Site icon Vistara News

Karave Protest: ಕನ್ನಡಿಗರಿಗೆ ಉದ್ಯೋಗಕ್ಕಾಗಿ ಆಗ್ರಹ; ನಾಳೆ‌ ಕರುನಾಡಲ್ಲಿ ಮೊಳಗಲಿದೆ ಕರವೇ ಕಹಳೆ

Karave Protest

ಬೆಂಗಳೂರು: ಕರುನಾಡಿನಲ್ಲಿ ಜುಲೈ 1ರಂದು ಕರವೇ ಕಹಳೆ ಮೊಳಗಲಿದೆ. ಕನ್ನಡಿಗರಿಗೆ ಉದ್ಯೋಗಕ್ಕಾಗಿ ಆಗ್ರಹಿಸಿ ರಾಜ್ಯಾದಾದ್ಯಂತ ಚಳವಳಿಗೆ ಕರ್ನಾಟಕ ರಕ್ಷಣಾ ವೇದಿಕೆ (Karave Protest) ಕರೆ ನೀಡಿದ್ದು, ಬೃಹತ್ ಪ್ರತಿಭಟನೆಗೆ ರಾಜಧಾನಿ ಸಾಕ್ಷಿಯಾಗಲಿದೆ. ಸೋಮವಾರ ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆವರೆಗೂ ನಗರದ ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ ನಡೆಯಲಿದ್ದು, ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಏಕಕಾಲದಲ್ಲಿ ಪ್ರತಿಭಟನೆಗಳು ಜರುಗಲಿವೆ.

ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ಕಡ್ಡಾಯ ಉದ್ಯೋಗ ಮೀಸಲಾತಿ ಕಲ್ಪಿಸಲು ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ನೇತೃತ್ವದಲ್ಲಿ ಬೃಹತ್ ಹೋರಾಟಕ್ಕೆ ಕರೆ ನೀಡಲಾಗಿದೆ. ಇತರೆ ರಾಜ್ಯಗಳಿಂದ ಉದ್ಯೋಗ ಅರಸಿ ಬೆಂಗಳೂರಿನತ್ತ ವಲಸೆ ಬರುವವರ ಸಂಖ್ಯೆ ಹೆಚ್ಚಳವಾಗಿದ್ದು, ಇದರಿಂದ ಖಾಸಗಿ ವಲಯದಲ್ಲಿ ಕನ್ನಡೇತರರಿಗೆ ಹೆಚ್ಚಿನ ಉದ್ಯೋಗ ಅವಕಾಶ ನೀಡಲಾಗುತ್ತಿದೆ. ಹೀಗಾಗಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಖಾಸಗಿ ವಲಯದಲ್ಲಿ ಸಿ ಮತ್ತು ಡಿ ದರ್ಜೆಯ ಹುದ್ದೆಗಳು ಶೇಕಡಾ 100 ರಷ್ಟು ಕನ್ನಡಿಗರಿಗೆ ಮೀಸಲಾತಿ ನೀಡಬೇಕು. ಇತರೆ ಗ್ರೂಪ್‌ಗಳಲ್ಲಿ ಶೇಕಡ 80 ರಷ್ಟು ಮೀಸಲಾತಿ ನೀಡುವಂತೆ ಆಗ್ರಹಿಸಿ ನಾಳೆ ಪ್ರತಿಭಟನೆ ನಡೆಸಲಾಗುತ್ತದೆ.

50 ಸಾವಿರ ಕಾರ್ಯಕರ್ತರು ಭಾಗಿ ಆಗುವ ಸಾಧ್ಯತೆ

ಡಾ. ಸರೋಜಿನಿ ಮಹಿಷಿ ವರದಿ ಜಾರಿಗೆ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದ್ದು, ನಾಳೆ ಫ್ರೀಡಂ ಪಾರ್ಕಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನಡೆಸುವ ಪ್ರತಿಭಟನೆಯಲ್ಲಿ 50 ಸಾವಿರ ಕಾರ್ಯಕರ್ತರು ಭಾಗಿ ಆಗುವ ಸಾಧ್ಯತೆ ಇದೆ. ನಗರದ 28 ವಿಧಾನಸಭಾ ಕ್ಷೇತ್ರಗಳಿಂದ ಮೆರವಣಿಗೆ ಮೂಲಕ ಕಾರ್ಯಕರ್ತರ ಆಗಮಿಸಲಿದ್ದಾರೆ.
ಕಾರ್ಯಕರ್ತರನ್ನು ಹತ್ತಿಕ್ಕುವ ಕೆಲಸ ಪೊಲೀಸ್ ಇಲಾಖೆ ಮಾಡಿದರೆ ಮತ್ತೊಂದು ಡಿಸೆಂಬರ್ 27 ಆಗುತ್ತೆ ಎಂದು
ಪೊಲೀಸರು ಹಾಗೂ ಸರ್ಕಾರಕ್ಕೆ ಕರವೇ ಅಧ್ಯಕ್ಷ ನಾರಾಯಣ ಗೌಡರು ಎಚ್ಚರಿಕೆ ನೀಡಿದ್ದಾರೆ.

