ಬೆಂಗಳೂರು: ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿಗೆ ಆಗ್ರಹಿಸಿ ರಾಜ್ಯಾದ್ಯಂತ ಕರ್ನಾಟಕ ರಕ್ಷಣಾ ವೇದಿಕೆಯಿಂದ ಸೋಮವಾರ ಪ್ರತಿಭಟನೆ (Karave Protest) ನಡೆಸಲಾಗಿದ್ದು, ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರನ್ನು ಕರವೇ ಅಧ್ಯಕ್ಷ ಟಿ.ಎ.ನಾರಾಯಣ ಗೌಡ ನೇತೃತ್ವದ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿದೆ.
ಸಿಎಂ ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯ ಅವರನ್ನು ನಿಯೋಗ ಭೇಟಿ ಮಾಡಿ, ಕನ್ನಡಿಗರಿಗೆ ಉದ್ಯೋಗ ನೀಡಲು ಡಾ. ಸರೋಜಿನಿ ಮಹಿಷಿ ವರದಿ ಜಾರಿ ಮಾಡಲು ಕೋರಿದೆ. ಇದಕ್ಕೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿ, ನಾಳೆಯೇ ಅಧಿಕಾರಿಗಳನ್ನು ಕರೆಸಿ ಚರ್ಚೆ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಕರವೇ ನಾರಾಯಣಗೌಡರ ಭೇಟಿ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಕನ್ನಡಿಗರಿಗೆ ವಿಶೇಷ ಉದ್ಯೋಗ ಮೀಸಲಾತಿ ನೀಡಲು ಹೊಸ ಕಾನೂನು ಜಾರಿಗೆ ತರಬೇಕು ಎಂದು ಮನವಿ ಮಾಡಿದ್ದಾರೆ. ನಾನು ಅದರ ಬಗ್ಗೆ ಸಂವಿಧಾನ ಹಿನ್ನೆಲೆಯಲ್ಲಿ ಅಡ್ವೊಕೇಟ್ ಜನರಲ್ ಜತೆಗೆ ಚರ್ಚೆ ಮಾಡುತ್ತೇನೆ. ಅವರು ಮನವಿಯಲ್ಲಿ ಸರೋಜಿನಿ ಮಹಿಷಿ ವರದಿ ಜಾರಿ ಮತ್ತು ಕಾನೂನು ಮಾಡುವ ಬಗ್ಗೆ ಕೋರಿದ್ದಾರೆ. ಅದಕ್ಕೆ ಕಾನೂನು, ಸಂವಿಧಾನಾತ್ಮಕವಾಗಿ ಪರಿಶೀಲನೆ ಮಾಡುತ್ತೇವೆ ಎಂದ ತಿಳಿಸಿದ್ದಾರೆ.
ಮನವಿ ಪತ್ರದಲ್ಲೇನಿದೆ?
ʼಕರ್ನಾಟಕದ ನೆಲದಲ್ಲಿ ಕನ್ನಡಿಗರಿಗೇ ಉದ್ಯೋಗ’ ನೀಡುವ ಸಂಬಂಧ ಕಾಯ್ದೆಯನ್ನು ರೂಪಿಸಿ ಜಾರಿಗೊಳಿಸಲು ಒತ್ತಾಯಿಸಿ ಸಿಎಂ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣ ಗೌಡ ಅವರು ಮನವಿ ಪತ್ರ ಸಲ್ಲಿಸಿದ್ದಾರೆ.
ಇಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮತ್ತು ಬೆಂಗಳೂರಿನಲ್ಲಿ ಫ್ರೀಡಂ ಪಾರ್ಕ್ ಮುಂಭಾಗ ಕರ್ನಾಟಕ ರಕ್ಷಣಾ ವೇದಿಕೆ ‘ಕರ್ನಾಟಕದ ನೆಲದಲ್ಲಿ ಕನ್ನಡಿಗರಿಗೇ ಉದ್ಯೋಗ’ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದೆ. ಸಕಲ ಸಮೃದ್ಧಿಯಾಗಿರುವ ಕರ್ನಾಟಕಕ್ಕೆ ಇತರ ರಾಜ್ಯಗಳಿಂದ ದೊಡ್ಡ ಪ್ರಮಾಣದ ವಲಸೆ ಅವ್ಯಾಹತವಾಗಿದೆ. ಇದರಿಂದ ಬೆಂಗಳೂರು ಸೇರಿ ರಾಜ್ಯದ ಮಹಾನಗರಗಳಲ್ಲಿ ವಲಸೆ ಪ್ರಮಾಣ ಮಿತಿ ಮೀರಿದೆ. ವಲಸೆಯ ಬಹುಮುಖ್ಯ ದುಷ್ಪರಿಣಾಮ ಕನ್ನಡದ ಯುವಸಮುದಾಯದ ಮೇಲೆ ಆಗುತ್ತಿದೆ. ಕನ್ನಡಿಗರಿಗೆ ಈಗ ಉದ್ಯೋಗವಿಲ್ಲದಂತಾಗಿದೆ.
ಕನ್ನಡದ ನೆಲದಲ್ಲಿ ಸ್ಥಾಪಿತವಾಗಿರುವ ಖಾಸಗಿ ಸಂಸ್ಥೆಗಳು ಹೊರರಾಜ್ಯಗಳ ಮಾನವ ಸಂಪನ್ಮೂಲ ಅಧಿಕಾರಿಗಳನ್ನೇ ನೇಮಿಸಿಕೊಳ್ಳುತ್ತಿದ್ದು, ಅವರು ತಮ್ಮ ತಮ್ಮ ರಾಜ್ಯದ ಯುವಕ ಯುವತಿಯರನ್ನು ಕರೆತಂದು ಕೆಲಸ ಕೊಡುತ್ತಿದ್ದಾರೆ. ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರ ಪ್ರಮಾಣ ದಿನೇದಿನೇ ಕುಸಿಯುತ್ತಲೇ ಬರುತ್ತಿದೆ. ಹೀಗೇ ಮುಂದುವರೆದರೆ ಕನ್ನಡಿಗರು ಮುಂಬರುವ ದಿನಗಳಲ್ಲಿ ತಮ್ಮ ನೆಲದಲ್ಲಿ ತಾವೇ ಅತಂತ್ರರಾಗಿ ನರಕಯಾತನೆ ಅನುಭವಿಸುವ ಸ್ಥಿತಿ ಬಂದೊದಗಲಿದೆ.
ರಾಜ್ಯ ಸರ್ಕಾರ 1983ರಲ್ಲಿ ಡಾ. ಸರೋಜಿನಿ ಮಹಿಷಿ ಅವರ ನೇತೃತ್ವದಲ್ಲಿ ಒಂದು ಸಮಿತಿಯೊಂದನ್ನು ರಚಿಸಿ ರಾಜ್ಯದಲ್ಲಿ ಉದ್ಯೋಗ ಮೀಸಲಾತಿಗೆ ಸಂಬಂಧಿಸಿದಂತೆ ಮಾನದಂಡಗಳನ್ನು ಶಿಫಾರಸು ಮಾಡಲು ಸೂಚಿಸಿದ ನಂತರ, ಸಮಿತಿಯು 13-6-1984 ರಂದು ಮಧ್ಯಂತರ ವರದಿಯನ್ನು ಮತ್ತು 30-12-1986 ರಂದು ಅಂತಿಮ ವರದಿಯನ್ನು ಸಲ್ಲಿಸಿತು. ಸಮಿತಿಯು ಒಟ್ಟು 58 ಶಿಫಾರಸುಗಳನ್ನು ಮಾಡಿತು. ಈ ಶಿಫಾರಸುಗಳಲ್ಲಿ, ಕರ್ನಾಟಕ ಸರ್ಕಾರವು 45 ಶಿಫಾರಸುಗಳನ್ನು ಅಂಗೀಕರಿಸಿದೆ.
