ಪರ ನಿರ್ಧಾರ ತೆಗೆದುಕೊಳ್ಳಲು ಹಕ್ಕೊತ್ತಾಯ
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಪ್ರತಿಕೃತಿ ದಹನ
ರಾಮನಗರ: ನಗರದ ಐಜೂರು ವೃತ್ತದಲ್ಲಿ ಕರವೇ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಿದರು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಭೂತದಹನ (ಪ್ರತಿಕೃತಿ ದಹನ) ಮಾಡಿ ಆಕ್ರೋಶ ಹೊರಹಾಕಿ, ಕಾವೇರಿ ಎಂದೆಂದೂ ನಮ್ಮದು ನಮ್ಮದು ಎಂದು ಘೋಷಣೆ ಕೂಗಿದರು.
ಹಾವೇರಿ ಸಂಸದರ ಕಚೇರಿ ಎದುರು ಹೋರಾಟ
ಹಾವೇರಿ: ತಮಿಳುನಾಡಿಗೆ ಯಾವುದೇ ಕಾರಣಕ್ಕೂ ನೀರು ಬಿಡದಂತೆ ಒತ್ತಾಯಿಸಿ ನಗರದಲ್ಲಿ ಸಂಸದ ಶಿವಕುಮಾರ ಉದಾಸಿ ಕಚೇರಿ ಎದುರು ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಸಂಸದರು ಹಾಗೂ ಶಾಸಕರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ನೀರು ಬಿಟ್ಟರೆ ಉಗ್ರವಾದ ಹೋರಾಟ ಮಾಡುವುದಾಗಿ ಟಿ.ಎ.ನಾರಾಯಣಗೌಡ ಬಣದ ಕರವೇ ಕಾರ್ಯಕರ್ತರು ಎಚ್ಚರಿಕೆ ನೀಡಿದರು.
ಚಿತ್ರದುರ್ಗದ ಜಿಲ್ಲಾ ಅಂಚೆ ಕಚೇರಿ ಬಳಿ ಪ್ರತಿಭಟನೆ
ಚಿತ್ರದುರ್ಗ: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ನಗರದ ಜಿಲ್ಲಾ ಅಂಚೆ ಕಚೇರಿ ಬಳಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪೋಸ್ಟ್ ಆಫೀಸ್ ಮುಂಭಾಗ ಮಲಗಿ ಅಕ್ರೋಶ ಹೊರಹಾಕಿದ ಬಳಿಕ ಗೇಟ್ ಒಳನುಗ್ಗಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.
ಇದನ್ನೂ ಓದಿ | Cauvery Dispute : ಕಾವೇರಿ ವಾಸ್ತವ ತಿಳಿಯಲು ಅನ್ಯ ರಾಜ್ಯದ ಅಧಿಕಾರಿಗಳ ತಂಡ ಕಳುಹಿಸಿ; ದೇವೇಗೌಡರ ಸಲಹೆ