ಬೆಂಗಳೂರು: ಕಾರ್ಗಿಲ್ ಯುದ್ಧ (Kargil War) ನಡೆದು 23 ವರ್ಷಗಳೇ ಕಳೆದಿವೆ. ಆದರೆ, ಪಾಕಿಸ್ತಾನದ ಕುತಂತ್ರವನ್ನು ಮಣಿಸಿ ನಮ್ಮ ದೇಶದ ಗಡಿಯನ್ನು ರಕ್ಷಿಸಿಕೊಂಡ ಆ ಮಹಾಸಾಹಸದ ನೆನಪುಗಳು (Kargil Memory) ಇವತ್ತಿಗೂ ಜೀವಂತವಾಗಿವೆ. ಈ ಯುದ್ಧದ ಬಳಿಕ ಹುಟ್ಟಿದ ಮಕ್ಕಳಲ್ಲಿ ಕೂಡಾ ಈ ಕಥನಗಳು ಸ್ಫೂರ್ತಿ ತುಂಬುತ್ತಿವೆ. ಆ ಮೂಲಕ ದೇಶಭಕ್ತ ನೈಜ ಹೀರೋಗಳ ಕಥೆಗಳು (Stories of Kargil Heroes) ಜನರಿಂದ ಜನರಿಗೆ ಹರಿದಾಡುತ್ತಿವೆ. ಈ ಕಾರ್ಗಿಲ್ ಯೋಧರ ಕಥನದಿಂದ ಪ್ರೇರಣೆ ಪಡೆದ ಬೆಂಗಳೂರಿನ ಇಬ್ಬರು ಕಾಲೇಜು ವಿದ್ಯಾರ್ಥಿಗಳು (Two College students from Bangalore) ಸೈಕಲ್ (Cycle travel) ಮೂಲಕ ದೇಶ ಸುತ್ತುತ್ತಾ ಅಲ್ಲಿಗೇ ಹೋಗಿ ಕಾರ್ಗಿಲ್‌ನ ಕಡಿದಾದ ಬೆಟ್ಟಗಳ ನಡುವೆ ನಿಂತು ವೀರ ಯೋಧರಿಗೆ ನಮನ ಸಲ್ಲಿಸಿದ್ದಾರೆ.
ಕಾರ್ಗಿಲ್ ಕದನದಲ್ಲಿ ವೀರ ಮರಣವನ್ನು ಅಪ್ಪಿದ ವೀರ ಯೋಧ ಕ್ಯಾಪ್ಟನ್ ವಿಜಯಂತ್ ಥಾಪರ್ (Captain Vijayant Thapar) ಅವರ ಸಾಹಸದಿಂದ ರೋಮಾಂಚಿತರಾದ ಬೆಂಗಳೂರಿನ ಇಬ್ಬರು ವಿದ್ಯಾರ್ಥಿಗಳು ಸೈಕಲ್ ಮೂಲಕ 3200 ಕಿ.ಮೀ. ಕ್ರಮಿಸಿ ಕಾರ್ಗಿಲ್‌ಗೆ ಹೋಗಿ ಅಲ್ಲಿನ ಎನ್‌ಸಿಸಿ ಯುನಿಟ್ ಮೂಲಕ ವೀರ ಯೋಧರಿಗೆ ನಮನ ಸಲ್ಲಿಸಿದ್ದಾರೆ. ಹೋಗಿ ಬರುವ ದಾರಿಯಲ್ಲಿ ಅವರು ಭಾರತೀಯ ಯೋಧರು ಮಾಡಿದ ಹೋರಾಟ, ತ್ಯಾಗ, ಬಲಿದಾನಗಳ ಬಗ್ಗೆ ಜಾಗೃತಿಯನ್ನು ಮೂಡಿಸಿದರು.