ಎಲ್ಲಾ ರಾಜ್ಯ ಸರ್ಕಾರಿ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಘಟಕಗಳಲ್ಲಿ ಕನ್ನಡಿಗರಿಗೆ 100 ಪ್ರತಿಶತ ಮೀಸಲಾತಿ ನೀಡಬೇಕು. ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳಲ್ಲಿ (ಪಿಎಸ್‌ಯು) ಗ್ರೂಪ್ ‘ಸಿ’ ಮತ್ತು ಗ್ರೂಪ್ ‘ಡಿ’ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಶೇಕಡಾ 100 ಮೀಸಲಾತಿ ನೀಡಬೇಕು. ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸರ್ಕಾರದ ಘಟಕಗಳು ಮತ್ತು ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳಲ್ಲಿ ಅನುಕ್ರಮವಾಗಿ ಗ್ರೂಪ್ ‘ಬಿ’ ಮತ್ತು ಗ್ರೂಪ್ ‘ಎ’ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಕನಿಷ್ಠ 80 ಪ್ರತಿಶತ ಮತ್ತು 65 ಮೀಸಲಾತಿ ನೀಡಬೇಕು ಎಂದು ಸಮಿತಿಯು ಶಿಫಾರಸು ನೀಡಿತ್ತು. ಆದರೆ, ಡಾ.ಸರೋಜಿನಿ ಮಹಿಷಿ ವರದಿ ಸಮರ್ಪಕವಾಗಿ ಜಾರಿಯಾಗಲೇ ಇಲ್ಲ.
ಸರ್ಕಾರ ಜಾರಿ ಮಾಡಿದ ಕೆಲವು ಅಂಶಗಳನ್ನು ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಖಾಸಗಿ ಸಂಸ್ಥೆಗಳು ರಾಜ್ಯ ಸರ್ಕಾರದ ಕಾನೂನನ್ನು ಗಾಳಿಗೆ ತೂರಿ ಬೇರೆ ರಾಜ್ಯಗಳ ನೌಕರರನ್ನೇ ನೇಮಿಸಿಕೊಂಡುಬರುತ್ತಿವೆ. 2019ರಲ್ಲಿ ರಾಜ್ಯ ಸರ್ಕಾರ ಕಾರ್ಮಿಕ ಇಲಾಖೆಯ ಮೂಲಕ ಸ್ಥಾಯಿ ಆದೇಶದ ನಿಯಮಗಳಿಗೆ ಬದಲಾವಣೆ ಮಾಡಿ ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ಒದಗಿಸಲು ಖಾಸಗಿ ವಲಯಕ್ಕೆ ಸೂಚಿಸಿತಾದರೂ ಎಷ್ಟು ಪ್ರಮಾಣದಲ್ಲಿ ಆದ್ಯತೆ ನೀಡಬೇಕು ಎಂಬುದು ಸ್ಪಷ್ಟವಿರಲಿಲ್ಲ. ಹೀಗಾಗಿ ಈ ಕಾನೂನಿಗೆ ಯಾವ ಬಲವೂ ಇರಲಿಲ್ಲ, ಅರ್ಥವೂ ಇರಲಿಲ್ಲ.
ಕೇಂದ್ರ ಸರ್ಕಾರದ ಕೈಗಾರಿಕಾ ಉದ್ಯೋಗ ಸ್ಥಾಯಿ ಆದೇಶ ಕಾಯ್ದೆ 1946 ಪ್ರಕಾರ ಆಯಾ ರಾಜ್ಯಗಳಲ್ಲಿ ನಿಯಮಾವಳಿ ರೂಪಿಸುವ ಅಧಿಕಾರ ಆಯಾ ರಾಜ್ಯ ಸರ್ಕಾರಗಳಿಗೆ ಇರುತ್ತದೆ. ರಾಜ್ಯ ಸರ್ಕಾರವು ರೂಪಿಸುವ ಕಾನೂನನ್ನು 50 ಕ್ಕೂ ಹೆಚ್ಚು ಮಂದಿ ನೌಕರರನ್ನು ಹೊಂದಿರುವ ಕೈಗಾರಿಕೆಗಳನ್ನು ಪಾಲಿಸಬೇಕಾಗುತ್ತದೆ. ಈ ಕಾಯ್ದೆಯಡಿ ರಾಜ್ಯ ಸರ್ಕಾರ ಪ್ರತ್ಯೇಕ ಕಾನೂನನ್ನು ರೂಪಿಸಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಯನ್ನು ಜಾರಿ ಮಾಡಬಹುದಾಗಿದೆ. ಇದಕ್ಕೆ ರಾಜ್ಯ ಸರ್ಕಾರ ಇಚ್ಛಾಶಕ್ತಿಯನ್ನು ತೋರಬೇಕು ಮತ್ತು ಕಾನೂನು ರೂಪಿಸುವ ವೇಳೆ ಎಚ್ಚರಿಕೆಯನ್ನು ವಹಿಸಿ ನ್ಯಾಯಾಲಯಗಳಲ್ಲಿ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕಾಗಿದೆ ಎಂದು ಮನವಿ ಮಾಡಲಾಗಿದೆ.
