Site icon Vistara News

ಕನ್ನಡ ನಾಮಫಲಕ ಚಳವಳಿ ಬೆಂಬಲಿಸಿದ ಕನ್ನಡಿಗರಿಗೆ ಕರವೇ ನಾರಾಯಣ ಗೌಡ ಧನ್ಯವಾದ

Narayanagowda

ಬೆಂಗಳೂರು: ಕನ್ನಡ ನಾಮಫಲಕ ಚಳವಳಿಗೆ ಬೆಂಬಲಿಸಿದ ವಿವಿಧ ಸಂಘಟನೆಗಳು ಸೇರಿ ರಾಜ್ಯದ ಜನರಿಗೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣ ಗೌಡ (TA Narayana Gowda) ಅವರು ಧನ್ಯವಾದ ತಿಳಿಸಿದ್ದಾರೆ. ಹಳೇ ಪ್ರಕರಣವೊಂದರಲ್ಲಿ ಬಂಧಿತರಾಗಿದ್ದ ಅವರು, ಬುಧವಾರ ಸಂಜೆ ಜೈಲಿನಿಂದ ಬಿಡುಗಡೆಯಾದ ಬಳಿಕ ವಿಡಿಯೊ ಮೂಲಕ ರಾಜ್ಯದ ಜನರಿಗೆ ಧನ್ಯವಾದ ಹೇಳಿದ್ದಾರೆ.

ಕನ್ನಡ, ಕನ್ನಡಿಗರ ಪರ ಕರವೇ ಹೋರಾಟಕ್ಕೆ ಬೆಂಬಲ ನೀಡಿದ ಸಮಸ್ತ ಕನ್ನಡಿಗರಿಗೆ ಧನ್ಯವಾದ. ನಮ್ಮ ಹೋರಾಟಕ್ಕೆ ಸ್ಪಂದಿಸಿರುವ ರಾಜ್ಯ ಸರ್ಕಾರ, ನಾಮಫಲಕದಲ್ಲಿ ಶೇ. 60 ಕನ್ನಡ ಬಳಕೆ ಕಡ್ಡಾಯ ಮಾಡಲು ಸುಗ್ರೀವಾಜ್ಞೆ ಜಾರಿ ಮಾಡಲು ನಿರ್ಧರಿಸಿದೆ. ಇದು ಕನ್ನಡಿಗರ ಹೋರಾಟಕ್ಕೆ ಸಿಕ್ಕ ಜಯವಾಗಿದೆ. ಇದರಲ್ಲಿ ಕಾನೂನು ಹೋರಾಟ ಬಹಳ ಮುಖ್ಯವಾದುದು, ನಮ್ಮ ಎಲ್ಲ ವಕೀಲರು ಸಹ ಶಕ್ತಿ ತುಂಬಿದ್ದಾರೆ ಎಂದು ತಿಳಿಸಿದರು.

ಇನ್ನು ವಿಶೇಷವಾಗಿ ಈ ಹೋರಾಟವನ್ನು ಇಡೀ ಕರ್ನಾಟಕದ ಜನತೆಗೆ ತಲುಪಿಸುವಲ್ಲಿ ಮಾಧ್ಯಮಗಳು ಬಹುಮುಖ್ಯ ಪಾತ್ರವಹಿಸಿವೆ. ಕನ್ನಡಿಗರ ಪರವಾದ ಹೋರಾಟದಲ್ಲಿ ಮಾಧ್ಯಮದ ಗೆಳೆಯರು ನಮಗೆ ಶಕ್ತಿ ತುಂಬಿದ್ದಾರೆ. ಹೀಗಾಗಿ ಅವರಿಗೆಲ್ಲಾ ನಾನು ವಂದನೆ ಸಲ್ಲಿಸುವೆ ಎಂದು ತಿಳಿಸಿದ್ದಾರೆ.

