Site icon Vistara News

Karave Narayana Gowda: ಜೈಲಿನಿಂದ ಹೊರಬಂದರೂ ಕರವೇ ನಾರಾಯಣ ಗೌಡರಿಗೆ ತಪ್ಪಿಲ್ಲ ಸಂಕಷ್ಟ!

Karnataka Rakshana Vedike TA Narayana Gowda

ಬೆಂಗಳೂರು: ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದರೂ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡರಿಗೆ (Karave Narayana Gowda) ಇನ್ನೂ ಸಂಕಷ್ಟ ತಪ್ಪಿಲ್ಲ. ಅವರ ವಿರುದ್ಧ ಸಾಲು ಸಾಲು ಕೇಸ್‌ಗಳು ಬಾಕಿ ಇದ್ದು, ಹಲವು ಪೊಲೀಸ್‌ ಠಾಣೆಗಳು ಪ್ರಕರಣಗಳ ಫೈಲುಗಳನ್ನು ಹೊರಗೆಳೆದುಕೊಂಡು ಕೂತಿವೆ.

ಕನ್ನಡ ನಾಮಫಲಕ ಗಲಾಟೆ ಪ್ರಕರಣದಲ್ಲಿ ಗೌಡರು ಆರೆಸ್ಟ್‌ ಆಗಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಹೋಗಿ ಬಂದಿದ್ದರು. ಆರೆಸ್ಟ್ ಆಗಿದ್ದು 1 ಕೇಸ್‌ನಲ್ಲಿಯದರೂ, ಅವರ ಮೇಲೆ ಇನ್ನೂ 8 ಕೇಸ್‌ಗಳು ಬಾಕಿಯಿವೆ. ಈಶಾನ್ಯ ವಿಭಾಗದಲ್ಲೇ 8 ಕೇಸ್ ಇವೆ.

ಈ ಎಲ್ಲಾ ಪ್ರಕರಣಗಳಲ್ಲೂ ಗೌಡರಿಗೆ ನೋಟಿಸ್ ಕೊಡಲು ಪೊಲೀಸರು ಮುಂದಾಗಿದ್ದಾರೆ. ಚಿಕ್ಕಜಾಲ, ಯಲಹಂಕ ಪೊಲೀಸರಿಂದ ನೋಟಿಸ್‌ಗೆ ಸಿದ್ಧತೆ ನಡೆದಿದೆ. ಇಷ್ಟು ದಿನ ಗೌಡರು ಜೈಲಲ್ಲಿದ್ದ ಕಾರಣ ನೋಟೀಸ್ ನೀಡಿರಲಿಲ್ಲ. ಇದೀಗ ಬಿಡುಗಡೆ ಹಿನ್ನೆಲೆಯಲ್ಲಿ ನೋಟಿಸ್ ಕೊಟ್ಟು ವಿಚಾರಣೆಗೆ ಒಯ್ಯಲಿದ್ದಾರೆ.

ಚಿಕ್ಕಜಾಲದಲ್ಲಿ ಒಟ್ಟು 6 ಪ್ರಕರಣಗಳು ಬಾಕಿ ಇವೆ. ಬಿಎಂಟಿಸಿಗೆ ಕಲ್ಲು ತೂರಾಟ, ಪೊಲೀಸ್ ಕಾನ್‌ಸ್ಟೇಬಲ್‌ಗೆ ಉಗಿದ ಪ್ರಕರಣ, ವಿವಿಧ ಕಡೆ ಹೆದ್ದಾರಿ ತಡೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಪ್ರಕರಣ ಸಂಬಂಧಿಸಿದಂತೆ ಪ್ರತ್ಯೇಕ ಎಫ್‌ಐಆರ್‌ಗಳು 143, 145, 149, 283, 8B, 427 ಸೆಕ್ಷನ್‌ಗಳ ಅಡಿ ದಾಖಲಾಗಿವೆ. ಯಲಹಂಕದಲ್ಲಿ ಬಿಎಂಟಿಸಿ ಬಸ್‌ಗೆ ಹಾನಿ ಮಾಡಿದ, ಇಕೋ ಪೊಲೀಸ್ ಬೋರ್ಡ್ ಡ್ಯಾಮೇಜ್ ಕೇಸ್‌ಗಳಿದ್ದು, ಸೆಕ್ಷನ್‌ 41(A) ಅಡಿ ಪೊಲೀಸರು ನೋಟೀಸ್ ನೀಡಲಿದ್ದಾರೆ.

ಈ ಬಾರಿ ಎಚ್ಚರಿಕೆಯಿಂದ ಹೆಜ್ಜೆ ಇಡಲು ನಾರಾಯಣ ಗೌಡ ನಿರ್ಧರಿಸಿದ್ದು, ತಮ್ಮ ವಕೀಲರ ಮೂಲಕ ಉತ್ತರ ನೀಡಲು ಮುಂದಾಗಿದ್ದಾರೆ. ನೋಟೀಸ್ ನೀಡಲು ಪೊಲೀಸರು ಸಂಪರ್ಕ ಮಾಡಿದಾಗ, ತನ್ನ ವಕೀಲರೂ ಇದ್ದಾಗಲೇ ನೋಟೀಸ್ ನೀಡಿ ಎಂದು ಗೌಡರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: TA Narayana Gowda: 3ನೇ ಬಾರಿ ಬಂಧನವಾಗಿದ್ದ ಕರವೇ ನಾರಾಯಣ ಗೌಡರಿಗೆ ಜಾಮೀನು ಮಂಜೂರು

Exit mobile version