ಹಕ್ಕೊತ್ತಾಯಗಳು
- ಕೈಗಾರಿಕಾ ಉದ್ಯೋಗ ಸ್ಥಾಯಿ ಆದೇಶ ಕಾಯ್ದೆ 1946 ಅನ್ವಯ ರಾಜ್ಯ ಸರ್ಕಾರ ಬಲಿಷ್ಠವಾದ ಕಾನೂನು ರೂಪಿಸಿ, ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಒದಗಿಸಬೇಕು.
- ಎಲ್ಲ ಖಾಸಗಿ ಸಂಸ್ಥೆಗಳಲ್ಲಿ ಸಿ ಮತ್ತು ಡಿ ದರ್ಜೆಯ ಶೇ.100ರಷ್ಟು ಹುದ್ದೆಗಳು ಕನ್ನಡಿಗರಿಗೆ ಮೀಸಲಿಡಬೇಕು.
- ಎಲ್ಲ ಖಾಸಗಿ ಸಂಸ್ಥೆಗಳ ಇತರ ಹುದ್ದೆಗಳಲ್ಲಿ ಶೇ. 80ರಷ್ಟು ಹುದ್ದೆಗಳನ್ನು ಕನ್ನಡಿಗರಿಗೆ ಮೀಸಲಿಡಬೇಕು.
- ಹದಿನೈದು ವರ್ಷ ಕಾಲ ಕರ್ನಾಟಕದಲ್ಲಿ ನೆಲೆಸಿದವರನ್ನು ಕನ್ನಡಿಗರೆಂದು ಪರಿಗಣಿಸುವ ನಿಯಮವಿದೆ. ಇವರಿಗೆ ಕಡ್ಡಾಯವಾಗಿ ಕನ್ನಡ ಬರವಣಿಗೆಯ ಪರೀಕ್ಷೆಯನ್ನು ನೀಡಿ, ಅದರಲ್ಲಿ ಉತ್ತೀರ್ಣರಾದವರನ್ನು ಮಾತ್ರ ಕನ್ನಡಿಗರೆಂದು ಪರಿಗಣಿಸಬೇಕು.
- ನಿಯಮಾವಳಿ ಪಾಲಿಸದ ಸಂಸ್ಥೆಗಳಿಗೆ ನೀಡಿರುವ ಮಾನ್ಯತೆ ರದ್ದುಗೊಳಿಸಿ, ಅವುಗಳಿಗೆ ಭೂಮಿ ನೀಡಲಾಗಿದ್ದರೆ ಹಿಂದಕ್ಕೆ ಪಡೆಯುವ ಮತ್ತು ಆ ಸಂಸ್ಥೆಗಳಿಗೆ ನೀಡಿರುವ ಎಲ್ಲ ಸವಲತ್ತುಗಳನ್ನು ಹಿಂದಕ್ಕೆ ಪಡೆಯುವ ನಿಯಮವನ್ನು ರೂಪಿಸಬೇಕು. ನಿಯಮಾವಳಿ ಪಾಲಿಸದ ಸಂಸ್ಥೆಗಳಿಗೆ ದಂಡ ವಿಧಿಸಬೇಕು ಮತ್ತು ಕ್ರಿಮಿನಲ್ ಮೊಕದ್ದಮೆ ಹೂಡಬೇಕು.
- ರಾಜ್ಯ ಸರ್ಕಾರಿ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಘಟಕಗಳಲ್ಲಿ ಕನ್ನಡಿಗರಿಗೆ 100 ಪ್ರತಿಶತ ಮೀಸಲಾತಿ ನೀಡಬೇಕು.
- ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ಸಾರ್ವಜನಿಕ ವಲಯದ ಘಟಕಗಳಲ್ಲಿ ಗ್ರೂಪ್ ‘ಸಿ’ ಮತ್ತು ಗ್ರೂಪ್ ‘ಡಿ’ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಶೇಕಡಾ 100 ಮೀಸಲಾತಿ ನೀಡಬೇಕು.
- ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ಸಾರ್ವಜನಿಕ ವಲಯದ ಘಟಕಗಳಲ್ಲಿ ಸಿ ಮತ್ತು ಡಿ ದರ್ಜೆಯ ಹುದ್ದೆಗಳಿಗೆ ಹೊರತಾದ ಉಳಿದೆಲ್ಲ ಹುದ್ದೆಗಳಲ್ಲೂ ಶೇ. 90ರಷ್ಟು ಮೀಸಲಾತಿ ನೀಡಬೇಕು.
- ರಾಜ್ಯ, ಕೇಂದ್ರ ಸರ್ಕಾರದ ಇಲಾಖೆಗಳು, ಸಾರ್ವಜನಿಕ ವಲಯದ ಘಟಕಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸಲು ವಿಫಲರಾಗುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಅವಕಾಶವನ್ನು ಉದ್ದೇಶಿತ ಕಾನೂನಿನಲ್ಲಿ ಅಳವಡಿಸಬೇಕು.
- ರಾಜ್ಯ ಸರ್ಕಾರ ರೂಪಿಸುವ ಕಾನೂನನ್ನು ಸಮರ್ಪಕವಾಗಿ ಜಾರಿಗೆ ತರಲು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ಅಧಿಕಾರವನ್ನು ನೀಡಬೇಕು. ಮುಂದೆ ಕಾನೂನು ಸಮಸ್ಯೆಗಳು ಎದುರಾದರೆ ಅದನ್ನು ಎದುರಿಸಲು ಸಮರ್ಥ ವಕೀಲರ ತಂಡವನ್ನು ಸಿದ್ಧಪಡಿಸಬೇಕು.
ಕನ್ನಡ ನಾಮಫಲಕ ಕಡ್ಡಾಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಕ್ಷಣಾ ವೇದಿಕೆ ಹಮ್ಮಿಕೊಂಡ ಹೋರಾಟದ ನಂತರ ತಾವು ಕನ್ನಡಿಗರ ಬೇಡಿಕೆಗಳಿಗೆ ಸ್ಪಂದಿಸಿ ಕಾಯ್ದೆಯನ್ನು ರೂಪಿಸಿ ಜಾರಿಗೊಳಿಸಿದ್ದಿರಿ. ಇದಕ್ಕಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತಾ, ಉದ್ಯೋಗಕ್ಕೆ ಸಂಬಂಧಿಸಿದ ಕಾಯ್ದೆಯನ್ನೂ ತಾವು ಜಾರಿ ಮಾಡಿದರೆ ತಮ್ಮನ್ನು ಕನ್ನಡದ ಮುಂದಿನ ಪೀಳಿಗೆ ಕೃತಜ್ಞತೆಯಿಂದ ನೆನೆದುಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಕೂಡಲೇ ಕಾಯ್ದೆ ಜಾರಿಮಾಡುವಂತೆ ಈ ಮೂಲಕ ವಿನಂತಿಸುತ್ತೇನೆ ಎಂದು ಟಿ.ಎ.ನಾರಾಯಣ ಗೌಡರು ತಿಳಿಸಿದ್ದಾರೆ.