ರಾಮಯ್ಯ ಕಾಲೇಜಿನ ಬಿಬಿಎ ವಿದ್ಯಾರ್ಥಿಯಾಗಿರುವ ಕೃಷ್ಣನ್ ಎ ಮತ್ತು ಸೈಂಟ್ ಜೋಸೆಫ್ ಯುನಿವರ್ಸಿಟಿಯಲ್ಲಿ ಬಿಕಾಂ ವಿದ್ಯಾಭ್ಯಾಸ ಮಾಡುತ್ತಿರುವ ಪೆಡ್ಡಿ ಸಾಯಿ ಕೌಶಿಕ್ ಅವರೇ ಈ ರೀತಿಯಾಗಿ ಕಾರ್ಗಿಲ್‌ಗೆ ಪಯಣ ಬೆಳೆಸಿದವರು. ಈಗ ಎನ್‌ಸಿಸಿ ಕೆಡೆಟ್‌ಗಳಾಗಿರುವ ಅವರಿಗೆ ಮುಂದೆ ರಕ್ಷಣಾ ಪಡೆಗಳಲ್ಲಿ ಸೇವೆ ಸಲ್ಲಿಸುವ ಕನಸೂ ಇದೆ.
ಈ ಕನಸು ಹುಟ್ಟಿದ್ದು ಹೇಗೆ?
ʻʻನಾನು ಹೊಸ ವರ್ಷದ ದಿನದಂದು ಕ್ಯಾಪ್ಟನ್ ವಿಜಯಂತ್ ಥಾಪರ್ ಅವರ ಕುರಿತ ಒಂದು ಪುಸ್ತಕವನ್ನು ಓದುತ್ತಿದ್ದೆ. ವಿಜಯಂತ್ ಥಾಪರ್ ಅವರು 1999ರಲ್ಲಿ ನಡೆದ ಕಾರ್ಗಿಲ್ ಕದನದಲ್ಲಿ ವೀರಮರಣವನ್ನು ಅಪ್ಪಿದ್ದರು. ನನಗೆ ಅವರ ಹೋರಾಟದ ಕಥೆ ತುಂಬಾ ಇಷ್ಟವಾಯಿತು. ಅವರಿಗೆ ವೀರಚಕ್ರ ಪ್ರಶಸ್ತಿಯನ್ನು ಕೂಡಾ ನೀಡಿ ಗೌರವಿಸಲಾಗಿತ್ತು.. ಈ ಪುಸ್ತಕ ಓದಿದ ಬಳಿಕ ಮನೆಗೆ ಹೋಗಿ ಕೇಳಿದೆ; ಶೌರ್ಯ ಪ್ರಶಸ್ತಿ ಪಡೆದ ಯಾವುದಾದರೂ ಸೈನಿಕ ಹೆಸರು ಹೇಳಿ ಅಂತ. ಆದರೆ ಅವರಿಗೆ ಯಾರ ಹೆಸರೂ ಗೊತ್ತಿರಲಿಲ್ಲ. ನನ್ನ ಗೆಳೆಯರ ಬಳಿ ಹೋಗಿ ಕೇಳಿದೆ. ಅವರಿಗೆ ಕೂಡಾ ಒಂದು ಹೆಸರೂ ನೆನಪಿರಲಿಲ್ಲ. ಆಗ ನನಗೆ ಇಂಥ ವೀರ ಯೋಧರ, ದೇಶಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದವರ ಬಗ್ಗೆ ಜನರಿಗೆ ಅರಿವು ನೀಡುವ ಅಗತ್ಯವಿದೆ ಎಂದು ನನಗೆ ಅನಿಸಿತು. ಅವರು ಕೇವಲ ಒಂದೆರಡು ದಿನಗಳ ಕಾಲ ನೆನಪಲ್ಲಿ ಇರಬೇಕಾದವರಲ್ಲಿ, ದೇಶದ ಎಲ್ಲ ಜನರಿಗೆ ನಿರಂತರವಾಗಿ ನೆನಪಿನಲ್ಲಿ ಉಳಿಯುವಂತಾಗಬೇಕು, ಅದಕ್ಕಾಗಿ ಏನಾದರೂ ಮಾಡಬೇಕು ಅನಿಸಿತುʼʼ ಎಂದು ಸಾಯಿ ಕೌಶಿಕ್ ಅವರು ತಮ್ಮ ಸೈಕಲ್ ಪ್ರಯಾಣದ ಕನಸು ಹುಟ್ಟಿದ ಕಥೆಯನ್ನು ತೆರೆದಿಟ್ಟಿದ್ದಾರೆ.