ಹಲವು ಸಂಘಟನೆಗಳ ಬೆಂಬಲ

ಇನ್ನು ನಾಳಿನ ಕರವೇ ಹೋರಾಟಕ್ಕೆ ಹಲವು ಸಂಘಟನೆ, ಸಂಘ-ಸಂಸ್ಥೆಗಳು ಬೆಂಬಲ ನೀಡಿವೆ.
ಈಗಾಗಲೇ ಕನ್ನಡ ಸಾಹಿತ್ಯ ಪರಿಷತ್ ಬೆಂಬಲ ಘೋಷಣೆ ಮಾಡಿದ್ದು, ಕೈಗಾರಿಕಾ ವಲಯದಲ್ಲಿ ಕೆಲಸ ಮಾಡುತ್ತಿರುವ ಕನ್ನಡ ನೌಕರರು, ರೈತ ಸಂಘದ ಪದಾಧಿಕಾರಿಗಳು ಹಾಗೂ ಮುಖಂಡರು, ಚಿತ್ರರಂಗದ ಹಲವು ಮಂದಿ ನಟ ಹಾಗೂ ತಂತ್ರಜ್ಞರಿಂದಲೂ ಬೆಂಬಲ ವ್ಯಕ್ತವಾಗಿದೆ.

ನಟ ನೆನಪಿರಲಿ ಪ್ರೇಮ್, ಚಿತ್ರ ಸಾಹಿತಿ ವಿ ನಾಗೇಂದ್ರ ಪ್ರಸಾದ್, ನಿರ್ದೇಶಕ ರವಿ ಶ್ರೀವತ್ಸ,
ಸಾಹಿತಿಗಳಾದ ದೊಡ್ಡ ರಂಗೇಗೌಡ, ಮನು ಬಳಿಗಾರ್ ಸೇರಿದಂತೆ ಹಲವರು ಬೆಂಬಲ ವ್ಯಕ್ತಪಡಿಸಿದ್ದು,
ಆಟೋ ಚಾಲಕರ ಸಂಘಟನೆಗಳು ಸಹ ಪ್ರತಿಭಟನೆಯಲ್ಲಿ ಭಾಗಿ ಆಗುವ ನಿರೀಕ್ಷೆ ಇದೆ.,.

ಇದನ್ನೂ ಓದಿ | CM Siddaramaiah: ಡಾ.ರಾಜ್‍ಕುಮಾರ್ ಕನಸಿನಂತೆ ಫಿಲ್ಮ್ ಸಿಟಿ ನಿರ್ಮಾಣ ಮಾಡ್ತೇವೆ ಎಂದ ಸಿದ್ದರಾಮಯ್ಯ