ಸಿದ್ದರಾಮಯ್ಯ ಮೇಲೆ ಭರವಸೆ ಇದೆ ಎಂದ ನಾರಾಯಣ ಗೌಡ್ರು
ಸಿಎಂ ಭೇಟಿ ಬಳಿಕ ಮಾತನಾಡಿದ ಕರವೇ ಅಧ್ಯಕ್ಷ ಟಿ.ಎ.ನಾರಾಯಣ ಗೌಡ ಅವರು, ನಾನು ಮೊದಲೇ ಒಂದು ಮಾತು ಹೇಳಿದ್ದೆ. ಸಿಎಂ ಸಿದ್ದರಾಮಯ್ಯ ಅವರಿಗೆ ಕನ್ನಡದ ಬಗ್ಗೆ ಕಾಳಜಿ ಇದೆ. ಈಗ ನಾವು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಕೊಟ್ಟಿದ್ದು, ನಾಳೆಯೇ ಅಧಿಕಾರಿಗಳನ್ನು ಕರೆಸಿ ಚರ್ಚೆ ಮಾಡುತ್ತೀನಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನಮ್ಮ ಸರ್ಕಾರ ಸದಾ ಕನ್ನಡದ ಪರವಾಗಿದೆ, ನಾನು ಕೂಡ ಕನ್ನಡ ಪರ ಇದ್ದೀನಿ. ನಿಮ್ಮ ಮನವಿಯನ್ನು ಪರಿಶೀಲಿಸಿ ಶೀಘ್ರದಲ್ಲಿಯೇ ಕಾನೂನು ತಜ್ಞರ ಜತೆ ಚರ್ಚೆ ಮಾಡುತ್ತೀನಿ ಎಂದು ಸಿಎಂ ಹೇಳಿರುವುದಾಗಿ ತಿಳಿಸಿದರು.
ಕನ್ನಡದ ವಿಚಾರದಲ್ಲಿ ನಾನು ರಾಜಿ ಆಗಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಡಾ. ಸರೋಜಿನಿ ಮಹಿಷಿ ವರದಿ ಜಾರಿಗಾಗಿ 40 ವರ್ಷದಿಂದ ಹೋರಾಟ ಮಾಡುತ್ತಿದ್ದೀವಿ. ಈ ವರದಿ ಪ್ರಕಾರ ಉದ್ಯೋಗದಲ್ಲಿ 100ಕ್ಕೆ 100ರಷ್ಟು ಕನ್ನಡಿಗರು ಇರಬೇಕು ಅಂತ ಇದೆ. ಕರ್ನಾಟಕದಲ್ಲಿರುವ ಕನ್ನಡಿಗರಿಗೆ ಉದ್ಯೋಗ ಸಿಗಬೇಕು. ಎಲ್ಲ ವಿಚಾರಗಳನ್ನು ಸಿಎಂಗೆ ಮನವರಿಕೆ ಮಾಡಿದ್ದೇವೆ. ಜಾರಿಗೆ ತಂದರೆ ಬದುಕು ಕಟ್ಟಿಕೊಳ್ಳುವ ಕೆಲಸ ಮಾಡಲಾಗುತ್ತೆ. ಸಿದ್ದರಾಮಯ್ಯ ಮೇಲೆ ಭರವಸೆ ಇದೆ ಎಂದು ಹೇಳಿದರು.
ಇದನ್ನೂ ಓದಿ | Karave Protest: ಕನ್ನಡಿಗರಿಗೆ ಉದ್ಯೋಗ ನೀಡಿ, ಇಲ್ಲವೇ ರಾಜ್ಯ ಬಿಟ್ಟು ತೊಲಗಿ: ಕರವೇ ಕಾರ್ಯಕರ್ತರ ಆಕ್ರೋಶ
ಕನ್ನಡ ನಾಮಫಲಕ ಕಡ್ಡಾಯ ಮಾಡುವ ವಿಚಾರಕ್ಕೆ ಸರ್ಕಾರ ಸರಿಯಾಗಿ ಕಾಯ್ದೆ ಮಾಡಿದೆ. ಇದರಿಂದ ಶೇ. 60% ಕನ್ನಡ ಕರ್ನಾಟಕದಲ್ಲಿ ಕಾಣುತ್ತಿದೆ. ನಾನು ಮುಂದಿನ ವಾರ ದೆಹಲಿಗೆ ಹೋಗಬೇಕು, ಕುಮಾರಸ್ವಾಮಿ, ಪ್ರಲ್ಹಾದ್ ಜೋಶಿ, ಸೋಮಣ್ಣರನ್ನು ಭೇಟಿ ಮಾಡುತ್ತೀನಿ. ರಾಜ್ಯಕ್ಕೆ ಸಂಬಂಧಪಟ್ಟ ವಿಚಾರಗಳ ಬಗ್ಗೆ ಅವರೊಂದೊಗೆ ಚರ್ಚೆ ಮಾಡುತ್ತೇನೆ. ತೆರಿಗೆ, ಜಿಎಸ್‌ಟಿ ಸೇರಿ 1 ಲಕ್ಷ 86 ಕೋಟಿ ರೂ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿದೆ. ಈ ವಿಚಾರವಾಗಿ ನಮ್ಮ ಜೊತೆ ಕೈ ಜೋಡಿಸಿ ಅಂತ ಸಿಎಂ ಕೇಳಿದ್ದಾರೆ ಎಂದು ನಾರಾಯಣ ಗೌಡ ತಿಳಿಸಿದ್ದಾರೆ.