ನಾವು ಮೇ ತಿಂಗಳಲ್ಲಿ ಸೈಕಲ್ ಯಾನ ಶುರು ಮಾಡಿದೆವು. ಜುಲೈ 26ರ ಕಾರ್ಗಿಲ್ ವಿಜಯ ದಿವಸ್‌ಗಿಂತ ಎರಡು ದಿನ ಮೊದಲು ಅಂದರೆ ಜುಲೈ 24ರಂದು ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ತಲುಪಿದೆವು. ನಾವು ಕನ್ಯಾಕುಮಾರಿ-ಶ್ರೀನಗರ ಹೆದ್ದಾರಿಯಲ್ಲಿ ಸಂಚಾರ ನಡೆಸಿದೆವು. ನಿಜವೆಂದರೆ ನಮ್ಮ ಪ್ರಯಾಣ ತುಂಬ ಕಷ್ಟಕರವಾಗಿತ್ತು. ಆದರೆ, ಅಂತಿಮವಾಗಿ ಗುರಿ ತಲುಪಿದಾಗ ಮ್ಯಾಜಿಕಲ್ ಅನುಭವವನ್ನು ಪಡೆದೆವು ಎಂದು ಕೃಷ್ಣನ್ ವಿವರಿಸಿದ್ದಾರೆ.
ದಾರಿಯುದ್ದಕ್ಕೂ ಸಂಕಷ್ಟಗಳ ಸರಮಾಲೆ
ನಿಜವೆಂದರೆ ನಮಗೆ ದಾರಿಯುದ್ದಕ್ಕೂ ಹಲವು ಸಮಸ್ಯೆಗಳು ಎದುರಾದವು. ನಾವು ಪಂಜಾಬ್ ತಲುಪುವ ಹೊತ್ತಿಗೆ ಅಲ್ಲಿ ಪ್ರವಾಹ ಎದುರಾಗಿತ್ತು. ಇದನ್ನು ದಾಟಿ ಮುಂದೆ ಸಾಗುವುದು ಸಾಧ್ಯವೇ ಇಲ್ಲ ಅಂತ ಅನಿಸಿತ್ತು. ಸಾಯಿ ಕೌಶಿಕ್‌ಗೆ ಟೈಫಾಯಿಡ್ ಬಂದು ಬಿಟ್ಟಿತ್ತು. ಹೀಗಾಗಿ ಪ್ರಯಾಣವನ್ನು ಎರಡು ವಾರ ನಿಧಾನಗೊಳಿಸಬೇಕಾಯಿತು. ದಾರಿ ಮಧ್ಯೆ ನನಗೆ ಅಪಘಾತವಾಗಿತ್ತು. ಹೀಗಾಗಿ ಸ್ವಲ್ಪ ವಿಶ್ರಾಂತಿ ಪಡೆಯಬೇಕಾಯಿತು. ಆದರೆ, ಅಂತಿಮವಾಗಿ ಒಂದು ದೊಡ್ಡ ಸಾಧನೆಯ ನೆಮ್ಮದಿ ನಮ್ಮದಾಯಿತು ಎಂದು ಖುಷಿಪಟ್ಟರು ಕೃಷ್ಣನ್.
ನಾವು ನಮ್ಮ ಎನ್‌ಸಿಸಿ ಮೂಲಕ ವಿಜಯ ದಿವಸ್ ಆಚರಣೆಯ ಕಾರ್ಯಕ್ರಮ ವಿಚಾರದಲ್ಲಿ ಸಂಪರ್ಕದಲ್ಲಿದ್ದೆವು. ಡ್ರಾಸ್ ತಲುಪುತ್ತಿದ್ದಂತೆಯೇ ನಮ್ಮ ಸಂಭ್ರಮಕ್ಕೆ ಪಾರವೇ ಇಲ್ಲ. ನಮಗೆ ಅಲ್ಲಿ ವಿಐಪಿ ಪಾಸ್‌ಗಳನ್ನು ಕೊಡಲಾಯಿತು. ಮಾತ್ರವಲ್ಲ ವೀರಯೋಧರ ಸಮಾಧಿಗಳ ಮೇಲೆ ಪುಷ್ಪ ಗುಚ್ಛ ಇಡುವ ಅವಕಾಶವನ್ನೂ ಒದಗಿಸಿದ್ದರು ಎಂದು ಅವರಿಬ್ಬರೂ ಖುಷಿ ಹಂಚಿಕೊಂಡರು.
ಇದನ್ನೂ ಓದಿ: Kargil war | ಕಾರ್ಗಿಲ್ ಕದನ ಕಲಿಗಳಿವರು