ಕನ್ನಡದ ಹೋರಾಟ ಮಾಡುವಾಗ ಕೆಲವೊಂದು ಗಟ್ಟಿತನದ ನಿರ್ಧಾರಗಳನ್ನು ಕೈಗೊಳ್ಳಬೇಕಾಗಿತ್ತು. ಹಾಗೆಂದು ಕಾನೂನು ಕೈಗೆತ್ತಿಕೊಂಡಿಲ್ಲ. ಕಾನೂನು ಚೌಕಟ್ಟಿನಲ್ಲೇ ನಮ್ಮ ಹೋರಾಟ ನಡೆಯುತ್ತಿದೆ. ಆದರೆ ಕೆಲವೊಮ್ಮೆ ಹೋರಾಟದ ವೇಳೆ ಸಣ್ಣ ಪುಟ್ಟ ತೊಡಕುಗಳು, ತೊಂದರೆಗಳು ಆಗುತ್ತವೆ. ಪ್ರಾಮಾಣಿಕತೆಯಿಂದ ಹೋರಾಡಿದಾಗ ಇಂತಹವೆಲ್ಲಾ ಸಹಜ. 15 ದಿನ ನಾನು ಮತ್ತು ನಮ್ಮ ಕಾರ್ಯಕರ್ತರು ಜೈಲುವಾಸ ಅನುಭವಿಸಿದ್ದೇವೆ. ಇನ್ನು ಕೆಲ ಕೇಸ್‌ಗಳು ಇವೆ. ಇದಕ್ಕಾಗಿ ಕಾನೂನು ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.

ನನ್ನ ದೇಹದ ಕೊನೆಯ ರಕ್ತದ ಹನಿ ಇರುವವರೆಗೆ ಕಾನೂನು ಬದ್ಧವಾಗಿ ನಾನು ಕನ್ನಡಪರ ಹೋರಾಟ ಮಾಡುತ್ತೇನೆ. ನಮ್ಮ ಹೋರಾಟಕ್ಕೆ ಶಕ್ತಿ ತುಂಬಿದ ಜನತೆಗೆ ಮತ್ತೊಮ್ಮೆ ಧನ್ಯವಾದ ತಿಳಿಸುತ್ತೇನೆ ಎಂದು ತಿಳಿಸಿದ್ದಾರೆ.

3ನೇ ಬಾರಿ ಬಂಧನವಾಗಿದ್ದ ಕರವೇ ನಾರಾಯಣ ಗೌಡರಿಗೆ ಜಾಮೀನು ಮಂಜೂರು

ಬೆಂಗಳೂರು: ಎರಡು ಪ್ರಕರಣಗಳಲ್ಲಿ ಬಂಧನವಾಗಿ ಜಾಮೀನು ಪಡೆದು ಬಿಡುಗಡೆಯಾದ ಬಳಿಕ ಮತ್ತೊಂದು ಹಳೇ ಪ್ರಕರಣದಲ್ಲಿ ಬಂಧಿತರಾಗಿದ್ದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣ ಗೌಡ ಅವರಿಗೆ, ನಗರದ 1ನೇ ಎಸಿಎಂಎಂ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. 2020ರಲ್ಲಿ ಕೊರೊನಾ ನಿಯಮಗಳ ಉಲ್ಲಂಘನೆ ಹಿನ್ನೆಲೆಯಲ್ಲಿ ಎನ್‌ಡಿಎಂಎ ಕಾಯ್ದೆಯಡಿ ಹಲಸೂರು ಗೇಟ್‌ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಅವರಿಗೆ ಜಾಮೀನು ಸಿಕ್ಕಿದೆ.