ಕಾಯ್ದೆ ಜಾರಿಯಾಗದಿದ್ದರೆ ನಿಮ್ಮ ಸರ್ಕಾರ ಉಳಿಯಲ್ಲ: ನಾರಾಯಣ ಗೌಡ ಎಚ್ಚರಿಕೆ
ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಕಾಯ್ದೆ ಜಾರಿ ಮಾಡದಿದ್ದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ. ಯಾವುದೇ ಸರ್ಕಾರ ಬರಲಿ ನಿರಂತರವಾಗಿ ಬೇಡಿಕೆ ಇಟ್ಟಿದ್ದೇವೆ. ಇಂದು ಸಾಂಕೇತಿಕವಾಗಿ ಒಂದು ದಿನದ ಧರಣಿ ಮೂಲಕ ಒತ್ತಡ ಹಾಕುತ್ತಿದ್ದೇವೆ. ಸರ್ಕಾರ ಮಾಡಲು ಕಾರಣ ಕನ್ನಡಿಗರು, ಈಗ ಅವರ ಹಿತ ಕಾಪಾಡಿ. ಇಲ್ಲದಿದ್ದರೆ ನಿಮ್ಮ ಸರ್ಕಾರ ಉಳಿಯುವುದಿಲ್ಲ ಎಂದು ಕರವೇ ಅಧ್ಯಕ್ಷ ಟಿ.ಎ.ನಾರಾಯಣ ಗೌಡ ಎಚ್ಚರಿಕೆ ನೀಡಿದರು.
ಫ್ರೀಡಂ ಪಾರ್ಕ್‌ನಲ್ಲಿ ಆಯೋಜಿಸಿದ್ದ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಕನ್ನಡಿಗರ ಬದುಕಿನ ಹಾಗೂ ಉದ್ಯೋಗ ವಿಚಾರದಲ್ಲಿ ಕಾಯ್ದೆ ಜಾರಿ ಆಗಬೇಕು. ಇಡೀ ರಾಜ್ಯದ 31 ಜಿಲ್ಲೆಗಳಲ್ಲಿ ಧರಣಿ ನಡೆಯುತ್ತಿದೆ. ಅಲ್ಲಿನ ಜಿಲ್ಲಾಧಿಕಾರಿಗಳ ಮೂಲಕ ಸಿಎಂಗೆ ಮನವಿ ಸಲ್ಲಿಕೆ ಆಗಲಿದೆ. ಸಿಎಂ ಸಿದ್ದರಾಮಯ್ಯ ಅವರಿಗೆ ಒಂದಷ್ಟು ಕಾಳಜಿ ಇದೆ. ಅಂದು ನಮ್ಮ ಹೋರಾಟಕ್ಕೆ ಮಣಿದು ಕನ್ನಡ ನಾಮಫಲಕ ಕಾಯ್ದೆ ಆಯಿತು. ನಾವು ಇಂದು ಒಂದು ದಿನದ ಭಜನೆ ಮಾಡಲು ಬಂದಿಲ್ಲ ಸ್ವಾಮಿ ಎಂದರು.
ಆಗ ನನ್ನನ್ನ ಜೈಲಿಗೆ ಹಾಕಿ ಚಿತ್ರ ಹಿಂಸೆ ಕೊಟ್ಟಿದ್ದಿರಿ. ಆದರೆ, ನಾನು ಹೋರಾಡಿ ಸಾಯುತ್ತೇನೆ ಹೊರತು ರಾಜಿ ಮಾಡಿಕೊಳ್ಳುವುದಿಲ್ಲ. ಒಂದು ಸಣ್ಣ ಕಿಡಿ ಇಲ್ಲಿ ಇಂದು ಹೊತ್ತಿಕೊಂಡಿದೆ, ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಖಚಿತ ಎಂದರು.