ಕರವೇ ಪ್ರಮುಖ ಬೇಡಿಕೆಗಳು

1.ಕೈಗಾರಿಕಾ ಉದ್ಯೋಗ ಸ್ಥಾಯಿ ಆದೇಶ ಕಾಯ್ದೆ 1946 ರ ಅನ್ವಯ ಬಲಿಷ್ಠ ಕಾನೂನು ರೂಪಿಸಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಬೇಕು.
2.ಖಾಸಗಿ ಸಂಸ್ಥೆಗಳ ಸಿ ಮತ್ತು ಡಿ ದರ್ಜೆ ಹುದ್ದೆಗಳು ಶೇ.100 ಕನ್ನಡಿಗರಿಗೆ ಮೀಸಲಿಡಬೇಕು.
3.ಖಾಸಗಿ ಸಂಸ್ಥೆಗಳ ಇತರೆ ಹುದ್ದೆಯಲ್ಲಿ ಶೇ. 80 ಕನ್ನಡಿಗರಿಗೆ ಮೀಸಲಿಡಬೇಕು.
4.ಹದಿನೈದು ವರ್ಷ ರಾಜ್ಯದಲ್ಲಿದ್ದವರಿಗೆ ಕನ್ನಡಿಗರೆಂದು ಪರಿಗಣಿಸುವ ನಿಯಮವಿದ್ದು, ಅಂತವರಿಗೆ ಕನ್ನಡ ಪರೀಕ್ಷೆ ನಡೆಸಿ ಉತ್ತೀರ್ಣರಾದರೆ ಮಾತ್ರ ಕನ್ನಡಿಗರೆಂದು ಪರಿಗಣಿಸಬೇಕು.
5.ನಿಯಮ‌‌ ಪಾಲಿಸದ ಸಂಸ್ಥೆಗಳ ಲೈಸೆನ್ಸ್ ರದ್ದು ಮಾಡಬೇಕು. ಸರ್ಕಾರ ನೀಡಿರುವ ಭೂಮಿ, ಸವಲತ್ತುಗಳನ್ನು ವಾಪಸ್ ಪಡೆದು ಕ್ರಿಮಿನಲ್ ಮೊಕದ್ದಮೆ ಹಾಕಬೇಕು.
6.ರಾಜ್ಯ ಸರ್ಕಾರಿ ಸಂಸ್ಥೆ ಮತ್ತು ಸಾರ್ವಜನಿಕ ವಲಯದಲ್ಲಿ ಶೇ.100 ಕನ್ನಡಿಗರಿಗೆ ಮೀಸಲಾತಿ
7.ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಗ್ರೂಪ್ ಸಿ ಹಾಗೂ ಡಿ ಹುದ್ದೆಗಳಲ್ಲಿ ಶೇ.100 ಕನ್ನಡಿಗರಿಗೆ ಮೀಸಲಾತಿ ನೀಡಬೇಕು.
8.ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಗ್ರೂಪ್ ಸಿ, ಡಿ ಹೊರತಾದ ಉಳಿದ ಉದ್ಯೋಗದಲ್ಲಿ ಶೇ.90 ಮೀಸಲಾತಿ ನೀಡಬೇಕು.
9.ಕನ್ನಡಿಗರಿಗೆ ಮೀಸಲಾತಿ ಕಲ್ಪಿಸಲು ವಿಫಲವಾಗುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು, ಈ ಅಂಶವನ್ನು ಉದ್ದೇಶಿತ ಕಾನೂನಿನಲ್ಲಿ ಸೇರಿಸಬೇಕು.
10. ರಾಜ್ಯ ಸರ್ಕಾರ ರೂಪಿಸುವ ಕಾನೂನು ಜಾರಿ ಮಾಡಲು ಕನ್ನಡ ಪ್ರಾಧಿಕಾರಕ್ಕೆ ಅಧಿಕಾರ ನೀಡಬೇಕು.

ರಕ್ಷಣಾ ವೇದಿಕೆ ದೊಡ್ಡ ಪ್ರಮಾಣದ ಚಳವಳಿಗೆ ಸಜ್ಜಾಗಿದೆ: ಟಿ.ಎ. ನಾರಾಯಣಗೌಡ

ಕರ್ನಾಟಕ ರಕ್ಷಣಾ ವೇದಿಕೆಯಿಂದ (Karnataka Rakshana Vedike) ʼಕರ್ನಾಟಕದ ನೆಲದಲ್ಲಿ ಕನ್ನಡಿಗರಿಗೇ ಉದ್ಯೋಗ’ ಎಂಬ ಘೋಷಣೆಯೊಂದಿಗೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಜುಲೈ 1ರಂದು ಬೃಹತ್ ಧರಣಿ ಸತ್ಯಾಗ್ರಹ (KaRaVe Protest) ನಡೆಸಲಿದ್ದು, ಸಾವಿರಾರು ಕರವೇ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ (Bengaluru News) ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕರ್ನಾಟಕಕ್ಕೆ ಹೊರರಾಜ್ಯಗಳಿಂದ ಅವ್ಯಾಹತವಾಗಿ ವಲಸೆ ನಡೆಯುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಇದು ತೀವ್ರ ಸ್ವರೂಪ ಪಡೆದಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಮಹಾನಗರಗಳು ವಲಸಿಗರ ಹಾವಳಿಯಿಂದ ಸಂಪೂರ್ಣ ಬದಲಾಗುತ್ತಿವೆ. ಕನ್ನಡಿಗರ ಉದ್ಯೋಗಗಳನ್ನು ಹೊರರಾಜ್ಯದವರು ಕಿತ್ತುಕೊಳ್ಳುತ್ತಿದ್ದಾರೆ. ಕನ್ನಡಿಗರು ತಮ್ಮ ನೆಲದಲ್ಲೇ ನಿರುದ್ಯೋಗಿಗಳಾಗುವ ಸ್ಥಿತಿ ನಿರ್ಮಾಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಕ್ಷಣಾ ವೇದಿಕೆ ದೊಡ್ಡ ಪ್ರಮಾಣದ ಚಳವಳಿಗೆ ಸಜ್ಜಾಗಿದೆ. ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ಸಂಬಂಧ ಸಮಗ್ರ ಕಾಯ್ದೆ ರೂಪಿಸಲು ಆಗ್ರಹಿಸಲಿದೆ ಎಂದು ಅವರು ತಿಳಿಸಿದ್ದಾರೆ.

    Exit mobile version