ಡಿಸೆಂಬರ್‌ 27ರಂದು ವಾಣಿಜ್ಯ ಮಳಿಗೆಗಳ ನಾಮಫಲಕದಲ್ಲಿ ಶೇ.60 ಕನ್ನಡ ಕಡ್ಡಾಯಕ್ಕೆ ಆಗ್ರಹಿಸಿ ನಡೆಸಿದ ಪ್ರತಿಭಟನೆ ವೇಳೆ ಬಂಧನವಾಗಿದ್ದ ಅವರಿಗೆ ಜ.6ರಂದು ದೇವನಹಳ್ಳಿ 5ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯವು ಜಾಮೀನು ಮಂಜೂರು ಮಾಡಿತ್ತು. ಹೀಗಾಗಿ ಪರಪ್ಪನ ಅಗ್ರಹಾರ ಜೈಲಿನಿಂದ ಮಂಗಳವಾರ(ಜ.9)ರಂದು ಬಿಡುಗಡೆಯಾದ ಬೆನ್ನಲ್ಲೇ ಕುಮಾರಸ್ವಾಮಿ ಲೇಔಟ್ ಪೊಲೀಸರು ವಶಕ್ಕೆ ಪಡೆದಿದ್ದರು.

2017ರಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡಿದ ಹಿನ್ನೆಲೆಯಲ್ಲಿ ಕುಮಾರಸ್ವಾಮಿ‌ ಲೇಔಟ್ ಪೊಲೀಸ್ ಠಾಣೆಯಲ್ಲಿ ನಾರಾಯಣ ಗೌಡ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧ ಜಾಮೀನು ರಹಿತ ವಾರಂಟ್ ಜಾರಿಯಾಗಿತ್ತು. ಆ ಹಿನ್ನೆಲೆಯಲ್ಲಿ ಕುಮಾರಸ್ವಾಮಿ‌ ಲೇಔಟ್ ಪೊಲೀಸ್ ಠಾಣೆ ಪೊಲೀಸರು ವಶಕ್ಕೆ ಪಡೆದು, ಬುಧವಾರ 30ನೇ ಎಸಿಎಂಎಂ ಕೋರ್ಟ್‌ಗೆ ಹಾಜರುಪಡಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿ, ನಾರಾಯಣಗೌಡರಿಗೆ ಕೋರ್ಟ್‌ ಜಾಮೀನು ಮಂಜೂರು ಮಾಡಿತ್ತು.

ಇದನ್ನೂ ಓದಿ | Sakala scheme: ಸಕಾಲ ಅರ್ಜಿ ವಿಲೇವಾರಿ ವಿಳಂಬ ಸಲ್ಲದು: ಕೃಷ್ಣ ಬೈರೇಗೌಡ

ಸಾರ್ವಜನಿಕ ಆಸ್ತಿ ಹಾನಿ ಪ್ರಕರಣದಲ್ಲಿ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಹಲಸೂರು ಗೇಟ್‌ ಠಾಣೆ ಪೊಲೀಸರು ಮತ್ತೊಂದು ಕೇಸ್‌ನಲ್ಲಿ ಅವರನ್ನು ವಶಕ್ಕೆ ಪಡೆದಿದ್ದರು. 2020ರಲ್ಲಿ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ವೇಳೆ ಕೊರೊನಾ ನಿಯಮಗಳ ಉಲ್ಲಂಘನೆ ಹಿನ್ನೆಲೆಯಲ್ಲಿ ಎನ್‌ಡಿಎಂಎ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣದಲ್ಲಿ ಅವರನ್ನು ವಶಕ್ಕೆ ಪಡೆದು, ವೈದ್ಯಕೀಯ ತಪಾಸಣೆ ಬಳಿಕ ಬೆಂಗಳೂರಿನ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಬುಧವಾರ ಸಂಜೆ ಹಾಜರುಪಡಿಸಲಾಗಿತ್ತು. ಈ ಪ್ರಕರಣದಲ್ಲೂ ಅವರಿಗೆ ಜಾಮೀನು ಮಂಜೂರು ಆಗಿದೆ. 10 ಸಾವಿರ ರೂ. ಕ್ಯಾಷ್‌ ಶ್ಯೂರಿಟಿ ನೀಡುವಂತೆ ಸೂಚಿಸಿ, ನ್ಯಾಯಾಧೀಶರಾದ ಆನಂದ್ ಎಸ್. ಕರಿಯಮ್ಮನವರು ಜಾಮೀನು ಮಂಜೂರು ಮಾಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ


Exit mobile version